ಸಮವಶರಣದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ

96

Get real time updates directly on you device, subscribe now.


ತುಮಕೂರು: ನಗರದ ಹೊರ ವಲಯದ ಶ್ರೀ ಅತಿಶಯ ಕ್ಷೇತ್ರ ಮಂದರಗಿರಿಯಲ್ಲಿ ಭಾರತದಲ್ಲೇ ಪ್ರಥಮವಾದ ವಿಶಿಷ್ಟ ವಾಸ್ತು ರಚನೆಯೊಂದಿಗೆ ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವಶರಣವನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಸಮವಶರಣದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ ಮಾ. 8 ರಿಂದ 13 ರ ವರೆಗೆ 6 ದಿನಗಳ ಕಾಲ ನಡೆಯಲಿದೆ ಎಂದು ದಿಗಂಬರ ಜೈನ ಶ್ರೀಪಾರ್ಶ್ವನಾಥ ಜಿನಮಂದಿರ ಸಮಿತಿ ಅಧ್ಯಕ್ಷ ಎಸ್.ಜೆ.ನಾಗರಾಜ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂದರಗಿರಿಯಲ್ಲಿ 6 ದಿನಗಳ ಕಾಲ ನಡೆಯುವ ಈ ಸಮಾರಂಭ ರಾಷ್ಟ್ರಮಟ್ಟದ್ದಾಗಿದ್ದು, ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೈನ ಮುನಿಗಳು, ಮಾತಾಜಿಗಳು, ದಕ್ಷಿಣ ಭಾರತದ ವಿವಿಧ ಜೈನ ಮಠಗಳ ಪೀಠಾಧೀಶರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

ಮಂದರಗಿರಿಯಲ್ಲಿ ದಿಗಂಬರ ಜೈನ ಮುನಿಗಳಾದ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಮಹಾರಾಜ್ ಅವರ ನೇತೃತ್ವದಲ್ಲಿ ವಿಭಿನ್ನವಾದ ದಿವಾಕಾಶ ಸಮವಶರಣ ನಿರ್ಮಾಣಗೊಂಡಿದೆ. ಮೂರು ವರ್ಷಗಳಿಂದ ನಿರಂತರವಾಗಿ ಕಾಮಗಾರಿ ನಡೆಯುತ್ತಿದ್ದು, ನೂರಾರು ನುರಿತ ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ರಾಜಸ್ತಾನ, ತಮಿಳುನಾಡು, ಕೇರಳ ಕಾರ್ಕಳ, ಮಂಗಳೂರು ಭಾಗದಿಂದ ಬಂದಿರುವ ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ಕರ್ನಾಟಕ ರಾಜ್ಯದ ಸ್ಥಳೀಯ ಶಿಲೆಯನ್ನ ಸಮವಶರಣ ನಿರ್ಮಿಸಲು ಬಳಸಿಕೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಒರಿಸ್ಸಾದಿಂದ ಬಂದ ನುರಿತ ಕುಶಲಕರ್ಮಿಗಳು ಸುಂದರವಾದ ಮಹಾವೀರ ತೀರ್ಥಂಕರ ಮೂರ್ತಿಗಳ ಕೆತ್ತನೆ ಮಾಡಿದ್ದಾರೆ. ಧ್ಯಾನ ಸಮ್ಮುಖ ಹೊಂದಿರುವ ನಾಲ್ಕು ಮಹಾವೀರ ತೀರ್ಥಂಕರರ ಮೂರ್ತಿಗಳು ಬರೋಬ್ಬರಿ ಐದು ಟನ್ ತೂಕದಿಂದ ಕೂಡಿವೆ ಎಂದು ಮಾಹಿತಿ ನೀಡಿದರು.

ಮಾ.8 ರಿಂದ ಆರಂಭವಾಗಲಿರುವ ಪಂಚಕಲ್ಯಾಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸುವರು. ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಅಮೋಘಮಹಾರಾಜ್ ಮತ್ತು ವಿವಿಧ ಮಠಗಳ ಭಟ್ಟಾರಕ ಪಟ್ಟಾಚಾರ್ಯರು ಸಾನಿಧ್ಯ ವಹಿಸುವರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್, ಮುಂಬೈನ ರಾಕೇಶ್ ಜೈನ್, ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಎಸ್.ಜಿ. ನಾಗರಾಜ್ ಸೇರಿದಂತೆ ಸ್ಥಳೀಯ ಜನಪತಿನಿಧಿಗಳು ಭಾಗವಹಿಸುವರು.

ಮಾ.9 ರಂದು ಗರ್ಭಕಲ್ಯಾಣ ಮಹೋತ್ಸವ, ಮಾ.10 ರಂದು ಜನ್ಮ ಕಲ್ಯಾಣ ಮಹೋತ್ಸವ, ಮಾ.11 ರಂದು ದೀಕ್ಷಾ ಕಲ್ಯಾಣ ಮಹೋತ್ಸವ, ಮಾ.12 ರಂದು ಕೇವಲಜ್ಞಾನ ಕಲ್ಯಾಣ, ಮಾ.13 ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ ಎಂದು ವಿವರಿಸಿದರು.
ಸಮಾರೋಪ ಮಾ.13 ರಂದು ಸಮವಶರಣದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. 6 ದಿನಗಳ ಕಾಲ ನಡೆಯಲಿರುವ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.

ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಅಜಿತ್, ಶ್ರೀ ದಿಗಂಬರ ಜೈನ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಸುರೇಶ್ಕುಮಾರ್, ಬಾಹುಬಲಿ, ಪಾರ್ಶ್ವನಾಥ್, ಚಂದ್ರಕೀರ್ತಿ, ಜಿನೇಶ್, ಶೀತಲ್, ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಆರ್.ಜೆ. ಸುರೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!