ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 05 ರಂದು ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಫಲಾನುಭವಿಗಳ ಸಮಾವೇಶಕ್ಕೆ ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು,ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಕೈಗೊಂಡಿರುವ ಸುಮಾರು 300 ಕೋಟಿ ರೂಗಳ ಹಲವಾರು ಯೋಜನೆಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಮಾರ್ಚ್ 05 ರಂದು ಸುಮಾರು 600 ಕೋಟಿ ರೂ. ಗಳ ಯೋಜನೆಗಳನ್ನು ಜನತೆಗೆ ಅರ್ಪಿಸಲಿದ್ದಾರೆ. ಇದರಲ್ಲಿ ಸುಮಾರು 60 ಕೋಟಿ ರೂ. ವೆಚ್ಚದ ಮಹಾತ್ಮಗಾಂಧಿ ಕ್ರೀಡಾಂಗಣ, ಗ್ರಂಥಾಲಯ ಸೇರಿದೆ. ಇದರ ಜೊತೆಗೆ ಫಲಾನುಭವಿಗಳ ಸಮಾವೇಶದಲ್ಲಿ ಆರೋಗ್ಯ ಕರ್ನಾಟಕದ ಆಯುಷ್ಮಾನ ಭಾರತ್ ಕಾರ್ಡ್, ಪಿಎಂ ಕಿಸಾನ್, ರೈತ ಕಿಸಾನ್, ಬಡವರಿಗೆ ಹಕ್ಕುಪತ್ರ ವಿತರಣೆ, ಜನಸೇವಕ್, ಗ್ರಾಮ ಒನ್ ಯೋಜನೆ ಹೀಗೆ ಲಕ್ಷಾಂತರ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಹಾಯ ಸಿಕ್ಕಿದೆ. ಅಂತಹ ಫಲಾನುಭವಿಗಳು ಒಂದೆಡೆ ಸೇರಿಸಿ ಸರಕಾರದ ಯೋಜನೆ ಹೇಗೆ ಅವರ ಬದುಕಿಗೆ ಶಕ್ತಿ ತುಂಬಿದೆ ಎಂಬುದನ್ನು ಸಂವಾದದ ಮೂಲಕ ತಿಳಿದುಕೊಳ್ಳಲಿದ್ದಾರೆ ಎಂದರು.
ಜಿಲ್ಲೆಯ 25 ಸಾವಿರಕ್ಕೂ ಅಧಿಕ ಫಲಾನುಭವಿಗಳು ಮಾರ್ಚ್ 05ರ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಿಲ್ಲಾಡಳಿತ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ಬರುವವರಿಗೆ ಊಟದ ಜೊತೆಗೆ, ವಾಹನದ ವ್ಯವಸ್ಥೆ ಮಾಡಿದೆ. ಕುಂದು ಕೊರತೆಯಾಗದಂತೆ ಎಚ್ಚರಿಕೆ ವಹಿಸಿದೆ. ಇದರ ನಿರಂತರ ಮೇಲುಸ್ತುವಾರಿ ನಡೆಸಿ ಖುದ್ದಾಗಿ ಬಂದು ವೀಕ್ಷಿಸುವ ಕೆಲಸ ಮಾಡಿದ್ದೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಬಿಜೆಪಿ ಪಕ್ಷದ ಶಾಸಕ ಹಾಗೂ ಮಾಜಿ ಕೆಎಸ್ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಅವರ ಮಗ ಕಮಿಷನ್ ಸ್ವೀಕಾರ ಹಾಗೂ ಅವರ ಮನೆಯಲ್ಲಿ ಸಿಕ್ಕ 6 ಕೋಟಿ ಹಣದ ವಿಚಾರವಾಗಿ ತನಿಖೆ ನಡೆಯುತ್ತಿದೆ. ಇದರಲ್ಲಿ ಸರಕಾರ ಮೂಗು ತೂರಿಸುವುದಿಲ್ಲ. ಈ ಹಿಂದಿನ ಕಾಂಗ್ರೆಸ್ ಸರಕಾರದ ರೀತಿ ಅವರನ್ನು ಹಿಡಿ, ಇವರನ್ನು ಬಿಡು ಎಂಬ ಪ್ರಶ್ನೆಯೇ ಇಲ್ಲ. ತಾವು ಮಾಡಿರುವ ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳಲೆಂದೇ ಸಿದ್ದರಾಮಯ್ಯ ಲೋಕಾಯುಕ್ತ ಡಮ್ಮಿ ಮಾಡಿ ಎಸಿಬಿ ಜಾರಿಗೆ ತಂದರು. ಅಲ್ಲದೆ ತನಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡು ಏನೇನು ಮಾಡಿದರು ಎಂಬುದು ಗೊತ್ತಿದೆ. ನ್ಯಾಯಾಲಯವೇ ಎಸಿಬಿ ರದ್ದು ಮಾಡಿ ಲೋಕಾಯುಕ್ತವನ್ನು ತಂದಿದೆ. ಲೋಕಾಯುಕ್ತಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಿದ್ದೇವೆ. ಮಾಡಾಳು ವಿರೂಪಾಕ್ಷ ಅವರದ್ದು ವೈಯಕ್ತಿಕ ವಿಚಾರ, ಕಾಂಗ್ರೆಸ್ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಅರಸೀಕೆರೆಯಲ್ಲಿ ನಡೆದ ಬೆಂಗಾವಲು ವಾಹನ ಡಿಕ್ಕಿ ಎಂಬ ವಿಚಾರ ಸುಳ್ಳು, ನನಗೆ ಬೆಂಗಾವಲಿಗೆ ಇದ್ದ ಎರಡು ವಾಹನ ನನ್ನ ಜೊತೆಗೆ ಇವೆ. ಆದರೆ ನಮ್ಮ ಹಿಂದೆ ಬಂದ ಪೊಲೀಸ್ ವಾಹನವೊಂದು ಡಿಕ್ಕಿಯಾಗಿದೆ. ಅವರಿಗೆ ಕಾನೂನು ರೀತಿ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿಯಿಂದ ಆಗಿರುವ ಅಭಿವೃದ್ಧಿ ಕಾಮಗಾರಿಗಳಿಂದ ತುಮಕೂರು ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವುದು ದ್ಯೋತಕವಾಗಿದೆ. ಮಾರ್ಚ್ 05 ರಂದು ಬೆಳಗ್ಗೆ ಬಾಳೆಹೊನ್ನೂರು ಕಾರ್ಯಕ್ರಮ ಮುಗಿಸಿ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮಹಾತ್ಮ ಗಾಂಧಿ ಕ್ರೀಡಾಂಗಣ, ಗ್ರಂಥಾಲಯ ಮತ್ತು ಇನ್ ಕ್ಯಾಬೇಷನ್ ಸೆಂಟರ್, ಅಮಾನಿಕೆರೆ ಕಾಮಗಾರಿ ಹಾಗೂ ಪೊಲೀಸ್ ಇಲಾಖೆಯ ಸೆಂಟ್ರಲ್ ಕಮಾಂಡಿಂಗ್ ಸೆಂಟರ್ ಸೇರಿದಂತೆ ಹಲವಾರು ಕಾಮಗಾರಿ ಲೋಕಾರ್ಪಣೆ ಗೊಳಿಸಲಿದ್ದಾರೆ. ನಂತರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಸಚಿವರಾದ ನಾರಾಯಣಗೌಡ, ಆರಗ ಜ್ಞಾನೇಂದ್ರ, ಬೈರತಿ ಬಸವರಾಜು, ಸುಧಾಕರ್, ಮುನಿರತ್ನ, ಆರ್.ಅಶೋಕ್, ಸಂಸದರು, ಶಾಸಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ತುಮಕೂರಿನ ಐತಿಹಾಸಿಕ ತಾಣ ಸರಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ 1932ರಲ್ಲಿ ಮಹಾತ್ಮಗಾಂಧಿ ಅವರು ಬಂದು ಹೋಗಿರುವ ಜಾಗ, ಸದ್ಯ ಇಡೀ ನಗರಕ್ಕೆ ಇರುವ ಏಕೈಕ ಮೈದಾನ ಇದಾಗಿದೆ. ಸ್ಮಾರ್ಟ್ಸಿಟಿ ವತಿಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ಅವರಿಗೆ ಕೃತ್ಯಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಸಿಇಓ ಡಾ.ಕೆ.ವಿದ್ಯಾಕುಮಾರಿ, ಎಸ್ಪಿ ರಾಹುಲ್ಕುಮಾರ್, ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ, ಟೂಡಾ, ನಗರಪಾಲಿಕೆ ಆಯುಕ್ತರು ಹಾಜರಿದ್ದರು.
Comments are closed.