ಕುಣಿಗಲ್: ಹಾಲು ಒಕ್ಕೂಟದ ವತಿಯಿಂದ ರೈತರಿಗೆ ಆಯೋಜಿಸಿರುವ ಅರೋಗ್ಯ ಶಿಬಿರಕ್ಕೂ ರೈತರನ್ನು ಹೋಗದಂತೆ ತಡೆಯುವ ಮಟ್ಟಕ್ಕೆ ತಾಲೂಕಿನ ಕೀಳು ರಾಜಕಾರಣ ನಡೆಯುತ್ತಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ, ತುಮಕೂರು ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಡಿ.ಕೃಷ್ಣಕುಮಾರ್ ಹೇಳಿದರು.
ಶನಿವಾರ ತಾಲೂಕಿನ ಎಪಿಎಂಸಿ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದ ನೌಕರರ, ರೈತರ, ಸಾಮಾನ್ಯ ಕಲ್ಯಾಣ ಟ್ರಸ್ಟ್, ಬೆಂಗಳೂರು, ತುಮಕೂರು ವಿವಿಧ ವೈದ್ಯಕೀಯ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನ, ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಒಕ್ಕೂಟವೂ ಕೇವಲ ರೈತರಿಂದ ಹಾಲು ಹಾಕಿಸಿಕೊಂಡು ವ್ಯವಹಾರಕ್ಕಷ್ಟೆ ಸೀಮಿತವಲ್ಲ. ಹಾಲು ಉತ್ಪಾದಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ಬದ್ಧತೆಯಿಂದ ಶ್ರಮಿಸುತ್ತಿದೆ. ತಾಲೂಕಿನಲ್ಲಿ ಕೇವಲ ಹಾಲು ಉತ್ಪಾದಕರಿಗೆ ಮಾತ್ರವಲ್ಲದೆ ಎಲ್ಲಾ ವರ್ಗದ ರೈತರ ಆರೋಗ್ಯ ತಪಾಸಣೆಗೆ ಈ ಶಿಬಿರ ಹಮ್ಮಿಕೊಂಡಿದ್ದು ಮೂರುವರೆ ಸಾವಿರಕ್ಕೂ ಹೆಚ್ಚು ರೈತಾಪಿ ಬಾಂಧವರು ಭಾಗಿಯಾಗಿದ್ದಾರೆ. ಚುನಾವಣೆ ಮುನ್ನ ನಡೆಯುತ್ತಿರುವ ಈ ಶಿಬಿರದಲ್ಲಿ ರೈತರು ಪಾಲ್ಗೊಳ್ಳದಂತೆ ವಿರೋಧ ಪಕ್ಷದವರು ಒತ್ತಡ ಹಾಕಿದ್ದಾರೆ, ನಾಚಿಕೆ ಆಗಬೇಕು. ತಾವು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸತ್ಯ. ಮೂರು ಬಾರಿ ಸೋತಿರುವ ನನಗೆ ರೈತಾಪಿ ವರ್ಗದ ಜನರು ಬಾರಿ ಮತ ನೀಡಿ ಗೆಲ್ಲಿಸುವ ಮೂಲಕ ತಾಲೂಕಿನ ಜನರ ಸಮಸ್ಯೆ ಬಗೆಹರಿಸಲು ಮತ್ತಷ್ಟು ಶಕ್ತಿ ನೀಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕುರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ಜಿಲ್ಲೆಯ ಲಕ್ಷಾಂತರ ಮಂದಿ ಹಾಲು ಉತ್ಪಾದಕರ ಪೈಕಿ ಮಾಹೆಯಾನ 60ರಿಂದ ನೂರು ಮಂದಿ ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ. ಕೊವಿಡ್ ಸಮಯದಲ್ಲಿ 180ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದರು. ಹೈನುಗಾರರು ಸೇರಿದಂತೆ ರೈತರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಒಕ್ಕೂಟವು ಆರೋಗ್ಯ ಶಿಬಿರ ಮಾಡಲು ಸಂಕಲ್ಪಿಸಿ ವಾರ್ಷಿಕ 3 ಲಕ್ಷ ರೂ. ಶಿಬಿರಕ್ಕೆ ಅನುದಾನ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಬಹುಮಾನಕ್ಕೆ ಒಂದು ಲಕ್ಷ ನೀಡಲಾಗುತ್ತಿದೆ. ರೈತರು, ರೈತ ಮಹಿಳೆಯರು ತಮ್ಮ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸದೆ ಇಂತಹ ಶಿಬಿರದ ಸದುಪಯೋಗ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಗುಣಮಟ್ಟದ ಹಾಲು ಉತ್ಪಾದನೆ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ಮಾಹೆಯಾನ 75 ಕೋಟಿ ರೂ. ಹೈನುಗಾರರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲೆ ಅತಿಹೆಚ್ಚು ದರ ನೀಡುವ ಎರಡನೆ ಒಕ್ಕೂಟ ತುಮಕೂರು ಹಾಲು ಒಕ್ಕೂಟವಾಗಿದೆ. ಜಿಲ್ಲೆಯ ಒಕ್ಕೂಟದ ವ್ಯಾಪ್ತಿಯ 1.75 ಲಕ್ಷ ರಾಸುಗಳಿಗೆ 17 ಕೋಟಿ ರೂ. ವೆಚ್ಚದಲ್ಲಿ ಉಚಿತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಹಾಲು ಸಂಗ್ರಹಣೆ ನಿಟ್ಟಿನಲ್ಲಿ ಗುಣಮಟ್ಟ ಪರೀಕ್ಷೆ ಮಾಡುವ ಯಂತ್ರಗಳನ್ನು 9 ಕೋಟಿ ವೆಚ್ಚದಲ್ಲಿ 1300 ಸಂಘದ ಪೈಕಿ 900 ಸಂಘದಲ್ಲಿ ಅಳವಡಿಸಲಾಗಿದೆ. ರೈತರು ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಪಿ.ಪ್ರಸಾದ್, ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ, ಗುಬ್ಬಿ ಚಂದ್ರಶೇಖರ, ಹಳೆಮನೆ ಶಿವನಂಜಪ್ಪ, ವ್ಯವಸ್ಥಾಪಕ ಟಿ.ಎಂ.ಪ್ರಸಾದ್, ಉಪ ವ್ಯವಸ್ಥಾಪಕ ಚಂದ್ರಶೇಖರ, ಮಂಜುನಾಥ ಇತರರು ಉಪಸ್ಥಿತರಿದ್ದರು.
Comments are closed.