ತುಮಕೂರು: ಜ್ಞಾನಾರ್ಜನೆ ಜೊತೆಗೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಹಸಿವು ನೀಗಿಸುವ ಯೋಜನೆ ತುಮಕೂರು ವಿಶ್ವ ವಿದ್ಯಾಲಯ ಕೈಗೊಂಡಿರುವುದು ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಅಳವಡಿಸಿಕೊಳ್ಳುವ ಮಾದರಿಯಾಗಿದೆ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯವು ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಸಹಯೋಗದೊಂದಿಗೆ ಸೋಮವಾರ ಆಯೋಜಿದ್ದ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಭೋಜನ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕಾದರೆ ವಿದ್ಯೆಯ ಜೊತೆಗೆ ಆರೋಗ್ಯವೂ ಮುಖ್ಯ, ಪೌಷ್ಠಿಕಾಂಶಯುತ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ಈ ಯೋಜನೆ ಸ್ಥಳೀಯ ಆಹಾರ ಪದ್ಧತಿ ಬಳಸಿಕೊಂಡು ರೈತರನ್ನು ಪ್ರೋತ್ಸಾಹಿಸುವಂತಾಗಬೇಕು ಎಂದು ಹೇಳಿದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಆಹಾರ ನೀಡುವಂಥ ಶಕ್ತಿ ನಮ್ಮ ವಿವಿಗೆ ದೊರೆತಿರುವುದು ಭಾಗ್ಯವೇ ಸರಿ. ಸಾವಿರದ ಐನೂರು ವಿದ್ಯಾರ್ಥಿಗಳಿಗೆ ಸತ್ವಭರಿತ ಆಹಾರ ನೀಡುವುದಕ್ಕೆ ಕೈಜೋಡಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಮಾತನಾಡಿ, ಕೃಷ್ಣರಾಜ ಒಡೆಯರ್ ಆಳಿದ ನಾಡಿನಲ್ಲಿ ಇಂದು ಅನ್ನ ಸೇವೆ, ಜ್ಞಾನ ಸೇವೆಗೆ ಕೊರತೆಯೇ ಇಲ್ಲದಂತಾಗಿರುವುದು ನಮ್ಮ ಪುಣ್ಯ. ವಿವೇಕಾನಂದರು ಬಯಸಿದ ಯುವ ಜನತೆ ತುಮಕೂರು ವಿವಿಯಲ್ಲಿ ತಯಾರಾಗುತ್ತಿರುವುದು ದೇಶವೇ ತಿರುಗಿ ನೋಡುವ ಸಂಗತಿ. ಈ ಯೋಜನೆ ಭಾರತದಲ್ಲಿ ಮೊಟ್ಟ ಮೊದಲ ಪ್ರಯೋಗ ಎಂದರು.
ಶ್ರೀಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ, ತುಮಕೂರು ನೂರಾರು ವರ್ಷಗಳಿಂದ ಜ್ಞಾನ ಮತ್ತು ಅನ್ನಕ್ಕೆ ಒತ್ತು ಕೊಡುವ ದಾಸೋಹ ಮಾಡುತ್ತಾ ಬಂದಿದೆ. ಈ ನಾಡಿನ ಗುಣವೇ ಅಂಥದ್ದು, ನಮ್ಮ ಮಕ್ಕಳು ಹಸಿದು ಬಂದಾಗ ಅನ್ನ ನೀಡಿವ ಅವಕಾಶ ನಮಗಿಂದು ದೊರೆತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ನಾಡು ಸಮೃದ್ಧಿಯಿಂದ ಇರಬೇಕಾದರೆ ಉಳ್ಳವರ ಕೊಡುಗೆಯ ಅಗತ್ಯವಿದೆ. ಮಾನವೀಯತೆಯ ಅಂಶಗಳಿಗೆ ಸಾಕ್ಷಿಯಾಗಿ ಬಂದಿರುವ ಈ ಯೋಜನೆ ಮಧ್ಯಾಹ್ನದ ಊಟಕ್ಕಷ್ಟೇ ಸೀಮಿತವಾಗಬಾರದು. ಹಿರಿಯರು ಕಟ್ಟಿರುವ ಸಮಾಜದಲ್ಲಿ ಮೌಲ್ಯಯುತ ಬದುಕುನ್ನು ನಿರೂಪಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ರತ್ನಕಲಾ ಮಾತನಾಡಿ, ಪೋಷಕರಿಗೆ, ಶಿಕ್ಷಕರಿಗೆ ಮತ್ತು ನಮ್ಮ ದೇಶಕ್ಕೆ ಕೊಡುಗೆ ನೀಡಲು ಮೌಲ್ಯ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಅನ್ನ ಜ್ಞಾನ ನೀಡುವಷ್ಟು ಪ್ರತಿಯೊಬ್ಬರೂ ಶಕ್ತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್. ನಾಗಣ್ಣ, ಹೆಚ್.ಜಿ.ಚಂದ್ರಶೇಖರ್, ಆರ್.ಎಲ್.ರಮೇಶ್ ಬಾಬು, ನಟರಾಜ ಶೆಟ್ಟಿ ಬಿ.ಆರ್, ತಲ್ಲಂ ಬಾಬು, ಲಕ್ಷ್ಮಿತಲ್ಲಂ, ಸುಬ್ರಮಣ್ಯ ಶೆಟ್ಟಿ, ಕುಲಸಚಿವೆ ನಾಹಿದಾ ಜಮ್ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ. ಭಾಗವಹಿಸಿದ್ದರು.
Comments are closed.