ತುಮಕೂರು: ದನಗಳು ಕಸಾಯಿ ಖಾನೆಗಳಿಗೆ ಸಾಗಾಣಿಕೆ ಆಗುತ್ತಿಯೆಯೋ, ರೈತರು ಹಸುಗಳನ್ನು ಸಾಕಲು ತೆಗೆದುಕೊಂಡು ಹೋಗುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದ್ಯಾವುದನ್ನು ಪರಿಶೀಲಿಸದೆ ಗೋ ರಕ್ಷಣೆ ಸೋಗು ಹಾಕಿಕೊಂಡ ಕೆಲವು ಮಂದಿ ಮಾತ್ರ ಜಾನುವಾರು ತುಂಬಿದ ಲಾರಿಗಳನ್ನು ಅಡ್ಡ ಹಾಕಿ ವಸೂಲಿ ದಂಧೆಗಿಳಿದಿರುವುದು ಮಾತ್ರ ಆಗಾಗ ಬೆಳಕಿಗೆ ಬರುತ್ತಲೇ ಇದೆ. ಮಾರ್ಚ್ 5ರ ಭಾನುವಾರ ರಾತ್ರಿ ಇಂಥದ್ದೇ ಘಟನೆ ನಡೆದಿದ್ದು, ಇದಕ್ಕೆ ಪೊಲೀಸರು ಸಾಥ್ ನೀಡಿ ಬಿಟ್ಟರಾ ಎಂಬ ಅನುಮಾನವೂ ಮೂಡತೊಡಗಿದೆ.
ಹೌದು, ಬೆಳಗಾಂ, ಸೊಲ್ಲಾಪುರ ಭಾಗದ ಸುಮಾರು ಹದಿನೈದಿಪ್ಪತ್ತು ರೈತರು ಕೋಲಾರ ತಾಲ್ಲೂಕಿನ ಚಿಂತಾಮಣಿಯಲ್ಲಿ ಸಾಕಾಣಿಕೆ ಮಾಡಲು ಎಂಬತ್ತಕ್ಕು ಹೆಚ್ಚು ಹಸುಗಳನ್ನು ಖರೀದಿಸಿದ್ದಾರೆ. ಖರೀದಿ ರಸೀದಿ ಮತ್ತು ಸಾಗಾಟ ಮಾಡಲು ತೊಂದರೆ ಯಾಗದಂತೆ ಸರ್ಕಾರದ ನಿಯಮದಂತೆ ಪತ್ರಗಳನ್ನು ಹೊಂದಿದ್ದಾರೆ. ಹೀಗೆ ಹಸುಗಳನ್ನು ತುಂಬಿಕೊಂಡ ಹನ್ನೊಂದು ಲಾರಿಗಳು ದಾಬಸ್ ಪೇಟೆ ಮೂಲಕವಾಗಿ ತುಮಕೂರು ಟೋಲ್ ಬಳಿಗೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಬಂದಿವೆ. ಇದನ್ನೇ ಕಾಯುತ್ತಿದ್ದ ಸೋ ಕಾಲ್ಡ್ ಗೋ ರಕ್ಷಕರ ಗುಂಪು ಲಾರಿಗಳನ್ನು ಅಡ್ಡಗಟ್ಟಿ ನಿಲ್ಲಿಸಿವೆ. ಕಸಾಯಿ ಖಾನೆಗಳಿಗೆ ಹಸುಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಾ ಎಂದು ಅಬ್ಬರ ಶೂರು ಮಾಡಿವೆ. ಅವರಿಗೆ ವಾಸ್ತ ಹೇಳಿದರೂ ಅರ್ಥ ಮಾಡಿಕೊಳ್ಳದೆ ಕಿತಾಪತಿ ತೆಗೆದಿದ್ದಾರೆ. ನಂತರ ಒಂದು ಲಾರಿಗೆ 5 ಸಾವಿರ ಕೊಟ್ಟರೆ ಬಿಡುವುದಾಗಿ ತಿಳಿಸಿ ಹಣ ವಸೂಲಿಗೆ ಇಳಿದಿದ್ದಾರೆ. ಒಂದಷ್ಟು ರೈತರ ಹಣ ನೀಡಿದ್ದಾರೆ. ಕೆಲ ರೈತರ ಹಣ ನೀಡಲು ನಿರಾಕರಿಸಿದ್ದಾರೆ. ಈ ವಿಚಾರ ತಿಳಿದ ದಲಿತ ಸಂಘಟನೆಯವರು ಸ್ಥಳಕ್ಕೆ ಆಗಮಿಸಿ ಹಣ ವಸೂಲಿ ಮಾಡಿದ್ದ ಪುಂಡನಿಂದ ರೈತರಿಗೆ ಹಣ ವಾಪಸ್ ಕೊಡಿಸಿದ್ದಾರೆ. ಇದಾದ ನಂತರ ಶುರುವಾಗಿದ್ದೇ ಇನ್ನೊಂದು ಆಟ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ನಿರಾಶರಾದ ಗೋ ರಕ್ಷಕ ನಾಟಕಗಾರರು ಪೊಲೀಸರಿಗೆ ದೂರು ಕೊಡುವ ನೆಪದಲ್ಲಿ ಮತ್ತೆ ಲಾರಿಗಳನ್ನು ಪೊಲೀಸರ ಮೂಲಕ ಹಿಡಿಸಿ ನಗರದ ಚಿಲುಮೆ ಸಮುದಾಯ ಭವನದ ಆವರಣಕ್ಕೆ ತಂದು ನಿಲ್ಲಿಸುವಂತೆ ಮಾಡಿದ್ದಾರೆ. ಟೌನ್ ಪೊಲೀಸ್ ಠಾಣೆ ಪೊಲೀಸರು ರೈತರ ಸಮಸ್ಯೆ ಆಲಿಸದೆ ವಾಸ್ತವವನ್ನು ತಿಳಿಯದೆ ವರ್ತಿಸಿದ್ದಾರೆ. ಭಜರಂಗದಳದವರು ನಮಗೆ ದೂರು ಕೊಟ್ಟಿದ್ದಾರೆ. ಅದರಂತೆ ನಾವು ಲಾರಿಗಳನ್ನು ಹಿಡಿದಿದ್ದೇವೆ ಎಂದು ಜಂಬದಿಂದ ವರ್ತಿಸಿದ್ದಾರೆ. ಮಾಧ್ಯಮದವರು ಎಸ್ಪಿ ರಾಹುಲ್ಕುಮಾರ್ ಅವರಿಗೆ ಕರೆ ಮಾಡಿದರೂ ಅವರು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಹಸುಗಳಿಗೆ ನೀರು, ಮೇವಿಲ್ಲದೆ ಭಾನುವಾರ ಮಧ್ಯರಾತ್ರಿ 12 ಗಂಟೆವರಿಗೂ ರೋಧಿಸಿವೆ. ಇಷ್ಟರಲ್ಲಾಗಲೇ ಸಂಘಟನೆ ಹೆಸರೇಳಿಕೊಂಡು ಕೆಲವು ಪುಡಾರಿಗಳು ಲಾರಿ ನಿಲ್ಲಿಸಿದ್ದ ಜಾಗದಲ್ಲಿ ತಮ್ಮ ಪುಂಡಾಟಿಕೆ ಮೆರೆದಿದ್ದಾರೆ. ಪೊಲೀಸರು ಲಾಠಿ ಬೀಸಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದೆಲ್ಲದರ ಮಧ್ಯೆ ಹಸು ಖರೀದಿಸಿದ ರೈತರು ದಿಕ್ಕುತೋಚದೆ ರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ. ಕರು ಹಾಕಬೇಕಿರುವ ಸಾಕಷ್ಟು ಹಸುಗಳಿಗೆ, ಅವುಗಳಿಗೆ ತೊಂದರೆಯಾಗುತ್ತದೆ ಎಂದರೂ ಪೊಲೀಸರ ಮನಸ್ಸು ಕರಗಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಂತರ ಮಧ್ಯರಾತ್ರಿ ಹಸುಗಳನ್ನು ಶಿರಾ ಬಳಿಯ ಗೋಶಾಲೆಯೊಂದಕ್ಕೆ ಕಳುಹಿಸಿದ ಪೊಲೀಸರು ನಮ್ಮ ಕೆಲಸ ಮುಗಿಯಿತು ಎಂದು ಕೈ ತೊಳೆದುಕೊಂಡಿದ್ದಾರೆ. ವಿಪರ್ಯಾಸ ಎಂದರೆ ಹಸು ಕಳ್ಳರು ಯಾರು? ಕಟುಕರು ಯಾರು? ದಂಧೆಕೋರರು ಯಾರು? ಹಸು ಸಾಕಾಣಿಕೆ ಮಾಡೋರು ಯಾರು ಎಂಬುದನ್ನು ತಿಳಿಯದಾಗಿ ಬಿಟ್ಟರಾ ನಮ್ಮ ಪೊಲೀಸರು ಮತ್ತು ಅಧಿಕಾರಿಗಳು ಎಂಬ ಪ್ರಶ್ನೆ ಮೂಡದೇ ಇರದು!
Comments are closed.