ತುಮಕೂರು: ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯವಾಗಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸರ್ವೇಲೆನ್ಸ್ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆರೋಗ್ಯವಂತ ಮಹಿಳೆಯರಿಂದ ಆರೋಗ್ಯಕರ ಭಾರತ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಸೈಕ್ಲೋಥಾನ್ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಮಹಿಳೆಯರನ್ನು ಸಮಾಜದಲ್ಲಿ ಮುಂದೆ ತರಬೇಕು. ಈ ನಿಟ್ಟಿನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಎಲ್ಲರೂ ಗಮನ ಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಮಹಿಳೆಯರನ್ನು ಕಾಯಿಸದೆ ವೈದ್ಯರು ಮತ್ತು ಶುಶ್ರೂಷಕರು ಸಮರ್ಪಕವಾಗಿ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡ ಮಹಿಳೆಯರೇ ಬರುತ್ತಾರೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಒಂದು ಬಾರಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಮತ್ತೊಮ್ಮೆ ಸರ್ಕಾರಿ ಆಸ್ಪತ್ರೆಗೆ ಬರಲು ಬಡ ಮಹಿಳೆಯರು ಹಿಂದೇಟು ಹಾಕುತ್ತಾರೆ. ಮೊದಲೇ ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಕೊಡುವುದು ಕಡಿಮೆ, ಸಣ್ಣಪುಟ್ಟ ಕಾಯಿಲೆಗಳನ್ನು ಸಹಿಸಿಕೊಂಡೇ ಜೀವನ ನಡೆಸುತ್ತಾರೆ. ಆದ್ದರಿಂದ ಎಲ್ಲಾ ವೈದ್ಯರು, ಶುಶ್ರೂಷಕರು ಮಹಿಳೆಯರು ತೊಂದರೆ ಅನುಭವಿಸಿ ಬಂದಾಗ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಆರ್.ವಿ.ಮೋಹನ್ದಾಸ್ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲಾಸ್ಪತ್ರೆಯಿಂದ ಸೈಕಲ್ ಜಾಥಾ ಕಾರ್ಯಕ್ರಮವನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿದ್ದೆವು. ಆರೋಗ್ಯವಂತ ಮಹಿಳೆಯರಿಂದ ಆರೋಗ್ಯಕರ ಭಾರತ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಜಾಥಾದಲ್ಲಿ ಡಿಹೆಚ್ಓ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಸೇರಿದಂತೆ ಸರ್ಕಾರಿ ಆಸ್ಪತ್ರೆಯ ಮಹಿಳಾ ವೈದ್ಯರು, ಶುಶ್ರೂಷಕಿಯರು ಪಾಲ್ಗೊಂಡಿದ್ದರು.
ಸೈಕಲ್ ಜಾಥಾವು ಜಿಲ್ಲಾಸ್ಪತ್ರೆಯಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮುಖೇನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿವರೆಗೆ ಸಾಗಿತು.
Comments are closed.