ಪತಿಯರ ಗೆಲುವಿಗೆ ಪತ್ನಿಯರ ತಂತ್ರಗಾರಿಗೆ

ರಾಜಕೀಯ ಅಖಾಡಲ್ಲಿ ಮಡದಿಯರ ಪವರ್- ಕುಣಿಗಲ್ನಲ್ಲಿ ಗೆಲ್ಲುವ ಕುದುರೆ ಯಾರು?

136

Get real time updates directly on you device, subscribe now.


ಕುಣಿಗಲ್: ವಿಶ್ವ ಮಹಿಳಾ ದಿನಾಚರಣೆ ಎಲ್ಲೆಡೆ ಅದ್ದೂರಿಯಾಗಿ ನಡೆಯುತ್ತಿದ್ದು, ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮದೆ ಆದ ರೀತಿಯಲ್ಲಿ ಹೆಸರು ಮಾಡಿದ್ದಾರೆ. ತಾಲೂಕಿನ ರಾಜಕೀಯ ರಂಗದಲ್ಲೂ ಸಾಕಷ್ಟು ಅವಕಾಶ ಇದ್ದರೂ ಮಹಿಳಾ ಶಾಸಕಿಯರಾಗುವ ಅವಕಾಶದಿಂದಲೂ ಮಹಿಳೆಯರು ವಂಚಿತರಾಗಿದ್ದಾರೆ. ಆದರೂ ರಾಜಕಾರಣದಲ್ಲಿ ಪತಿಯರ ಪರವಾಗಿ ಪತ್ನಿಯರು ರಾಜಕಾರಣದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಸಂಚಾರ ಮಾಡುತ್ತಿರುವುದು ವಿಶೇಷವಾಗಿದೆ.

ತಾಲೂಕಿನ ರಾಜಕಾರಣದಲ್ಲಿ ಮಾಜಿ ಸಚಿವ, ಸಾಲು ಮರಗಳ ಸರದಾರ ವೈ.ಕೆ.ರಾಮಯ್ಯ ಉತ್ತಮ ಹೆಸರು ಮಾಡಿದ್ದರು. ಅವರ ನಿಧನದ ನಂತರ ಅವರ ಪತ್ನಿ ಅನಸೂಯಮ್ಮ ಅವರು ಸಕ್ರೀಯ ರಾಜಕಾರಣಕ್ಕೆ ಬಂದು ಶಾಸಕ ಸ್ಥಾನದ ಟಿಕೆಟ್ ಗೂ ಪೈಪೋಟಿ ನಡೆಸಿ ಸಿಗದೆ ಬಿಜೆಪಿ ಸೇರ್ಪಡೆಗೊಂಡರು. ನಂತರ ಮರು ಅವಕಾಶ ಬಯಸಿ ಕಾಂಗ್ರೆಸ್ನಿಂದ ಆಕಾಂಕ್ಷಿತರಾದರೂ ಪಕ್ಷ ಅವರಿಗೆ ಜಿಪಂ ಟಿಕೆಟ್ ಕೊಟ್ಟು ಗೆಲ್ಲಿಸಿ ಅವರನ್ನು ಜಿಪಂ ಸದಸ್ಯೆಗೆ ಸೀಮಿತಗೊಳಿಸಿತು. ತಾಲೂಕಿನಲ್ಲಿ ಪುರುಷ ಮತದಾರರಿಗೂ ಸರಿ ಸಮಾನವಾಗಿ ಎರಡು ಮೂರು ಸಾವಿರದ ಅಂತರದಲ್ಲಿ ಮಹಿಳಾ ಮತದಾರರಿದ್ದಾರೆ. ತಾಲೂಕನ್ನು ಪುರುಷ ಅಭ್ಯರ್ಥಿಗಳೆ ಪ್ರತಿನಿಧಿಸಿದ್ದು ಮಹಿಳೆ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವಕಾಶ ವಂಚಿತ ಆಗುವಂತಾಗಿದೆ. ಆದರೂ ಇಂದು ಕಣದಲ್ಲಿರುವ ಪುರುಷರ ಬೆನ್ನಲುಬಾಗಿ ನಿಂತ ಮಹಿಳೆಯರು ತಮ್ಮ ಪತಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಹಾಲಿ ಶಾಸಕ ಡಾ.ರಂಗನಾಥ್ ಪತ್ನಿ ಡಾ.ಸುಮಾ ರಂಗನಾಥ್ ವೃತ್ತಿಯಲ್ಲಿ ವೈದ್ಯರಾದರೂ ಚುನಾವಣೆ ಸಮಯದಲ್ಲಿ ಕ್ಷೇತ್ರದ ತುಂಬೆಲ್ಲಾ ಮಿಂಚಿನ ಸಂಚಾರ ನಡೆಸಿ ಮಹಿಳಾ ಮತದಾರರ ಸೆಳೆಯಲು ಶ್ರಮಿಸುತ್ತಿದ್ದಾರೆ. ಇನ್ನೇನು ಚುನಾವಣೆ ಘೊಷಣೆಯಾಗುವ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಸ್ತ್ರೀಶಕ್ತಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಪ್ರತ್ಯೇಕ ಸಮಾರಂಭ ಆಯೋಜಿಸಿ ಸೀರೆ ವಿತರಿಸಿ ಪತಿಯ ಗೆಲುವಿಗೆ ತಮ್ಮದೆ ಆದ ರೀತಿಯಲ್ಲಿ ತಂತ್ರ ರೂಪಿಸುತ್ತಿದ್ದಾರೆ.

ಇನ್ನು ಈಗಾಗಲೆ ಬಿಜೆಪಿಯಿಂದ ಮೂರು ಬಾರಿ ನಿಂತು ಪರಾಜಿರಾಗಿ ನಾಲ್ಕನೆ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಅವರ ಪತ್ನಿ ವಿಜಯಲಕ್ಷ್ಮೀ ಈ ಹಿಂದೆ ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಗ್ರಾಮಾಂತರ ಪ್ರದೇಶದ ಜನರ ನಾಡಿಮಿಡಿತ ಬಲ್ಲವರಾಗಿದ್ದು, ಕಳೆದ ಎರಡು ತಿಂಗಳಿನಿಂದ ಗ್ರಾಮಾಂತರ ಪ್ರದೇಶದಲ್ಲಿ ಪತಿಯ ಪರ ಪ್ರಚಾರ ಬಿರುಸಿನಿಂದ ನಡೆಸುತ್ತಿದ್ದು ಪ್ರತಿಯೊಂದು ಗ್ರಾಮದಲ್ಲಿ ವಿಶೇಷವಾಗಿ ಮಹಿಳಾ ಮತದಾರರ ಸೆಳೆಯಲು ಪಕ್ಷ ಹಾಗೂ ಡಿ.ಕೃಷ್ಣಕುಮಾರ್ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ತಾಲೂಕಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಪತಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಬಿಜೆಪಿ ಪಕ್ಷದಿಂದಲೇ ಟಿಕೆಟ್ ಆಕಾಂಕ್ಷಿಯಾಗಿರುವ ಉದ್ಯಮಿ ಹೆಚ್.ಡಿ.ರಾಜೇಶಗೌಡರ ಪತ್ನಿ ಲೀಲಾ ಅವರು ಉದ್ಯಮಿಯಾಗಿದ್ದು, ಪತಿಯ ಕನಸು ನನಸು ಮಾಡುವ ಜೊತೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಯೋಜನೆಗಳ ಹಾಕಿಕೊಂಡು ತಮ್ಮದೆ ಆದ ರೀತಿಯಲ್ಲಿ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಪತಿಯ ಗೆಲುವಿಗೆ ಪ್ರಚಾರ ನಡೆಸುತ್ತಿದ್ದಾರೆ. ಹುತ್ರಿದುರ್ಗ ಹೋಬಳಿ ಮಟ್ಟದ ಸ್ತ್ರೀಶಕ್ತಿ ಸಮಾವೇಶ ಹಮ್ಮಿಕೊಂಡು ಸಾವಿರಾರು ಸ್ತ್ರೀಯರಿಗೆ ಬಾಗಿನ ವಿತರಿಸಿದ್ದು ಮುಂದಿನ ದಿನಗಳಲ್ಲಿ ಪತಿಯ ಪರ ಪ್ರಚಾರಕ್ಕೆ ಹಲವು ಹೋಬಳಿಗಳಲ್ಲೂ ವಿನೂತನ ರೀತಿಯಲ್ಲಿ ಅಬ್ಬರದ ಪ್ರಚಾರದ ಸಿದ್ಧತೆ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ಮಹಿಳಾ ಮತದಾರರೂ ಹೆಚ್ಚಿದ್ದರೂ ಸ್ತ್ರೀ ಶಕ್ತಿಯು ಮತದಾನದ ಸಮಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾರಣ ಎಲ್ಲಾ ಪಕ್ಷಗಳು ಮಹಿಳೆಯರ ಮತ ಸೆಳೆಯಲು ತಮ್ಮದೆ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದು ಪುರುಷ ಅಭ್ಯರ್ಥಿಗಳ ಹಿಂದೆ ಬೆನ್ನುಲುಬಾಗಿ ನಿಂತು ಅವರ ಗೆಲುವಿಗೆ, ಯಶಸ್ಸಿಗೆ ಪರೋಕ್ಷವಾಗಿ ಶ್ರಮಿಸುತ್ತಿರುವ ಪತ್ನಿಯರು ಮಹಿಳಾ ಮತದಾರರನ್ನು ಎಷ್ಟರ ಮಟ್ಟಿಗೆ ಗೆಲ್ಲುವರೋ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!