ತುಮಕೂರು: ಮಹಿಳೆಗೆ ಯಾವ ಮನೆಯಲ್ಲಿ ಹೆಚ್ಚು ಗೌರವ ಕೊಟ್ಟು ನೋಡಿಕೊಳ್ಳುತ್ತಾರೋ ಆ ಮನೆಯ ಮಕ್ಕಳು ಹಾಗೂ ಕುಟುಂಬ ಉಜ್ವಲವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಿರುತ್ತಾಳೆ. ಮಕ್ಕಳು ತಮ್ಮ ಬಾಲ್ಯ ಜೀವನದಲ್ಲಿ ತಾಯಿಯನ್ನು ನೋಡಿ ಕಲಿಯುತ್ತಾರೆ. ತಾಯಿ ಹೇಗೆ ಕಲಿಸುತ್ತಾಳೆ ಹಾಗೆ ಮಕ್ಕಳು ಕಲಿತು ಬಿಡುತ್ತಾರೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಜವಾಬ್ದಾರಿ ತಾಯಿಯದ್ದು ಎಂದರು.
ಹಿಂದಿನ ಕಾಲದಲ್ಲಿದ್ದ ಅನಿಷ್ಟ ಪದ್ಧತಿಯಾದ ಸತಿ ಸಹಗಮನ ಪದ್ಧತಿ ರಾಜ ರಾಮಮೋಹನ್ ರಾಯ್ ಅವರು ಆಗಲೆ ಅದರ ವಿರುದ್ಧ ಧ್ವನಿ ಎತ್ತಿ ಅದನ್ನು ನಿಷೇಧ ಮಾಡಿದ್ದರು. ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸಮಾನವಾದ ಅವಕಾಶ ನೀಡಲಾಗಿದೆ. ಇತ್ತೀಚೆಗೆ ನಡೆದ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪುರುಷರಿಗಿಂತ ಮಹಿಳೆಯರೆ ಹೆಚ್ಚು ಪದಕ ಪಡೆದುಕೊಂಡಿದ್ದಾರೆ. ಹೆಣ್ಣನ್ನು ಹಿಂದಿನ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದೇವೆ. ಅದರಂತೆ ವೇದ ಉಪನಿಷತ್ಗಳಲ್ಲಿ ಮೊದಲಿಗೆ ಮಾತೃ ದೇವೋಭವ ಅಂತ ಪ್ರಾರಂಭವಾಗುತ್ತದೆ. ಅದನ್ನು ಎಲ್ಲರೂ ಅಕ್ಷರಶಃ ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಪ್ರತಿ ವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆ ಒಂದು ಘೋಷಣೆ ಹೊರಡಿಸುತ್ತದೆ. ಅದರಂತೆ ಈ ವರ್ಷ ಸಮಾನತೆ ಅಪ್ಪಿಕೊಳ್ಳುತ್ತೇವೆ ಎನ್ನುವ ಘೋಷಣೆ ಹೊರಡಿಸಿದೆ. ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರು ಸಮಾನರೆಂದು ಒಪ್ಪಿಕೊಳ್ಳಬೇಕಾದರೆ ಪುರುಷರ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕು. ಸಮಾನತೆಯನ್ನು ಬಾಯಿ ಮಾತಿನಲ್ಲಿ ಹೇಳದೆ ಎಲ್ಲಾ ಕಡೆಯೂ ಪಾಲಿಸಬೇಕು ಎಂದರು.
ಮಹಿಳೆಯ ಬದುಕು ಅಷ್ಟೊಂದು ಸುಲಭವಲ್ಲ. ಎಲ್ಲಾ ಹಂತಗಳಲ್ಲಿಯೂ ಕಷ್ಟ ಎದುರಿಸುತ್ತಾ ಬಂದಿದ್ದಾಳೆ. ಆದ್ದರಿಂದ ಅವಳಿಗೆ ಸಮಾಜದಲ್ಲಿ ಒಂದು ಘನತೆ, ಗೌರವ ಕೊಡಬೇಕು. ಹೆಣ್ಣಿನ ಮೇಲೆ ಆಗುವ ದೈಹಿಕ ದೌರ್ಜನ್ಯ ಹಾಗೂ ಮಾನಸಿಕ ದೌರ್ಜನ್ಯ ಎದುರಿಸುತ್ತಾಳೆ. ಇದರ ವಿರುದ್ಧ ಪ್ರತಿಭಟಿಸುವವರ, ಧ್ವನಿ ಎತ್ತುವವರ ಸಂಖ್ಯೆ ಕಡಿಮೆ, ಹೆಚ್ಚಿನ ಮಹಿಳೆಯರು ಕುಟುಂಬದ ಗೌರವ ಉಳಿಸುವುದಕ್ಕಾಗಿ ಹಾಗೂ ಮಕ್ಕಳ ಒಳಿತಿಗಾಗಿ ತಮ್ಮ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಆಕೆಯೇ ನೋವನ್ನು ಅನುಭವಿಸಿ ಕುಟುಂಬವನ್ನು ಮುನ್ನಡೆಸುತ್ತಾಳೆ. ಒಂದು ಹೆಣ್ಣು ಕಲಿತರೆ, ಕುಟುಂಬವೊಂದು ಕಲಿತಂತೆ ಎಂಬ ಗಾದೆಯಂತೆ ಹೆಣ್ಣುಮಕ್ಕಳು ಶಿಕ್ಷಣವಂತರಾಗಿ ತನ್ನ ಸ್ವತಂತ್ರ ಜೀವನ ರೂಪಿಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಹೆಣ್ಣು ಒಂದು ಮನೆತನದ ಗೌರವದ ಜೊತೆಗೆ ನಮ್ಮ ಧರ್ಮದಲ್ಲಿರುವ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುತ್ತಾಳೆ. ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದೆ ಇಬ್ಬರಿಗೂ ಸಮಾನ ಗೌರವ ಮತ್ತು ಅವಕಾಶಗಳನ್ನು ರಾಜ್ಯಾಂಗ ನೀಡಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಗ್ರಾಮೀಣ ಭಾಗದಲ್ಲಿ ಇನ್ನೂ ಶೇ.4 ರಷ್ಟಿದೆ. ನಗರಗಳಲ್ಲಿ ಶೇ.60 ರಷ್ಟಿದೆ ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಬೇಕು. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಎಲ್ಲಾ ರೀತಿಯ ಅವಕಾಶ ಕೊಟ್ಟಿದೆ ಎಂದರು.
ಕುಟುಂಬದಲ್ಲಿ ಹೆಣ್ಣು ಹೇಗೆ ನಡೆದುಕೊಳ್ಳುತ್ತಾಳೋ ಹಾಗೇ ಮಕ್ಕಳು ಪಾಲಿಸುತ್ತಾರೆ. ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡಬೇಕು. ಇಡೀ ಜಗತ್ತಿನಲ್ಲಿ ಮಕ್ಕಳನ್ನು ತಿದ್ದಿ, ಬುದ್ಧಿ ಹೇಳುವ ಅಧಿಕಾರವಿರುವುದು ತಾಯಿಗೆ ಮಾತ್ರ, ಆದುದರಿಂದ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುವುದರ ಜೊತೆಗೆ ಸುಸಂಸ್ಕೃತವಂತರನ್ನಾಗಿ ಮಾಡಬೇಕು. ಹೆಣ್ಣು ಈ ದೇಶದ ಕಣ್ಣು, ಆದ್ದರಿಂದ ಮುಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಪ್ರತಿ ಹಳ್ಳಿಗಳಲ್ಲಿ, ಪ್ರತಿ ವಾರ್ಡ್ಗಳಲ್ಲಿಯೂ ಆಚರಿಸುವಂತೆ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹಾಗೂ ಮಕ್ಕಳ ತಜ್ಞ ಡಾ.ಎಂ.ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎಸ್.ಶ್ರೀಧರ, ಜಿಲ್ಲಾ ನಿರೂಪಣಾ ಅಧಿಕಾರಿ ಓಂಕಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರ, ದೇವೆಂದ್ರಪ್ಪ, ಸುಮಲತಾ ಹಾಜರಿದ್ದರು.
Comments are closed.