ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ವೆಂಕಟೇಶ್ವರಲು

157

Get real time updates directly on you device, subscribe now.


ತುಮಕೂರು: ಸಮಾಜದ ಸಕಾರಾತ್ಮಕ ಬದಲಾವಣೆಯ ರೂಪವೇ ಹೆಣ್ಣು, ಸ್ವಾವಲಂಬಿಯಾಗಿ ಬದುಕು ನಡೆಸಲು ಆಕೆಯನ್ನು ಸದೃಢಳನ್ನಾಗಿಸಿ, ಸವಾಲುಗಳನ್ನು ಎದುರಿಸಿ ಸ್ವಂತ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯ ರೂಪಿಸಬೇಕು ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ವಿವಿ ವಿಜ್ಞಾನ ಕಾಲೇಜಿನ ಮಹಿಳಾ ಅಧ್ಯಯನ ವಿಭಾಗ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಅಧ್ಯಯನ ಕೇಂದ್ರದ ಸುದ್ದಿ ಪತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯವಿದೆ. ತನ್ನ ಸಂಸಾರವನ್ನೂ ಮೀರಿ ದೇಶದ ಸಂಸ್ಕಾರದ ಬೆನ್ನೆಲುಬಾಗಿ ನಿಂತ ಸಾವಿರ ಸಾವಿರ ಧೀರ ಮಹಿಳೆಯರು ಪುರುಷರಿಗೂ ಮಾದರಿಯಾಗಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಕಾರ್ಯ ಸಾಧನೆಗೆ ಎಂದಿಗೂ ತಡೆಯಾಗಬಾರದು ಎಂದರು.

ತುಮಕೂರು ವಿಶ್ವ ವಿದ್ಯಾಲಯ ಕುಲಸಚಿವೆ ನಾಹಿದಾ ಜಮ್ಜಮ್ ಮಾತನಾಡಿ, ಮಾನಸಿಕವಾಗಿ ದೈಹಿಕವಾಗಿ ಹೆಣ್ಣಿನ ಮೇಲೆ ಶೋಷಣೆ ಆಗಬಾರದು. ದೈವ ಶಕ್ತಿಯಾದ ಹೆಣ್ಣನ್ನು ನಾವು ಪೂಜಿಸುತ್ತೇವೆ. ಆದರೆ ಹೆಣ್ಣು ಮಗು ನಮಗೆ ಬೇಡವೆಂದು ತಿರಸ್ಕರಿಸುತ್ತೇವೆ. ಇಂತಹ ಕೀಳರಿಮೆ ನಿಲ್ಲಿಸಬೇಕು. ಬಾಲ್ಯದಿಂದ ಹಿಡಿದು ಮುಪ್ಪಿನ ವರೆಗೂ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಶಕ್ಕಿ ಹೆಣ್ಣಿಗಷ್ಟೇ ಇರುವುದು ಎಂದು ಹೇಳಿದರು.

ಗುಬ್ಬಿ ತಾಲೂಕಿನ ಮಹಿಳಾ ಕೃಷಿಕರಾದ ಆರ್.ಅರುಣಾ ಮಾತನಾಡಿ, ಇಂದು ಹೆಣ್ಣು ಹಲವಾರು ರೀತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಯಾವ ಹೋರಾಟ, ಪ್ರತಿಜ್ಞೆಯಿಂದ ಯಾವ ಫಲವಿಲ್ಲ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಮುಂದೆ ಬರಬೇಕಾಗಿದೆ. ನಾವು ಯಾರಿಗೂ ಅವಲಂಬಿತರಾಗದೆ ಯಾರ ಬೆಂಬಲವಿರದಿದ್ದರೂ ನಾವೇ ಸ್ವತಃ ದುಡಿದು ಉನ್ನತ ಮಟ್ಟಕ್ಕೆ ಏರುವಂತಾಗಬೇಕು. ತುಳಿದವರ ಮುಂದೆ ಎದ್ದು ನಿಲ್ಲಬೇಕೇ ಹೊರತು ಹಿಂಜರಿಯಬಾರದು ಎಂದರು.

ಸಾಧಿಸುವ ಛಲ ಮನಸ್ಸು ಇದ್ದರೆ ಏನನ್ನಾದರೂ ಸಾಧಿಸಬಹುದು. ಹೆಣ್ಣು ಮಕ್ಕಳು ತಮ್ಮ ನೆಲೆ ಕಂಡುಕೊಂಡು ಸರ್ಕಾರದ ಸವಲತ್ತು ಉಪಯೋಗಿಸಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಠ್, ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ವ್ಯವಹಾರ ಮತ್ತು ಆಡಳಿತ ನಿರ್ವಹಣೆ ವಿಭಾಗದ ಅಧ್ಯಕ್ಷೆ ಪ್ರೊ.ನೂರ್ ಅಫ್ಜಾ, ತುಮಕೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ, ಉಪನ್ಯಾಸಕಿ ಆಶಾರಾಣಿ ಕೆ. ಬಗ್ಗನಡು, ಕವಿತಾ.ಆರ್, ಪರಿಣಿತ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!