ಕುಣಿಗಲ್: ಚುನಾವಣೆಗಳಲ್ಲಿ ಬಳಸಲಾಗುವ ವಿದ್ಯುನ್ಮಾನ ಮತ ಯಂತ್ರಗಳು ಅತ್ಯಂತ ನಿಖರತೆ ಹೊಂದಿವೆ. ಈ ಬಗ್ಗೆ ಯಾವುದೇ ಸಂದೇಹಕ್ಕೆ ಆಸ್ಪದ ಇಲ್ಲ ಎಂದು ಅಸೆಂಬ್ಲಿ ವ್ಯಾಪ್ತಿಯ ಮಾಸ್ಟರ್ ಟ್ರೈನರ್ ಕುಮಾರ ಸ್ವಾಮಿ ಹೇಳಿದರು.
ಗುರುವಾರ ಪುರಸಭೆ ಕಾರ್ಯಾಲಯದಲ್ಲಿ ಮತ ಯಂತ್ರಗಳ ಬಳಕೆ ಹಾಗೂ ನಿಖರತೆಯ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಮತಯಂತ್ರದ ಕಾರ್ಯ ವೈಖರಿ ಬಗ್ಗೆ ಸಾಮಾನ್ಯ ಮತದಾರರಿಗೆ ಅಣುಕು ಮತ ಚಲಾವಣೆ ಮಾಡುವ ಬಗ್ಗೆ ಮಾಹಿತಿ ನೀಡಿ, ವಿವಿ ಪ್ಯಾಟ್ ನಲ್ಲಿ ಮತ ಚಲಾಯಿಸಿದ ವ್ಯಕ್ತಿಗೆ ಮತ ಬಿದ್ದಿರುವ ಬಗ್ಗೆ ವಿವರಿಸಿ, ಕಾರ್ಯ ವೈಖರಿ ಬಗ್ಗೆ ಮಾಹಿತಿ ನೀಡಿದರು. ಸಾಮಾನ್ಯ ಜನರು ವಿದ್ಯುನ್ಮಾನ ಮತಯಂತ್ರ ಕಾರ್ಯ ವೈಖರಿಯ ಬಗ್ಗೆ ಅರಿವು ಹೊಂದಬೇಕು. ಯಾವುದೇ ಸಂದೇಹ ಇದ್ದರೂ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಬಗೆಹರಿಸಿ ಕೊಳ್ಳಬಹುದು. ಮತಯಂತ್ರ ಬಳಕೆ ನಿಟ್ಟಿನಲ್ಲಿ ಪ್ರಾತ್ಯಕ್ಷಿತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 30ರ ವರೆಗೂ ತಾಲೂಕಿನ ಎಲ್ಲೆಡೆಯೂ ಕಾರ್ಯಕ್ರಮ ಹಮ್ಮಿಕೊಂಡು ಮತಯಂತ್ರ ಬಳಕೆ, ನಿಖರತೆ ಬಗ್ಗೆ ಮತದಾರರ ಮುಂದೆಯೆ ಪ್ರಾತ್ಯಕ್ಷತೆ ನೀಡಲಾಗುವುದು. ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಪಿಡಿಒಗಳು ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದರು.
ಮುಖಂಡ ನಾಗರಾಜ್ ಮಾತನಾಡಿ, ಪಟ್ಟಣ ಪ್ರದೇಶದ ಜನರಲ್ಲಿ ವಿವಿ ಪ್ಯಾಟ್ ಬಗ್ಗೆ ಮಾಹಿತಿ ಇದೆ. ಗ್ರಾಮಾಂತರ ಪ್ರದೇಶದ ಜನರಿಗೆ ವಿವಿ ಪ್ಯಾಟ್ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು. ಪಿಡಿಒಗಳು ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಇನ್ನು ಈ ಬಗ್ಗೆ ಎಷ್ಟರ ಮಟ್ಟಿಗೆ ಅರಿವು ಮೂಡಿಸುತ್ತಾರೆ ಎಂಬುದರ ಬಗ್ಗೆ ಸಂದೇಹ ಮೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಗ್ರಾಮಾಂತರ ಪ್ರದೇಶದಲ್ಲೂ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತರಬೇತುದಾರ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಕಂದಾಯಾಧಿಕಾರಿ ಮುನಿಯಪ್ಪ, ಸಿಬ್ಬಂದಿ ಹನುಮಂತಪ್ಪ, ಸದಸ್ಯರಾದ ಗೋಪಿ, ನಾಗಣ್ಣ, ಪ್ರಮುಖರಾದ ಸುರೇಶ್, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಇತರರು ಇದ್ದರು. ಪುರಸಭೆಗೆ ಭೇಟಿ ನೀಡಿದ ಬಹಳಷ್ಟು ಸಾರ್ವಜನಿಕರು ಅಣುಕು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತಯಂತ್ರ ಬಳಕೆ ಬಗ್ಗೆ ಮಾಹಿತಿ ಪಡೆದರು.
Comments are closed.