ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ: ರಂಗನಾಥ್

174

Get real time updates directly on you device, subscribe now.


ಕುಣಿಗಲ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬದ ಮುಖ್ಯಸ್ಥ ಹೆಣ್ಣು ಮಕ್ಕಳಿಗೆ ಮಾಹೆಯಾನ ಎರಡು ಸಾವಿರ ರೂ. ನೀಡಲಾಗುವುದು ಎಂದು ಶಾಸಕ ಡಾ.ರಂಗನಾಥ್ ಹೇಳಿದರು.

ಗುರುವಾರ ಪುರಸಭೆ ಕಾರ್ಯಾಲಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಿತಿಯಲ್ಲಿ ನೋಡಲಾಗುತ್ತಿದ್ದರೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಿಯಂತ್ರಣಕ್ಕೆ ಬಾರದೆ ಇರುವುದು ಖಂಡನೀಯ, ರಾಜಕೀಯ ಅಧಿಕಾರ ನೀಡುವಲ್ಲಿ ಮಹಿಳಾ ಮೀಸಲಾತಿ ವಿಷಯದಲ್ಲಿ ಸಾಕಷ್ಟು ತಾರತಮ್ಯ ಧೋರಣೆ ಇರುವುದು ಖೇದಕರ, ಮಹಿಳೆಯರ ಸಮಗ್ರ ಅಭಿವೃದ್ಧಿಯಾಗದು ಹೊರತು ದೇಶದ ಅಭಿವೃದ್ಧಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಮಹಿಳಾ ಮೀಸಲಾತಿ ವಿಷಯದಲ್ಲಿ ಸಾಕಷ್ಟು ಒತ್ತಾಾಸೆ ಹೋರಾಟಗಳಿದ್ದರೂ ಅವುಗಳ ಪರಿಣಾಮಕಾರಿ ಜಾರಿ ನಿಟ್ಟಿನಲ್ಲಿ ಹಾಗೂ ಸಿಗುವ ಸವಲತ್ತುಗಳ ಪ್ರಾಮಾಣಿಕವಾಗಿ ಬಳಸುವ ನಿಟ್ಟಿನಲ್ಲಿ ಸಿಗುವ ಅವಕಾಶಗಳನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ತಾಲೂಕಿನಲ್ಲಿ ಪುರುಷರಿಗೆ ಮದುವೆಯಾಗಲು ಹೆಣ್ಣು ಸಿಗದೆ ದೂರದ ಊರುಗಳಿಗೆ ಹೋಗಿ ವಧು ದಕ್ಷಿಣೆ ಕೊಟ್ಟು ಹೆಣ್ಣು ತರುವಸ್ಥಿತಿ ನಿರ್ಮಾಣವಾಗಲು ಹೆಣ್ಣು ಭ್ರೂಣ ಹತ್ಯೆಯೆ ಪ್ರಮುಖ ಕಾರಣವಾಗಿದ್ದು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಮಹಿಳೆಯರು ಜಾಗೃತಿ ಹೊಂದಿ ಇಂತಹ ಅನಿಷ್ಟ ಪಿಡುಗಿನ ನಿರ್ಮೂಲನೆಗೆ ಮನಸು ಮಾಡಬೇಕಿದೆ ಎಂದರು.

ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಪುರಸಭೆಯ ವ್ಯಾಪ್ತಿಯಲ್ಲಿ ಮೊದಲು 120 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿದ್ದು ಉತ್ತಮ ಆರ್ಥಿಕ ವಹಿವಾಟು ನಡೆಸಿ ಆರ್ಥಿಕವಾಗಿ ಸದೃಢರಾಗುವತ್ತ ಹೆಜ್ಜೆ ಇಡುತ್ತಿದ್ದರು. ಆದರೆ ಇದೀಗ 67 ಸಂಘ ಇದ್ದು, ಐದು ಸಂಘಗಳು ಮಾತ್ರ ಅತ್ಯಂತ ಹಳೆಯದಾಗಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತಿದ್ದು, ಸಂಘಗಳ ಬಲವರ್ಧನೆಗೆ ಪುರಸಭೆ ವತಿಯಿಂದಲೂ ಶ್ರಮಿಸಲಾಗುತ್ತಿದೆ. ಈ ಬಾರಿ ಎಲ್ಲಾ ಸಂಘಗಳಿಗೂ ಎರಡು ಸಾವಿರ ರೂ. ಸುತ್ತುನಿಧಿ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ನಿಧಿ ನೀಡಲು ಕ್ರಮ ವಹಿಸಲಾಗುವುದು ಎಂದರು.

ಇದಕ್ಕೆ ಬೆಂಬಲಿಸಿದ ಶಾಸಕ ಡಾ.ರಂಗನಾಥ್ ಪುರಸಭೆಯ ಎರಡು ಸಾವಿರ ಸುತ್ತು ನಿಧಿಯ ಜೊತೆ ತಾವು ವೈಯಕ್ತಿಕವಾಗಿ ಎರಡು ಸಾವಿರ ರೂ. ನೀಡುವುದಾಗಿ ಹೇಳಿದರು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸ್ವಸಹಾಯ ಸಂಘಕ್ಕೆ ಹತ್ತು ಸಾವಿರ ರೂ. ಸುತ್ತುನಿಧಿ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಸಿಡಿಪಿಒ ಅನುಶಾ, ಪುರಸಭೆ ಸದಸ್ಯರಾದ ಮಂಜುಳಾ, ನಾಗೇಂದ್ರ ಮಾತನಾಡಿದರು. ಉಪಾಧ್ಯಕ್ಷೆ ಶಬನಾ, ಸದಸ್ಯರಾದ ಜಯಮ್ಮ, ಅಸ್ಮ, ಜಯಲಕ್ಷ್ಮೀ, ದೇವರಾಜ, ಗೋಪಿ, ಮಂಜುಳಾ, ಅಂಜುಂ, ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!