224 ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗಳ ಸ್ಪರ್ಧೆ: ಪದ್ಮನಾಭ

83

Get real time updates directly on you device, subscribe now.


ತುಮಕೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 2013ರಲ್ಲಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕೆಜೆಪಿ ತದ ನಂತರ ಆದ ರಾಜಕೀಯ ಸ್ಥಿತ್ಯಂತರದ ಪರಿಣಾಮ 2018ರ ಚುನಾವಣೆಯಲ್ಲಿ ಅಂತಹ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಇದಕ್ಕೆ ಸಂಪನ್ಮೂಲದ ಕೊರತೆಯೂ ಕಾರಣವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಂಪನ್ಮೂಲದ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದು, ರಾಜ್ಯದಲ್ಲಿ ಚುನಾವಣಾ ಅಧಿಸೂಚನೆ ಹೊರ ಬೀಳುತಿದ್ದಂತೆಯೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. 224ರಲ್ಲಿ 50- 60 ಸ್ಥಾನಗಳಲ್ಲಿ ಕೆಜೆಪಿ ಈ ಬಾರಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಕರ್ನಾಟಕ ಒಂದು ಹುಲ್ಲುಗಾವಲಾಗಿದೆ. ಇಲ್ಲಿಂದ ಟ್ಯಾಕ್ಸ್ ಮತ್ತಿತರ ರೀತಿಯಲ್ಲಿ ಸಂಪತ್ತು ತೆಗೆದುಕೊಂಡು ಹೋಗುತ್ತಿವೆಯೇ ಹೊರತು ಕರ್ನಾಟಕದ ಅಭಿವೃದ್ಧಿಗೆ ಖರ್ಚು ಮಾಡುತ್ತಿಲ್ಲ. ಉದ್ಯೋಗ, ಕೈಗಾರಿಕೆ, ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಒಂದು ರೂ. ಪಡೆಯಲು ಹೈಕಮಾಂಡ್ ಮುಂದೆ ಕೈ ಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷವೊಂದೇ ಪರಿಹಾರವಾಗಿದ್ದು, ಜನತೆ ಕೆಜೆಪಿ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆ ಪ್ರಸ್ತಾಪಿಸಿ ಕನ್ನಡಿಗರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿವೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು, ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡಿಗರಿಗೆ ಅವಕಾಶಗಳು ದೊರೆಯಬೇಕೆಂಬ ದೂರದೃಷ್ಟಿ ಹೊಂದಿಲ್ಲ. ಕೇವಲ ಬಾಯಿ ಮಾತಿನ ಕನ್ನಡ ಅಭಿವೃದ್ಧಿ ಇವುಗಳದ್ದಾಗಿದೆ. ಹಾಗಾಗಿ ಶೀಘ್ರದಲ್ಲಿಯೇ ಕೆಜೆಪಿ ಕನ್ನಡ ನಾಡಿನ ಸಮಸ್ತ ಜನರ ಅಭಿವೃದ್ಧಿ ದೃಷ್ಟಿಯಿಂದ ಪ್ರಾಣಾಳಿಕೆ ಬಿಡುಗಡೆ ಮಾಡಲಿದೆ ಎಂದು ಪದ್ಮನಾಭ ಪ್ರಸನ್ನಕುಮಾರ್ ನುಡಿದರು.

ನಾನು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾಮದವನು. ಹಾಗಾಗಿ ಪಕ್ಷದ ಮುಖಂಡರು ನನ್ನನ್ನು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೇರೆಪಿಸುತಿದ್ದಾರೆ. ಉಳಿದಂತೆ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಚುನಾವಣೆ ಘೋಷಣೆಯಾದ ನಂತರ ಬಿಡುಗಡೆ ಮಾಡಲಿದ್ದೇನೆ. ಏಕೆಂದರೆ ಇಂದಿನ ಪರಿಸ್ಥಿತಿ ನೋಡಿದರೆ ಚುನಾವಣೆ ಮುಂದೂಡುವ ಎಲ್ಲಾ ಲಕ್ಷಣ ಕಂಡು ಬರುತ್ತಿವೆ. ಕೇಂದ್ರ ಸರಕಾರ ನಡೆಸಿದ ಆಂತರಿಕ ಸರ್ವೆಯಲ್ಲಿ ಬಿಜೆಪಿ 60 ಸೀಟು ಬರುವುದು ಕಷ್ಟ ಎಂಬ ಮಾಹಿತಿ ಇದೆ. ಹಾಗಾಗಿ ಕೆಲ ತಾಂತ್ರಿಕ ಕಾರಣ ನೀಡಿ ಚುನಾವಣೆ ಮುಂದೂಡಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಒಂದು ವೇಳೆ ಚುನಾವಣೆಗೆ ಮುನ್ನವೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದರೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸಾಧ್ಯತೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಪಕ್ಷದ ರಾಜ್ಯಾ ಕಾರ್ಯಾಧ್ಯಕ್ಷ ಶ್ರೀಧರ್ ಆಜಾದ್, ತುಮಕೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!