ನಮ್ಮ ಕ್ಲಿನಿಕ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

ಜನರ ಆರೋಗ್ಯ ಕಾಪಾಡಲು ನಮ್ಮ ಕ್ಲಿನಿಕ್ ನಿರಂತರ ಕಾರ್ಯ

68

Get real time updates directly on you device, subscribe now.


ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನಮ್ಮ ಕ್ಲಿನಿಕ್ ನ್ನು ನಗರದ ಜಯಪುರ ಹಾಗೂ ದಿಬ್ಬೂರಿನಲ್ಲಿ ಶಾಸಕ ಜ್ಯೋತಿಗಣೇಶ್ ಉದ್ಘಾಟಿಸಿದರು.
ಜಯಪುರ ಮತ್ತು ದಿಬ್ಬೂರಿನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ರಾಜ್ಯ ಸರ್ಕಾರ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಮ್ಮ ಕ್ಲಿನಿಕ್ಗಳನ್ನು ಘೋಷಣೆ ಮಾಡಿದ್ದು, ರಾಜ್ಯಾದ್ಯಂತ 400 ಕ್ಕೂ ಹೆಚ್ಚಿನ ನಮ್ಮ ಕ್ಲಿನಿಕ್ ಆರಂಭಿಸುತ್ತಿದೆ. ಅದರಲ್ಲೂ ನಗರಕ್ಕೆ 7 ನಮ್ಮ ಕ್ಲಿನಿಕ್ ಕೊಟ್ಟಿರುವುದು ವಿಶೇಷವಾಗಿದೆ ಎಂದರು.

ಮೊದಲನೆಯದು ಮೆಳೇಕೋಟೆಯಲ್ಲಿ, ನಂತರ ಮರಳೂರು ದಿಣ್ಣೆಯಲ್ಲಿ ಆರಂಭಿಸಿದ್ದು, ಇದೀಗ ಜಯಪುರ ಮತ್ತು ದಿಬ್ಬೂರಿನಲ್ಲಿ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ಹೆಚ್ಚುವರಿಯಾಗಿ ನಮ್ಮ ಕ್ಲಿನಿಕ್ ನೀಡಲಾಗಿದೆ. ನಗರದ 35 ವಾರ್ಡ್ಗಳಿಗೆ ಒಟ್ಟು 14 ಆರೋಗ್ಯ ಕೇಂದ್ರಗಳು ಜನರ ಆರೋಗ್ಯ ಕಾಪಾಡಲು ಸದಾ ಕಾರ್ಯ ನಿರತವಾಗಿರುತ್ತವೆ. ಸಾರ್ವಜನಿಕ ಆಸ್ಪತ್ರೆಗೆ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದ ಜನರ ಸಂಖ್ಯೆ ನಮ್ಮ ಕ್ಲಿನಿಕ್ಗಳಿಂದಾಗಿ ಕಡಿಮೆಯಾಗಲಿದೆ ಎಂದು ಹೇಳಿದರು.

ಜನರಿಗೆ ಆರೋಗ್ಯ ಭಾಗ್ಯ ಕೊಡುವ ಕಲ್ಪನೆ ಈ ನಮ್ಮ ಕ್ಲಿನಿಕ್ನದ್ದಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಮ್ಮ ಕ್ಲಿನಿಕ್ಗಳು ನಗರ ಪ್ರದೇಶದ ಸಮುದಾಯಕ್ಕೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಸದುದ್ದೇಶ ಹೊಂದಿದ್ದು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆ ಖಾತ್ರಿಪಡಿಸುವ ಮತ್ತು ಕೆಳ ಹಂತದಿಂದ ಹಾಗೂ ಮೇಲಿನ ಹಂತದ ಸೇವೆ ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.

ಆರೋಗ್ಯ ಸೇವೆಗಳು ಅತ್ಯಾವಶ್ಯವಿರುವ ಜನಸಂಖ್ಯೆಯ ಮೌಲ್ಯಮಾಪನ ಮತ್ತು ನಗರ ಪ್ರದೇಶಗಳ ಮ್ಯಾಪಿಂಗ್ ಆಧಾರದ ಮೇಲೆ ಪ್ರಸ್ತುತ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಲ್ಲದ ಕೊಳಗೇರಿ, ದುರ್ಬಲ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ 30000 ದಿಂದ 60000 ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ರಾಜ್ಯ ಸರ್ಕಾರ ತುಮಕೂರು ಜಿಲ್ಲೆಗೆ 10 ನಮ್ಮ ಕ್ಲಿನಿಕ್ ನೀಡಿದ್ದು, ಅದರಲ್ಲೂ ತುಮಕೂರು ನಗರಕ್ಕೆ 7 ನಮ್ಮ ಕ್ಲಿನಿಕ್ ನೀಡಿರುವುದು ಜನರ ಆರೋಗ್ಯ ಕಾಳಜಿಯ ಪ್ರತೀಕವಾಗಿದೆ. ನಗರದಲ್ಲಿ ಆರಂಭವಾಗುತ್ತಿರುವ ನಮ್ಮ ಕ್ಲಿನಿಕ್ಗಳ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ನರಸಿಂಹ ಮೂರ್ತಿ, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ವೀಣಾ, ಡಿಹೆಚ್ಓ ಡಾ.ಮಂಜುನಾಥ್, ಆರ್ಸಿಎಚ್ ಅಧಿಕಾರಿ ಡಾ.ಕೇಶವರಾಜು, ಆಂಜಿನಪ್ಪ, ಹೇಮಂತರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!