ಜನರ ಸಮಸ್ಯೆ ನಿವಾರಿಸಲು ರಾಜಕಾರಣಕ್ಕೆ ಬಂದಿರುವೆ: ರಾಜೇಶ್ ಗೌಡ

165

Get real time updates directly on you device, subscribe now.


ಕುಣಿಗಲ್: ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗಲಿ, ಸಂಬಂಧಿಗಳ ಹೆಸರಿನಲ್ಲಿ ಗುತ್ತಿಗೆ ಮಾಡಲಾಗಲಿ ತಾವೂ ರಾಜಕಾರಣಕ್ಕೆ ಬಂದಿಲ್ಲ. ತಾಲೂಕಿನ ನೀರಾವರಿ, ಔದ್ಯೋಗಿಕ ಇತರೆ ಸಮಸ್ಯೆಗಳ ನಿವಾರಣೆ ಮಾಡಲು ರಾಜಕೀಯಕ್ಕೆ ಬಂದಿರುವುದಾಗಿ ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶ್ ಗೌಡ ಹೇಳಿದರು.

ತಾಲೂಕಿನ ಅಮೃತೂರಿನ ಮಾರ್ಕೋನಹಳ್ಳಿ ಕ್ರಾಸ್ ಬಳಿ ಇರುವ ಸಂಕ್ರಾಂತಿಗುಡ್ಡೆ ಬಸವಣ್ಣನ ದೇವಾಲಯದ ವಿಶಾಲ ಪ್ರದೇಶದಲ್ಲಿ ಅಮೃತೂರು ಹೋಬಳಿ ಹೆಚ್.ಡಿ. ರಾಜೇಶ್ಗೌಡರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾದ ಸ್ತ್ರೀಶಕ್ತಿ ಸಮಾಗಮ ಹಾಗೂ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಸಾವಿರಾರು ಮಂದಿ ಮಹಿಳೆಯರು ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾದಲ್ಲಿ ಹಾಗೂ ಹೆರಿಗೆ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಕ್ಷೇತ್ರ ಪ್ರತಿನಿಧಿಸುವ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಚಿಕಿತ್ಸೆ ಸೇರಿದಂತೆ ಹೆರಿಗೆಗೆ ಹತ್ತಾರು ಸಾವಿರ ಲಂಚ ಪಡೆಯುವ ಸ್ಥಿತಿ ಇದೆ.

ಮಹಿಳಾ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಕ್ಷೇತ್ರದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆ ಹರಿಸಲು ಮಹಿಳಾ ಕಾರ್ಮಿಕರಿಗೆ ಮನೆ ಬಾಗಿಲಲ್ಲೆ ಆರ್ಥಿಕ ಸದೃಡತೆ ಕಲ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ನಿವಾರಣೆಗೆ ಉತ್ತಮ ವ್ಯವಸ್ಥೆ ನಿರ್ಮಾಣ ಮಾಡಲು ತಮ್ಮದೆ ಆದ ಹಲವು ಯೋಜನೆಗಳಿದ್ದು ಮುಂಬರುವ ಚುನಾವಣೆಯಲ್ಲಿ ಆಶೀರ್ವಾದ ಮಾಡಿದಲ್ಲಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ, ತಾವು ಈಗಾಗಲೆ ಉದ್ದಿಮೆದಾರರಾಗಿದ್ದು ಸಾಕಷ್ಟು ಹಣ ಸಂಪಾದನೆ ಮಾಡಿರುವ ಕಾರಣ ಹಣ ಮಾಡುವ ಉದ್ದೇಶ ತಮಗಿಲ್ಲ. ಜನಪರ ಸೇವೆಯೆ ನನ್ನ ಗುರಿ ಎಂದರು.

ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ನಂಜುಂಡಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜನಪರ ಸಮಸ್ಯೆಗೆ ಸ್ಪಂದಿಸುವ ಸಚ್ಚಾರಿತ್ರ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಾಣ ಮಾಡಲು ಮಹಿಳೆಯರು ಮುಂದಾಗಬೇಕು. ಮಹಿಳೆಯರು ಮನಸು ಮಾಡಿದರೆ ಎಂಥ ಬದಲಾವಣೆ ಬೇಕಾದರೂ ಮಾಡಲು ಸಾಧ್ಯ ಎಂದರು.

ಪ್ರಮುಖರಾದ ನಾರಾಯಣ ಸ್ವಾಮಿ, ಶಿವಣ್ಣ ಮಾತನಾಡಿದರು. ಅಮೃತೂರು ಹೋಬಳಿಯ ವಿವಿಧ ಗ್ರಾಮಗಳಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲಾ ಮಹಿಳೆಯರಿಗೂ ರಾಜೇಶ್ಗೌಡ ದಂಪತಿ ಬಾಗಿನ ವಿತರಿಸಿ ಭೋಜನ ವ್ಯವಸ್ಥೆ ಏರ್ಪಡಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಕೆ.ರಮೇಶ, ತಾಲೂಕು ಮಾಜಿ ಅಧ್ಯಕ್ಷ ಟಿ.ಕೆ.ರಾಜು, ಮುಖಂಡರಾದ ಪ್ರದೀಪ, ವೆಂಕಟೇಶ, ವಿಶ್ವನಾಥ, ವೆಂಕಟೇಶ, ರವೀಶ, ರಂಗನಾಥ, ಸುರೇಶ, ನಾರಾಯಣ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!