ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡಿ

ತುಮಕೂರಿನಲ್ಲಿ ರೈತರ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ

125

Get real time updates directly on you device, subscribe now.


ತುಮಕೂರು: ಕೊಬ್ಬರಿಗೆ ಕ್ವಿಂಟಾಲ್ಗೆ 20 ಸಾವಿರ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ಕೃಷಿ ಪೂರಕ ವಸ್ತುಗಳ ಬೆಲೆಗಳ ಹೆಚ್ಚಳ ಕಡಿತಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ನೂರಾರು ರೈತರು ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸೀ ಕಚೇರಿ ಬಳಿ ಸಮಾವೇಶಗೊಂಡರು. ಈ ವೇಳೆ ಸರಕಾರ ಕೂಡಲೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 20 ಸಾವಿರ ರೂ. ನೀಡಬೇಕು. ರೈತರ ಪಂಪ್ ಸೆಟ್ಗಳಿಗೆ ದಿನದ 8 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ಇಂದು ಇಡೀ ರಾಜ್ಯದಲ್ಲಿ ಕೊಬ್ಬರಿ, ತೊಗರಿ, ಭತ್ತ, ಕಬ್ಬು, ಅಡಿಕೆ, ರಾಗಿ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ಸರಕಾರವೇ ನಿಗದಿ ಪಡಿಸಿದ ಬೆಂಬಲ ಬೆಲೆಗಿಂತಲೂ ಅತಿ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದರೂ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಾಗ ನೆರವಿಗೆ ಬೇರಬೇಕಾಗಿದ್ದ ಅರ್ವತ ನಿಧಿ ಕೇವಲ ಹೆಸರಿಗೆ ಮಾತ್ರ ಇದೆ. ಆದರೆ 7ನೇ ವೇತನ ಆಯೋಗಕ್ಕಾಗಿ ಸರಕಾರಿ ನೌಕರರು ಒಂದು ದಿನ ಮುಷ್ಕರ ಮಾಡಿದ್ದಕ್ಕೆ ಸರಕಾರ ಅವರ ವೇತನವನ್ನು ಶೇ.17 ರಷ್ಟು ಹೆಚ್ಚಳ ಮಾಡಿದೆ. ಆದರೆ ರೈತರು ಸಹಾಯಧನ ಹೆಚ್ಚಳ ಕೇಳಿದರೆ ಬಜೆಟ್ಗೆ ಹೊರೆಯಾಗುತ್ತದೆ ಎಂಬ ನೆಪವನ್ನು ಸರಕಾರ ಹೇಳುತ್ತಿದೆ. ಸರಕಾರಿ ನೌಕರರಿಗಿಂತ ಹೆಚ್ಚು ನಷ್ಟದಲ್ಲಿ ರೈತರಿದ್ದಾರೆ. ಹಾಗಾಗಿ ಸರಕಾರ ರೈತರ ನೆರವಿಗೆ ಬರಬೇಕಾಗಿದೆ ಎಂದರು.

ರೈತರಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಸ್ಪಷ್ಟ ರಾಜಕೀಯ ನಿಲುವು ಇಲ್ಲದಿರುವುದೇ ಈ ರೀತಿಯ ಸಂಕಷ್ಟಕ್ಕೆ ಸಿಲುಕಲು ಕಾರಣ, ಇದನ್ನು ಅರ್ಥ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಇನ್ನಿಲ್ಲದ ಬಣ್ಣದ ಮಾತುಗಳನ್ನಾಡಿ ವಂಚಿಸುತ್ತಿವೆ. ಹಾಗಾಗಿ ರೈತರು ಚುನಾವಣಾ ಸಂದರ್ಭದಲ್ಲಿಯಾದರೂ ಒಂದು ಸ್ಪಷ್ಟ ನಿಲುವು ಕೈಗೊಂಡು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಬಡಗಲಪುರ ನಾಗೇಂದ್ರ ಕರೆ ನೀಡಿದರು.

ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರಾಜ್ಯದ 13 ಜಿಲ್ಲೆಗಳಲ್ಲಿ ಕೊಬ್ಬರಿ ಉತ್ಪಾದಿಸಲಾಗುತ್ತದೆ. ಅದರಲ್ಲಿ ತುಮಕೂರು ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. 2022ರಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ಬೆಲೆ 18 ಸಾವಿರ ರೂ. ಇದ್ದು, ಪ್ರಸ್ತುತ ಅದು 8 ಸಾವಿರ ರೂ. ಗಳಿಗೆ ಕುಸಿದಿದೆ. ಇದಕ್ಕೆ ಕೇಂದ್ರ ಸರಕಾರದ ಆಮದು ನೀತಿಯೇ ಕಾರಣ, ಚುನಾವಣಾ ದೃಷ್ಟಿಯಿಂದ ಆಮದು ಸುಂಕ ಕಡಿತಗೊಳಿಸಿದ ಕಾರಣ ನೆರೆಯ ಮಲೆಷಿಯಾ, ಶ್ರೀಲಂಕಾ, ಇಂಡೋನೇಷ್ಯಾದಿಂದ ತೆಂಗಿನ ಉತ್ಪನ್ನಗಳ ರಫ್ತು ಹೆಚ್ಚಾಗಿ ಭಾರತದ ತೆಂಗಿನ ಬೆಲೆ ಕುಸಿದಿದೆ. ಸರಕಾರ ಕೂಡಲೇ ಆಮದು ಸುಂಕ ಹೆಚ್ಚಿಸಿ ರೈತರ ನೆರವಿಗೆ ಬರಬೇಕು. ಹಾಗೆಯೇ ಈ ವರ್ಷದ ಮುಂಗಾರಿನಲ್ಲಿ ಆದ ಅತಿ ಹೆಚ್ಚು ಮಳೆಯಿಂದ ಕೆರೆ ಕಟ್ಟೆ ತುಂಬಿದ್ದು, ಬೆಳೆ ಹಾನಿಯಾಗಿತ್ತು. ಆ ಬೆಳೆಯನ್ನು ಹಿಂಗಾರಿನಲ್ಲಿ ತೆಗೆಯಲು ರೈತರು ಪಂಪ್ ಸೆಟ್ಗಳನ್ನು ಚಾಲು ಮಾಡಿದ್ದಾರೆ. ಆದರೆ ಬೆಸ್ಕಾಂ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ದಿನದ ಕನಿಷ್ಠ 8 ಗಂಟೆ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ, ಜಿಲ್ಲಾ ಪದಾಧಿಕಾರಿಗಳಾದ ಜಿ.ಸಿ.ಶಂಕರಪ್ಪ, ದೊಡ್ಡಮಾಳಯ್ಯ, ರವೀಶ್, ಯುವ ಘಟಕದ ಚಿರತೆ ಚಿಕ್ಕಣ್ಣ, ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್, ಭಾಗ್ಯಮ್ಮ, ಚಿಕ್ಕಬೋರೇಗೌಡ, ರಂಗಸ್ವಾಮಯ್ಯ, ಕೃಷ್ಣಪ್ಪ, ಡಿ.ಕೆ.ರಾಜು, ಪೂಜಾರಪ್ಪ, ರಂಗಹನುಮಯ್ಯ, ಶಬ್ಬೀರ್ ಪಾಷ ಇನ್ನಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!