ಧ್ರುವನಾರಾಯಣ್ ನಿಧನ ಕಾಂಗ್ರೆಸ್ ಗೆ ತುಂಬಲಾರದ ನಷ್ಟ

119

Get real time updates directly on you device, subscribe now.


ತುಮಕೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅವರು ಬಹಳ ಅಪರೂಪದ ವ್ಯಕ್ತಿತ್ವವುಳ್ಳವರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಾ ದೊಡ್ಡ ನಷ್ಟವುಂಟಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಧ್ರುವನಾರಾಯಣ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಧ್ರುವನಾರಾಯಣ ಅವರು ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳು, 2 ಬಾರಿ ಸಂಸದರಾಗಿ, ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸಂಸದರಾಗಿ, ಶಾಸಕರಾಗಿ ಕಾರ್ಯ ನಿರ್ವಹಿಸಿದ ಪರಿ ಹಾಗೂ ಅವರ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದ ಹೈಕಮಾಂಡ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿತ್ತು ಎಂದರು.

ಪಕ್ಷ ನೀಡಿದ ಜವಾಬ್ದಾರಿಯನ್ನು ಧ್ರುವನಾರಾಯಣ ಅವರು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಎಂದ ಅವರು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ನಾವೆಲ್ಲರೂ ಅಂದುಕೊಂಡಿದ್ದೆವು. ಆದರೆ ಈ ರೀತಿಯಾಗಿರುವುದು ವೈಯುಕ್ತಿಕವಾಗಿ ನನಗೆ ತುಂಬಾ ನೋವು ತಂದಿದೆ ಎಂದರು.

ಪ್ರಸ್ತುತ ಕಲುಷಿತವಾದ ವಾತಾವರಣ ಇರುವಂತಹ ಸಂದರ್ಭದಲ್ಲಿ ಇಂತಹ ವ್ಯಕ್ತಿ ಸಿಗುವುದು ಬಹಳ ಅಪರೂಪ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ, ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕರಾದ ಎಸ್.ಷಫಿ ಅಹಮದ್, ಡಾ.ರಫಿಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಕೆ.ಎಸ್.ಕಿರಣ್ ಕುಮಾರ್, ಮುಖಂಡರಾದ ಕೆಂಚಮಾರಯ್ಯ, ಮುರುಳೀಧರ ಹಾಲಪ್ಪ, ನಾರಾಯಣ ಮೂರ್ತಿ, ವಾಲೇಚಂದ್ರು, ಅತೀಕ್ ಅಹಮದ್, ಇಕ್ಬಾಲ್ ಅಹಮದ್, ರಾಯಸಂದ್ರ ರವಿಕುಮಾರ್, ಪುಟ್ಟರಾಜು, ಮಂಜುನಾಥ್, ಸಿದ್ದಲಿಂಗೇಗೌಡ, ನಟರಾಜು, ಪ್ರಧಾನ ಕಾರ್ಯದರ್ಶಿ ಸುಜಾತ, ಸಂಜೀವ್ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!