ಗುಬ್ಬಿ: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ನಾನು ಸೇರಿದಂತೆ ಅನೇಕ ಸಂಸದರು ಒತ್ತಾಯ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಶ್ರೀಚನ್ನಬಸವೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸೋಮವಾರ ನಡೆದ ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಹಕ್ಕೊತಾಯ ಕಾರ್ಯಕ್ರಮ ಹಾಗೂ ಜಾಥಾ ಮೆರವಣಿಗೆ ಉದ್ಘಾಟಿಸಿ ಮಾತನಾಡಿ, ಕಳೆದ ಮಾರ್ಚ್ನಲ್ಲಿ ನಡೆದ ಅಧಿವೇಶನದಲ್ಲಿ ಈಗಾಗಲೇ ನಿಮ್ಮ ಸಮುದಾಯದ ಬಗ್ಗೆ ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ್ದು ಮತ್ತೆ ಮುಂಬರುವ ಅಧಿವೇಶನದಲ್ಲಿ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತೇನೆ. ಆದರೂ ನಿಮ್ಮ ಸಮುದಾಯಕ್ಕೆ ಹೆಚ್ಚಿನ ಶಿಕ್ಷಣ ಸಿಗುವಂತಾಗಬೇಕಾಗಿದೆ ಮತ್ತು ಮೂಢನಂಬಿಕೆಯಿಂದ ಹೊರಬಂದು ಸಾಮಾಜಿಕ ಬದುಕು ಕಟ್ಟಿಕೊಳ್ಳಬೇಕು ಮತ್ತು ತಾವೆಲ್ಲರೂ ಒಟ್ಟಾಗಿ ಇದ್ದು ಹೋರಾಟ ನಡೆಸಿದಲ್ಲಿ ಪ್ರತಿ ಫಲ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ನಾನು ಶಾಸಕನಾದ ಮೇಲೆ ಬಹುತೇಕ ಕಾಡುಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ನಾನು ಶಾಸಕನಾಗಿದ್ದು, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಹಾಗೂ ನಿಮ್ಮ ಹಾಕ್ಕೊತ್ತಾಯಕ್ಕೆ ನಾನು ಜೊತೆಯಾಗಿರುತ್ತೇನೆ. ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮೀಸಲಾತಿಯ ಪಟ್ಟಿ ರವಾನೆಯಾಗಿದ್ದು, ಸಂಸದ ಜಿ.ಎಸ್.ಬಸವರಾಜ್ ಅವರು ಸಂಸತ್ ಸಭೆಯಲ್ಲಿ ಮಲಗಿಯಾದರು ನಿಮ್ಮ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯ ಪಡಿಸಬೇಕು. ನಾವು ಸಹ ಅವರ ಜೊತೆಯಲ್ಲಿ ನಿಂತು ಹೋರಾಟ ಮಾಡಲು ಬದ್ಧವಾಗಿದ್ದೇವೆ. ಕೇವಲ ಚುನಾವಣೆಗೋಸ್ಕರ ಈ ಮಾತುಗಳನ್ನು ನಾನು ಹೇಳುತ್ತಿಲ್ಲ. ನಿಮ್ಮ ಸಮುದಾಯಕ್ಕೆ ನೀಡಬೇಕಾಗಿರುವ ಮೀಸಲಾತಿ ನೀಡಿದಾಗ ಶಿಕ್ಷಣ ಉದ್ಯೋಗ ಸೇರಿದಂತೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾಡುಗೊಲ್ಲ ಸಮುದಾಯದ ರಾಜ್ಯ ಅಧ್ಯಕ್ಷ ರಾಜಣ್ಣ ಮಾತನಾಡಿ, ಸುಮಾರು ಎರಡು ಮೂರು ವರ್ಷಗಳಿಂದಲೂ ನಿರಂತರವಾಗಿ ನಾವು ಹೋರಾಟ ಮಾಡುತ್ತಿದ್ದು, ನಮ್ಮ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಿದಾಗ ನಮ್ಮ ಬುಡಕಟ್ಟು ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯವಿದ್ದು, ಎಲ್ಲಾ ಪಕ್ಷದ ನಾಯಕರು ಎಲ್ಲಾ ಪಕ್ಷದ ಶಾಸಕರು ಸೇರಿದಂತೆ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಜಿಲ್ಲಾ ಅಧ್ಯಕ್ಷ ಗಂಗಾಧರ್, ತಾಲೂಕು ಅಧ್ಯಕ್ಷ ದೇವರಾಜ್, ಪೂಜಾರಿಗಳಾದ ಪಾಪಣ್ಣ, ಯರಪ್ಪ, ಮುಖಂಡರಾದ ಬಸವರಾಜು, ತಿಮ್ಮಣ್ಣ, ಯಶೋಧಮ್ಮ, ನಾಗರಾಜು, ಕೆ.ಟಿ.ಪ್ರಭು, ಗುಡ್ಡದಹಳ್ಳಿ ಬಸವರಾಜು, ಜುಂಜೆಗೌಡ, ಸಿದ್ದರಾಜು, ಕೃಷ್ಣಮೂರ್ತಿ ಇತರರು ಇದ್ದರು.
Comments are closed.