ಹೈನುಗಾರಿಕೆಯಿಂದ ರೈತರ ಅಭಿವೃದ್ಧಿ ಸಾಧ್ಯ: ಎಂವಿವಿ

108

Get real time updates directly on you device, subscribe now.


ಮಧುಗಿರಿ: ಹೈನುಗಾರಿಕೆ ರೈತರ ಕೈ ಹಿಡಿದಿದ್ದು, ರೈತರು ಆರ್ಥಿಕವಾಗಿ ಸದೃಡರಾಗಲು ಹೈನುಗಾರಿಕೆ ಮಹತ್ವ ಪಾತ್ರ ವಹಿಸುತ್ತಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಸೋಮವಾರ ತುಮಲ್ ವತಿಯಿಂದ ಹಮ್ಮಿಕೊಂಡಿದ್ದ ಹಾಲು ಉತ್ಪಾದಕ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೈತರು ವ್ಯವಸಾಯದಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಹಣ ನೋಡಿದರೆ ಹೈನುಗಾರಿಕೆಯಲ್ಲಿ ವಾರಕ್ಕೆ ಒಮ್ಮೆ ಬಟವಾಡೆಯಾಗುತ್ತಿದ್ದು, ಇದರಿಂದ ರೈತರು ಆರ್ಥಿಕವಾಗಿ ಸದೃಡರಾಗಲು ಸಹಕಾರಿಯಾಗಿದೆ. ಕೊಂಡವಾಡಿ ಚಂದ್ರಶೇಖರ್ ಅವರು ಒಕ್ಕೂಟ ಮತ್ತು ರೈತರ ಬಗ್ಗೆ ಬಹಳಷ್ಟು ಕಾಳಜಿ ಹೊಂದಿದ್ದು, ಒಕ್ಕೂಟದಲ್ಲಿ ಸಿಗುವ ಸವಲತ್ತುಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಸಿದರು.

ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರಕ್ಕೆ 1140 ಕೋಟಿ ಅನುದಾನ ತಂದು ಕೆಲಸ ಕಾರ್ಯ ಮಾಡಿದ್ದೇನೆಂಬ ತೃಪ್ತಿ ನನಗಿದ್ದು, ತಾಲೂಕು ಬಹಳಷ್ಟು ಹಿಂದುಳಿದ ಪ್ರದೇಶವಾಗಿದ್ದು, ಬಹಳಷ್ಟು ಸಂದರ್ಭಗಳಲ್ಲಿ ವ್ಯವಸಾಯ ನಂಬಿ ಭೂಮಿಯಲ್ಲಿ ಭಿತ್ತಿದ ಬೀಜವೂ ವಾಪಸ್ ಬಂದಿಲ್ಲ. ಮಧುಗಿರಿ ಜಿಲ್ಲೆಯಾಗಿ, ಏಕಶಿಲಾ ಬೆಟ್ಟಕ್ಕೆ ರೋಪ್ ವೇ, ಎತ್ತಿನಹೊಳೆ ಪೂರ್ಣಗೊಳ್ಳುವುದು ಮತ್ತು ಹೈಟೆಕ್ ಆಸ್ಪತ್ರೆ ಆಗಬೇಕಿದೆ ಎಂದರು.
ತುಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರನ್ನು ಗೌರವಿಸಬೇಕು. ಕಳೆದ ನಾಲ್ಕೂವರೆ ವರ್ಷದಲ್ಲಿ ಶಾಸಕ ವೀರಭದ್ರಯ್ಯ ಅವರು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಬಹಳಷ್ಟು ಸಹಕಾರ ನೀಡಿದ್ದು, ನೂತನ ಕಟ್ಟಡ ನಿರ್ಮಿಸಲು ತಲಾ ಮೂರು ಲಕ್ಷ ಅನುದಾನ ನೀಡಿದ್ದು, ಕೆಲ ಸಂಘಗಳಿಗೆ 5 ಲಕ್ಷ ನೀಡಿದ ನಿದರ್ಶನ ಇವೆ. ಅವರ ಸಹಕಾರದಿಂದ ಜೆಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪಾದಕ ಕಟ್ಟಡಗಳ ನಿರ್ಮಾಣ ಮಾಡಲಾಗಿದ್ದು, ಅವರ ಕೆಲಸಗಳಿಗೆ ನಾವು ಗೌರವ ನೀಡಬೇಕು ಎಂದರು.

ತುಮುಲ್ ಒಕ್ಕೂಟ ನಂಬಿಕೊಂಡು ಲಕ್ಷಾಂತರ ರೈತರು ಜೀವನ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಒಕ್ಕೂಟದಲ್ಲಿ ಬಡವಾಡೆ ನೀಡಲೂ ಹಣವಿರಲಿಲ್ಲ. ಆದರೆ ನಾನು ಅಧ್ಯಕ್ಷನಾದ ನಂತರ ತುಮುಲ್ನ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದು, ರೈತರಿಗೆ ಏನೇನು ಬೇಕೋ ಅದೆಲ್ಲ ಸವಲತ್ತುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ನನ್ನ ಅವಧಿಯಲ್ಲಿ ಅಕಾಲಿಕವಾಗಿ ಮೃತಪಟ್ಟ 296 ಜನರಿಗೆ ತಲಾ 50 ಸಾವಿರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಅಕಾಲಿಕವಾಗಿ ಮೃತಪಟ್ಟ 1560 ರಾಸುಗಳು ಸುಮಾರು 7.75 ಕೋಟಿ ಪರಿಹಾರ ನೀಡಲಾಗಿದೆ. 308 ವಿವಿಧ ಫಲಾನುಭವಿಗಳಿಗೆ 30 ಲಕ್ಷ, 336 ಜನರಿಗೆ 2.10 ಕೋಟಿ ಪರಿಹಾರ ನೀಡಲಾಗಿದ್ದು, ಒಟ್ಟು 14 ಕೋಟಿ ಹಣ ವಿತರಣೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಕಾಲಿಕವಾಗಿ ಮೃತಪಟ್ಟ 43 ಜನ ಹಾಲು ಉತ್ಪಾದಕ ರೈತರಿಗೆ 21.5 ಲಕ್ಷ, 53 ಪಡ್ಡೆ ರಾಸುಗಳಿಗೆ 6 ಲಕ್ಷ,
ಅಕಾಲಿಕವಾಗಿ ಮೃತಪಟ್ಟ 75 ಹಸುಗಳಿಗೆ 36 ಲಕ್ಷ, ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 43 ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ, 12 ಜನರಿಗೆ ವೈದ್ಯಕೀಯ ಭತ್ಯೆಗಾಗಿ 13 ಲಕ್ಷ ಬಣವೆ ಸುಟ್ಟ ಫಲಾನುಭವಿಗಳಿಗೆ 50 ಸಾವಿರ, ನೂತನ ಹಾಲು ಉತ್ಪಾದಕ ಕಟ್ಟಡಕ್ಕೆ 27 ಲಕ್ಷ ರೂ. ಚೆಕ್ ವಿತರಣೆಗೆ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ, ತಾಪಂ ಮಾಜಿ ಸದಸ್ಯ ದೊಡ್ಡಯ್ಯ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮೂಡ್ಲಪ್ಪ, ಚಿಕ್ಕ ಓಬಳ ರೆಡ್ಡಿ, ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಮುಖಂಡರಾದ ಗುಂಡಗಲ್ ಶಿವಣ್ಣ, ಡಿ.ವಿ.ಹಳ್ಳಿ ತಿಮ್ಮಣ್ಣ, ತುಮುಲ್ ವಿಸ್ತರಣಾಧಿಕಾರಿ ಶಂಕರ್ನಾಗ್, ಗಿರೀಶ್, ಡಾ.ದೀಕ್ಷಿತ್, ಸಮಾಲೋಚಕರಾದ ಧರ್ಮವೀರ್, ದರ್ಶನ್, ಮಾರೇಗೌಡ, ವ್ಯವಸ್ಥಾಪಕ ರವಿಕಿರಣ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!