ಕುಣಿಗಲ್: ಕಾಂಗ್ರೆಸ್ ಪಕ್ಷ ಮುಸ್ಲಿಂ ಮುಖಂಡರನ್ನು ವ್ಯವಸ್ಥಿತವಾಗಿ ಮೂಲೆ ಗುಂಪು ಮಾಡಿ ಚುನಾವಣೆ ಸಮಯದಲ್ಲಿ ಮುಸ್ಲಿಂರ ಪರ ಎಂದು ಬಿಂಬಿಸಿಕೊಂಡು ಮುಸ್ಲಿಂರನ್ನು ಮತ ಬ್ಯಾಂಕನ್ನಾಗಿಸಿ ಲಾಭ ಪಡೆಯುತ್ತಿರುವ ತಂತ್ರದ ಬಗ್ಗೆ ಈ ಬಾರಿ ಮುಸ್ಲಿಂರು ಎಚ್ಚರಿದಿಂದ ಇರಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಸೋಮವಾರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದವರು ನನ್ನನ್ನು ಸೇರಿದಂತೆ ಜಾಫರ್ ಶರೀಫ್, ಗುಲಾಂ ನಬಿ ಅಜಾದ್,
ರೋಷನ್ ಬೇಗ್ ಅಂತಹ ಮಹಾನ್ ನಾಯಕರನ್ನು ವ್ಯವಸ್ಥಿತವಾಗಿ ಮೂಲೆ ಗುಂಪು ಮಾಡಿದ್ದಾರೆ. ಜನಾಂಗಕ್ಕೆ ಸಮಸ್ಯೆ ಬಂದಾಗ ಯಾವುದೇ ಧ್ವನಿಯಾಗದ ಕಾಂಗ್ರೆಸ್ನಿಂದ ನಮ್ಮ ಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದರು.
ಸಿದ್ದರಾಮಯ್ಯನನ್ನು ನಮ್ಮ ಸಮುದಾಯದವರು ಕೈ ಹಿಡಿಯದಿದ್ದರೆ ಚುನಾವಣೆಯಲ್ಲಿ ಗೆಲ್ಲುತ್ತಿರಲಿಲ್ಲ. ತಾವೇ ಖುದ್ದು ಪ್ರಚಾರ ಮಾಡಿ ಗೆಲ್ಲಿಸಿದ್ದು, ನಮಗೆ ಸೂಕ್ತ ಸ್ಥಾನಮಾನ ನೀಡದೆ ವಂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತವೆ ಹಾಗೆ, ಕಳೆದ ಬಾರಿ ಮುಸ್ಲಿಂ ಜನಾಂಗ ಅವರ ಮಾತಿಗೆ ಮರುಳಾಗಿ ಮತ ಹಾಕಿದ್ದು ಈ ಬಾರಿ ಆ ತಪ್ಪು ಆಗದಂತೆ ಎಚ್ಚರ ವಹಿಸಿ ತಾಲೂಕಿನಲ್ಲಿ ಡಿ.ನಾಗರಾಜಯ್ಯ ಅವರನ್ನು ಗೆಲ್ಲಿಸುವ ಜೊತೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದಲೂ ಜನಾಂಗದ ಉದ್ಧಾರ ಸಾಧ್ಯವಿಲ್ಲ. ಜೆಡಿಎಸ್ನಿಂದ ಮಾತ್ರ ಸಾಧ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದುರಾಹಂಕಾರಿ ಮನುಷ್ಯ, ಅಲ್ಪಸಂಖ್ಯಾತ ಮುಖಂಡರೂ ಸೇರಿದಂತೆ ಹಿರಿಯರಿಗೆ ಬೆಲೆ ಕೊಡುವುದಿಲ್ಲ. ಮೂರು ಬಾರಿ ಇಡಿ ದಾಳಿ ನಡೆಸಿದರೂ ಸಾಕಷ್ಟು ಹಣ ಇದೆ. ಅವರ ಸಂಬಂಧಿ ಕುಣಿಗಲ್ ಶಾಸಕ ಡಾ.ರಂಗನಾಥ ಬಳಿಯೂ ಹಣ ಇದ್ದು ಅವರು ಕೊಡುವ ಹಣದ ಆಸೆಗೆ ಬಲಿಯಾಗದೆ ಜೆಡಿಎಸ್ನ ಯೋಜನೆ ನೋಡಿ ಬೆಂಬಲಿಸಿ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಸ್ವಸಹಾಯ ಸಂಘದ ಸಾಲ ಮನ್ನಾ, ಅವೈಜ್ಞಾನಿಕವಾಗಿ ಮಾಡಲಾಗಿರುವ ಗೋವಧೆ, ಹಲಾಲ್ ನಿಷೇಧ ಇತರೆ ಕಾಯಿದೆಯನ್ನು ತೆಗೆಯಲು ಕ್ರಮ ವಹಿಸಲಾಗುವುದು ಎಂದರು.
ಜೆಡಿಎಸ್ ಮಹಿಳಾ ಘಟಕ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಮಾತನಾಡಿ, 2023ರ ವಿಧಾನಸಭೆ ಚುನಾವೆಣೆಯಂತು ಅಲ್ಪ ಸಂಖ್ಯಾತರ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ ಎಂಬುದ ಮರೆಯಬಾರದು. ಹಿಜಾಬ್ ವಿಷಯ ಬಂದಾಗ ಕುಣಿಗಲ್ ನ ಕಾಂಗ್ರೆಸ್ ಶಾಸಕರು ತುಟಿ ಬಿಚ್ಚಲಿಲ್ಲ. ಜನಾಂಗದ ನೆರವಿಗೆ ನಿಲ್ಲಲಿಲ್ಲ, ಇದೀಗ ನಿಮ್ಮ ಬಳಿ ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಿ, ಮತ ಕೇಳಲು ಬಂದಾಗ ಮಹಿಳೆಯರು ಅವರಿಗೆ ಪ್ರಶ್ನಿಸಬೇಕು. ಮುಸ್ಲಿಂರು ಕೇವಲ ಮತ ಬ್ಯಾಂಕ್ ಆಗುವ ಕಾಲ ಹೋಗಿದೆ, ಅವರು ನಿರ್ಧಾರ ಮಾಡಿದರೆ ಯಾರಿಗೆ ಬೇಕಾದರೂ ಪಾಠ ಕಲಿಸಬಲ್ಲರು ಎಂಬುದನ್ನು ಈ ಬಾರಿ ಜೆಡಿಎಸ್ ಗೆಲ್ಲಿಸಿ, ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕು. 2018ರ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಪ್ರಚಾರ ಮಾಡಿ ಕೊನೆಗೆ ಕಾಂಗ್ರೆಸ್ ಪಕ್ಷವೇ ಬಿಜೆಪಿ ಬಿ ಟೀಂ ನಂತೆ ಕೆಲಸ ಮಾಡಿತು. ಸಿದ್ದರಾಮಯ್ಯ ಅವರು ಗೆಲ್ಲಲು ಮುಸ್ಲಿಂ ಮತಗಳು ಬೇಕಿದ್ದವು.
ಆದರೆ ಸಿಎಎ, ಎನ್ಆರ್ಸಿ, ಹಲಾಲ್, ಹಿಜಾಬ್ ವಿಷಯ ಬಂದಾಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿಲ್ಲ. ಆದರೆ ಸದನದಲ್ಲಿ ಜೆಡಿಎಸ್ನ ಕುಮಾರ ಸ್ವಾಮಿ ಮಾತ್ರ ಧ್ವನಿ ಎತ್ತಿದರು. ಅಲ್ಪಸಂಖ್ಯಾತ ಮುಸ್ಲಿಂರ ಧಮನಕ್ಕೆ ಕಾಂಗ್ರೆಸ್ ಪಕ್ಷ ಅಡಿಪಾಯ ಹಾಕಿದರೆ ಬಿಜೆಪಿ ಅದರ ಮೇಲೆ ಕಟ್ಟಡ ಕಟ್ಟುತ್ತದೆ. ಈ ಬಾರಿ ಮುಸ್ಲಿಂರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುವ ಜೊತೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
ಕುಣಿಗಲ್ ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಮಾತನಾಡಿ, ಕಾಂಗ್ರೆಸ್ನವರ ಕುತಂತ್ರ ತಾಲೂಕಿನ ಅಲ್ಪಸಂಖ್ಯಾತ ಬಾಂಧವರಿಗೆ ಅರ್ಥವಾಗಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಪುರಸಭೆಯಲ್ಲಿ 6 ಮಂದಿ ಅಧ್ಯಕ್ಷರನ್ನು, ತಾಪಂನಲ್ಲಿ ನಾಲ್ಕು ಅಧ್ಯಕ್ಷರನ್ನು ಮಾಡಿದ್ದು ಜೆಡಿಎಸ್, ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಅಧಿಕಾರ ನೀಡದೆ ದ್ರೋಹ ಎಸಗಿದೆ. ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಅಂತ ಗೊತ್ತಿಲ್ಲ, ಒಬ್ಬರು ಸೀರೆ ಹಂಚಿದರೆ ಮತ್ತಿಬ್ಬರು ಸುತ್ತುತ್ತಿದ್ದಾರೆ. ಜೆಡಿಎಸ್ನಿಂದ ಮಾತ್ರ ಉತ್ತಮ ಆಡಳಿತ, ಅಭಿವೃದ್ಧಿ ಸಾಧ್ಯ ಎಂದರು.
ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಂಶುಲ್ಲಾಖಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ, ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಮುಖಂಡರಾದ ಜೀಯಾವುಲ್ಲಾ, ಆಯಿಶಾಬಿ, ಇಮ್ರಾನ್ ಪಾಶ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಡಾ.ರವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಪ್ರಮುಖರಾದ ಸುಬಾನ್ ಖುರೇಶಿ, ಲಿಯಾಖತ್, ಅಲಿಂಮಾಬಿ, ರಿಜ್ವಾನ್, ಮನೋಜ್, ಸಲ್ಮಾ ಮಹಮದ್ ಪಾಶ, ಅರ್ಬಾಜ್ ಪಾಶ, ಪ್ರಕಾಶ, ಯೂಸೂಫ್ ಖಾನ್ ಇತರರು ಇದ್ದರು.
Comments are closed.