ವೈ.ಎನ್.ಹೊಸಕೋಟೆ: ದೊಡ್ಡಹಳ್ಳಿ- ಇಂದ್ರಬೆಟ್ಟ ಗೇಟ್ ಮಾರ್ಗ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಯುವಕನ ಶವವೊಂದು ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಸುಮಾರು 25- 30 ವರ್ಷ ವಯಸ್ಸಿನ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಿ ಮೈಮೇಲೆ ಪೆಟ್ರೋಲ್ ಸುರಿದು ಗುರುತು ಸಿಗದ ರೀತಿಯಲ್ಲಿ ಸುಡಲಾಗಿದೆ. ಶವ ಪತ್ತೆಯಾದ ಸ್ಥಳ ಸದಾ ಸಂಚಾರ ಇರುವ ಮುಖ್ಯ ರಸ್ತೆಯಾಗಿದೆ.
ಆಂಧ್ರ ಪ್ರದೇಶದ ಗಡಿಗೆ ಕೆಲವೇ ಕಿ.ಮೀ ಅಂತರವಿರುವ ಈ ಪ್ರದೇಶಗಳಿಗೆ ಮದ್ಯ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ- ಹಗಲು ಎನ್ನದೆ ಬರುತ್ತಿರುತ್ತಾರೆ. ಆಂಧ್ರ ಪ್ರದೇಶದಲ್ಲಿ ಮದ್ಯದ ಬೆಲೆ ಹೆಚ್ಚಾಗಿ ಇರುವುದರಿಂದ ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಈ ಭಾಗಕ್ಕೆ ಮದ್ಯ ಪ್ರಿಯರು ಬರುತ್ತಿದ್ದಾರೆ. ಹಾಗಾಗಿ ಈ ಪ್ರದೇಶದಲ್ಲಿ ಕಳ್ಳತನ ಕುಡಿತ ಸಾಮಾನ್ಯದ ಸಂಗತಿಗಳಾಗಿ ಕಂಡು ಬರುತ್ತಿದ್ದು, ಅವು ಕೊಲೆಗಳ ರೂಪಕ್ಕೂ ತಿರುಗಿರುವ ಸಾಧ್ಯತೆ ಇದೆ.
ಮರಣಿಸಿರುವ ವ್ಯಕ್ತಿ ಯಾರು ಎಂಬುದರ ಬಗ್ಗೆ ತನಿಖೆಯಿಂದಷ್ಟೆ ತಿಳಿಯಬಹುದಾಗಿದೆ. ಸ್ಥಳಕ್ಕೆ ಮಧುಗಿರಿ ಡಿಎಸ್ಪಿ ವೆಂಕಟೇಶ್ ನಾಯ್ಡು, ಸಿಪಿಐ ಕಾಂತರೆಡ್ಡಿ, ಪಿಎಸ್ಐ ಅರ್ಜುನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.