ಕುಣಿಗಲ್: ಮತದಾರರಿಗೆ ಹಂಚಲು ಸಾಗಿಸಲಾಗುತ್ತಿದ್ದ ಉಡುಗೊರೆ ಸಂಗ್ರಹಿಸಿದ್ದ ವಾಹನ ತಡೆದು ಚುನಾವಣಾಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಕಂದಾಯ ಇಲಾಖಾಧಿಕಾರಿಗಳು ದಾಳಿ ನಡೆಸಿ ವಾಹನ ಹಾಗೂ ಉಡುಗೊರೆ ಸಾಮಾಗ್ರಿ ವಶಕ್ಕೆ ಪಡೆದು ಪೊಲೀಸರಿಗೆ ದೂರು ನೀಡಿರುವ ಘಟನೆ ಮಂಗಳವಾರ ನಡೆದಿದೆ.
ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎನ್ನಲಾದ ಶಾಸಕರ, ಕೆಪಿಸಿಸಿ ಅಧ್ಯಕ್ಷರ, ಸಂಸದರ ಭಾವಚಿತ್ರ ಇರುವ ಡಿನ್ನರ್ ಸೆಟ್ ತುಂಬಿದ್ದ ಬಾಕ್ಸ್ಗಳನ್ನು ಹುತ್ರಿದುರ್ಗ ಹೋಬಳಿಯ ಯಲಿಯೂರು- ಬುಕ್ಕಸಾಗರ ಮಾರ್ಗ ಮಧ್ಯೆ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿಕೊಂಡು ಕಂಟೈನರ್ ಲಾರಿಯಿಂದ ಟ್ರಾಕ್ಟರ್ಗೆ ಬಾಕ್ಸ್ ಇಳಿಸುತ್ತಿದ್ದುದನ್ನು ಪ್ರಶ್ನಿಸಿದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದು. ಈ ವೇಳೆ ಗ್ರಾಮಸ್ಥರಿಗೂ, ಕಾಂಗ್ರೆಸ್ ಕಾರ್ಯಕರ್ತರಿಗೂ ವಾಗ್ವಾದ ನಡೆದಿದ್ದು, ಗ್ರಾಮಸ್ಥರು ಸಹಾಯಕ ಚುನಾವಣಾಧಿಕಾರಿಗಳಾದ ಕುಣಿಗಲ್ ತಹಶೀಲ್ದಾರ್ ಅವರಿಗೆ ಕರೆ ಮಾಡಿ, ಪೊಲೀಸರಿಗೂ ಮಾಹಿತಿ ನೀಡಿದರು.
ಈ ಮಧ್ಯೆ ಜೆಡಿಎಸ್ ಮುಖಂಡರು ಸಹ ಘಟನೆ ಖಂಡಿಸಿ ಆಕ್ಷೇಪಿಸಿದ್ದು, ವಿಷಯ ತಿಳಿದ ಕುಣಿಗಲ್ ಸಿಪಿಐ ಗುರುಪ್ರಸಾದ್, ಪಿಎಸೈ ಜಮಾಲ್ ಮತ್ತು ಸಿಬ್ಬಂದಿ, ಹುತ್ರಿದುರ್ಗ ಉಪ ತಹಶೀಲ್ದಾರ್ ಗೋವಿಂದರಾಜು, ರಾಜಸ್ವ ನಿರೀಕ್ಷಕ ಮಲ್ಲಿಕಾರ್ಜುನ ಮತ್ತು ಸಿಬ್ಬಂದಿ ಕಂಟೈನರ್ ಲಾರಿ ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಕುಣಿಗಲ್ ತಾಲೂಕು ಕಚೇರಿ ಆವರಣಕ್ಕೆ ಕರೆ ತಂದರು.
ಘಟನೆಗೆ ಸಂಬಂಧಿಸಿದಂತೆ ಸೊಂದಲಗೆರೆಯ ಚಲುವಯ್ಯ ಎಂಬುವರು ತಹಶೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರೆ, ಹುತ್ರಿದುರ್ಗ ಉಪ ತಹಶೀಲ್ದಾರ್ ಮತದಾರರಿಗೆ ಆಮೀಶ ಒಡ್ಡಲು ಶಾಸಕರ ಭಾವಚಿತ್ರ ಇರುವ ಡಿನ್ನರ್ ಸೆಟ್ ತುಂಬಿದ ಕೆಲ ಬಾಕ್ಸ್ಗಳು ಸಾಗಿಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಸೇರಿದಂತೆ ಇತರರ ಮೇಲೆ ದೂರು ನೀಡಿದ್ದಾರೆ. ಘಟನೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ದೂರು ಸ್ವೀಕರಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Comments are closed.