ತುಮಕೂರು: ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ದುಡಿದರೆ ಜನಪ್ರತಿನಿಧಿಗಳು ಸೇರಿದಂತೆ ಸಮಾಜದಿಂದ ಸಹಕಾರ ಸಿಗಲಿದೆ ಎಂಬುದಕ್ಕೆ ಇಷ್ಟು ದೊಡ್ಡ ಸಮುದಾಯ ಭವನ ನಿರ್ಮಿಸಿರುವ ಸಮಿತಾ ಸಮಾಜದ ಮುಖಂಡರೇ ಸಾಕ್ಷಿಯಾಗಿದ್ದಾರೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಗಾರ್ಡನ್ ರಸ್ತೆಯಲ್ಲಿರುವ ತುಮಕೂರು ಜಿಲ್ಲಾ ಸವಿತಾ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ, ಶ್ರೀಸವಿತಾ ಮಹರ್ಷಿಗಳ ಜಯಂತೋತ್ಸವ ಹಾಗೂ ಶ್ರೀತ್ಯಾಗರಾಜರ 176ನೇ ಆರಾಧನಾ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ 20-30 ವರ್ಷಗಳ ಹಿಂದೆ ಸರಕಾರದಿಂದ ನೀಡಿದ್ದ ಸಿಎ ಸೈಟ್ನಲ್ಲಿ ಸಣ್ಣದಾಗಿ ಒಂದು ಕಟ್ಟಡ ಕಟ್ಟಿಕೊಂಡು ಸಮುದಾಯ ಭವನದ ಕನಸು ಕಾಣುತ್ತಿದ್ದ ಸವಿತಾ ಸಮಾಜಕ್ಕೆ ಮಂಜೇಶ್ನಂತಹ ಯುವಕರು ಅಧ್ಯಕ್ಷರಾದ ನಂತರ ನಿರಂತರ ಹೋರಾಟ ನಡೆಸಿ ಸುಮಾರು 40 ಲಕ್ಷ ರೂ. ಅನುದಾನವನ್ನು ರಾಜಕಾರಣಿಗಳು ಮತ್ತು ದಾನಿಗಳಿಂದ ಪಡೆದು ಸುಂದರ ಭವನ ನಿರ್ಮಿಸಿದ್ದಾರೆ. ಇದರ ಹಿಂದಿನ ಶಕ್ತಿ ಮಂಜೇಶ್ ಮತ್ತು ತಂಡದವರು, ಇವರಗಿಂತ ಹಿಂದೆ ಇದ್ದ ಅಧ್ಯಕ್ಷರು ಕೆಲಸ ಮಾಡಿದ್ದಾರೆ. ಇಡೀ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದ್ದರ ಪ್ರತಿಫಲವಾಗಿ ಈ ಕಟ್ಟಡ ನಿರ್ಮಾಣಗೊಂಡಿದೆ. ಸಮುದಾಯ ಭೌತಿಕವಾಗಿ ಬೆಳೆಯುವ ಜೊತೆಗೆ, ಭೌದ್ದಿಕವಾಗಿಯೂ ಬೆಳೆಯುವಂತೆ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವಂತಾಗಲಿ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ಸವಿತಾ ಸಮಾಜ ಸೇರಿದಂತೆ ತಳ ಸಮುದಾಯಗಳನ್ನು ಗುರುತಿಸಿ ಅವರಿಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡುತ್ತಾ ಬಂದಿದ್ದಾರೆ. ಇಂದು ನಾನು ಶಾಸಕನಾಗಿದ್ದರೆ ನನ್ನನ್ನು ಗುರುತಿಸಿ ಯಡಿಯೂರಪ್ಪ ಅವರು ಟಿಕೆಟ್ ನೀಡಿದ್ದು, ಹಾಗೆಯೇ ಮೋದಿ ಅವರು ನಡೆಸಿದ ಅಭಿವೃದ್ಧಿ ಕಾರ್ಯಗಳು ಈ ಬಾರಿಯೂ ಸವಿತಾ ಸಮಾಜ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಜೋತಿಗಣೇಶ್ ಮನವಿ ಮಾಡಿದರು.
ನಿರ್ಮಿತಿ ಕೇಂದ್ರದ ರಾಜಶೇಖರ್ ಮಾತನಾಡಿ, ಶಾಸಕರು ಮತ್ತು ದಾನಿಗಳ ಅನುದಾನ ಬಳಸಿಕೊಂಡು ಸಮುದಾಯದ ಮುಖಂಡರು ಹೇಳಿದಂತೆ ಭವನ ನಿರ್ಮಿಸಿಕೊಟ್ಟಿದ್ದೇವೆ. ಭವನ ನಿರ್ಮಾಣದ ಜೊತೆಗೆ ನಿರ್ವಹಣೆಯೂ ಮುಖ್ಯ, ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದರು.
ತುಮಕೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಮಂಜೇಶ್ ಮಾತನಾಡಿ, ಸವಿತಾ ಸಮಾಜದ ಮುಖಂಡರ ಒಗ್ಗಟ್ಟಿನ ಫಲವಾಗಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯದ ಅಗತ್ಯವಿದ್ದು, ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ನಮ್ಮದೆ ಜಾಗವಿದ್ದು, ಅನುದಾನ ದೊರೆತರೆ ಹಾಸ್ಟೆಲ್ ನಿರ್ಮಾಣಕ್ಕೆ ಹೆಚ್ಚು ಅನುಕೂಲವಾಗಲಿದೆ. ಸಮುದಾಯ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಮುತ್ತಣ್ಣ, ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣ, ಉದ್ಯಮಿ ಚಂದ್ರಮೌಳಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಭಾಗ್ಯ, ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ನರೇಶ್ ಕುಮಾರ್, ಜಿಲ್ಲಾ ಸಂಘದ ಗೌರವಾಧ್ಯಕ್ಷ ಟಿ.ವಿ.ರಂಗನಾಥ್, ಎ.ಲೋಕೇಶ್, ಪಾರ್ಥಸಾರಥಿ.ಬಿ.ಎಸ್, ಮೇಲಾಕ್ಷಪ್ಪ.ಟಿ.ಆರ್, ಸುಬ್ರಮಣ್ಯ ಇತರರು ಇದ್ದರು.
Comments are closed.