ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

112

Get real time updates directly on you device, subscribe now.


ತುಮಕೂರು: ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ನೇತೃತ್ವದಲ್ಲಿ ನಗರದ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಖಾಲಿ ಸಿಲಿಂಡರ್ ಹೊತ್ತು ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭದ್ರಮ್ಮ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆ ಹೆಚ್ಚಳ ನೀತಿ ಖಂಡಿಸಿದರಲ್ಲದೆ, ಅಗತ್ಯ ವಸ್ತುಗಳ ಬೆಲೆ ಇಳಿಸುವ ಮೂಲಕ ಜನಸಾಮಾನ್ಯರ ನೆರವಿಗೆ ಬರುವಂತೆ ಸರಕಾರವನ್ನು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ, ಮನಮೋಹನ್ ಸಿಂಗ್ ಕಾಲದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದರೆ ವೀರಾವೇಷದಿಂದ ಬೀದಿಗಿಳಿಯುತ್ತಿದ್ದ ಬಿಜೆಪಿ ಮಹಿಳಾ ಮಣಿಗಳು ಗ್ಯಾಸ್ ಸಿಲಿಂಡರ್ ಬೆಲೆ 1100 ದಾಟಿದರು ಬಾಯಿ ಬಿಡುತ್ತಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮನಮೋಹನ್ ಸಿಂಗ್ ವಯಸ್ಸಿನಂತೆ ಗ್ಯಾಸ್ ಬೆಲೆ ಹೆಚ್ಚಾದರೆ ಬಡವರು ಬದುಕುವುದು ಹೇಗೆ, ಇಂದಿನ ಬೆಲೆ ಹೆಚ್ಚಳದಲ್ಲಿ ಬಡವರು ಹೇಗೆ ಬದುಕುತಿದ್ದಾರೆ ಎಂದು ನೋಡುವ ವ್ಯವದಾನವೂ ಇಲ್ಲದಂತಾಗಿದೆ. ಇದು ಈ ದೇಶದ ದುರಂತ ಎಂದರು.

ಗ್ಯಾಸ್ ಬೆಲೆ 450 ರೂ. ಇದ್ದಾಗ ಸಬ್ಸಿಡಿ ದೊರೆಯುತಿತ್ತು. ಆದರೆ ಇಂದು ಬೆಲೆ 1100 ರೂ. ಆದರೂ ಸಬ್ಸಿಡಿ ಇಲ್ಲ, ಉಜ್ವಲ ಹೆಸರಿನಲ್ಲಿ ಮನೆ ಮನೆಗೆ ಸಿಲಿಂಡರ್ ವಿತರಿಸಿ ಇರುವ ಒಲೆಯನ್ನು ಕಿತ್ತು ಹಾಕಿ ಮಹಿಳೆಯರು ಕಣ್ಣೀರು ಹಾಕುವಂತಾಗಿದೆ. ಹೊಗೆ ರಹಿತ ಅಡುಗೆ ಎಂಬ ನರೇಂದ್ರ ಮೋದಿ ಅವರ ಘೋಷಣೆ ಹುಸಿಯಾಗಿದೆ. ನಮ್ಮ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಹೊಗೆ ಬದಲು ರಕ್ತ ಸುರಿಸುತ್ತಿದ್ದಾರೆ. ಈ ಶಾಪ ಬಿಜೆಪಿ ಪಕ್ಷವನ್ನು ತಟ್ಟದೆ ಬಿಡದು, ಇದರ ಫಲ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಗೀತಾ ರಾಜಣ್ಣ ತಿಳಿಸಿದರು.

ಗ್ಯಾಸ್ ನ ಜೊತೆಗೆ ಅಡುಗೆ ಎಣ್ಣೆ, ಇಂಧನ ಬೆಲೆ ಹೆಚ್ಚಾಗಿವೆ. ಮನೆ ನಿಭಾಯಿಸಿ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಒಂದೆಡೆ ಅಡುಗೆ ಅನಿಲ ಬಿಸಿ, ಇನ್ನೊಂದೆಡೆ ಅಡುಗೆ ಎಣ್ಣೆ ಹೆಚ್ಚಳ ಎರಡು ಕೂಡ ನುಂಗಲಾರದ ತುತ್ತಾಗಿದೆ. ಸರಕಾರ ಕೂಡಲೇ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಮಹಿಳೆಯರು ಸೇರಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.

ನೆರೆ ಬಂದಾಗ, ಬರಬಂದಾಗ, ಕೊರೊನ ಬಂದಾಗ ಬಾರದ ಮೋದಿ ಚುನಾವಣೆ ಇರುವಾಗ ವಾರಕ್ಕೆ ಎರಡು ಬಾರಿ ರಾಜ್ಯಕ್ಕೆ ಬಂದು ಕೈ ಬೀಸಿ ಹೋಗುತ್ತಿದ್ದಾರೆ. 2019ರಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಕಿಸಾನ್ ಸನ್ಮಾನ್ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರಿ ಮರುಳು ಮಾಡುವ ಕೆಲಸ ಮಾಡುತ್ತಿದ್ದೀರಿ. ಇದು ರಾಜ್ಯದಲ್ಲಿ ಹೆಚ್ಚು ಕಾಲ ನಡೆಯದು. ನಿಮಗೆ ಕರ್ನಾಟಕದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ರಾಜಣ್ಣ ತಿಳಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡೆ ಸುವರ್ಣಮ್ಮ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಾಳಯ್ಯ, ವೈದ್ಯಕೀಯ ಘಟಕ ಡಾ.ಫರ್ಹ್ಹಾನಾ, ನಾಗಮಣಿ, ಸುಜಾತ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಆರುಂಧತಿ, ಗೀತಮ್ಮ, ಕಾರ್ಮಿಕ ಘಟಕದ ಮಹಿಳಾ ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!