ಕುಣಿಗಲ್: ಜೆಡಿಎಸ್ ಪಕ್ಷಕ್ಕೆ ನೀಡುವ ಮತ ಸಂಪೂರ್ಣ ವ್ಯರ್ಥ, ಜೆಡಿಎಸ್ ಗೆ ಮತ ಹಾಕಿದರೆ ಅದಕ್ಕೆ ಬೆಲೆ ಇಲ್ಲ. ಏಕೆಂದರೆ ಜೆಡಿಎಸ್ ಗೆ ಮತ ಹಾಕಿದ್ರೆ ಕಾಂಗ್ರೆಸ್ ಗೆ ಮತ ಹಾಕಿದಂತೆ ಎಂಬುದನ್ನು ಮತದಾರರು ನೆನಪಿಡಬೇಕು ಎಂದು ಸಚಿವ ಆರ್.ಆಶೋಕ್ ಹೇಳಿದರು.
ಗುರುವಾರ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, 2018ರ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮಾಡಿ ಜೋಡಿ ಎತ್ತುಗಳಂತೆ ಹೇಳಿ ಕೊನೆಗೆ ಬಡಿದಾಡಿಕೊಂಡರು. ಈಗಲೂ ಅಷ್ಟೆ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲಿಸುತ್ತದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಬಿಜೆಪಿ ಅಧಿಕಾರಕ್ಕೆ ತರಬೇಕೆಂದರು.
ನರೇಂದ್ರ ಮೋದಿ, ಅಮಿತ್ ಶಾ ಇರುವ ತನಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ತಲೆ ಎತ್ತಲು ಆಗುವುದಿಲ್ಲ ಎಂಬುದ ಮತದಾರರು ನೆನಪಿಡಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಸದೃಢವಾಗಿ ಬಲಿಷ್ಠವಾಗಿದೆ. ನೆರೆ ದೇಶಗಳಾದ ಚೀನಾ, ಪಾಕಿಸ್ತಾನ, ಶ್ರೀಲಂಕ ದಿವಾಳಿಯಾಗಿವೆ. ಆದರೆ ಭಾರತ ಸದೃಢವಾಗಿದೆ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಹೋದೆಡೆಯಲ್ಲಾ ಕಾಂಗ್ರೆಸ್ ಸೋತಿದೆ, ಆದರೆ ಪ್ರಧಾನಿ ಮೋದಿಜಿ ರಾಜ್ಯ, ದೇಶವನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿಯೊಬ್ಬರೆ ನಾಯಕರು, ಇದು ಕಾಂಗ್ರೆಸ್ ಸ್ಥಿತಿ, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜನರ ಬಗ್ಗೆ ಚಿಂತನೆ ಮಾಡೊಲ್ಲ. ಅಧಿಕಾರ ಹಿಡಿಯಲು ಬರಿ ಸುಳ್ಳು ಆಶ್ವಾಸನೆ ನೀಡಿ ಜನರನ್ನು ವಂಚಿಸುತ್ತಾರೆ. ಇದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮತದಾರರು ಜ್ಞಾಪಕಕ್ಕೆ ಬರಲಿಲ್ಲವೆ. ಆಗ ಯಾಕೆ ಎರಡು ಸಾವಿರ ನೀಡಲಿಲ್ಲ. ಇನ್ನು ಡಿಕೆಶಿ ಇಂಧನ ಸಚಿವರಾಗಿದ್ದಾಗ 500 ಯುನಿಟ್ ಪ್ರತಿ ಕುಟುಂಬಕ್ಕೆ ಕೊಡಬೇಕಿತ್ತು, ಯಾಕೆ ಕೊಡಲಿಲ್ಲ.
ಬರಿ ಸುಳ್ಳು ಆಶ್ವಾಸನೆ ನೀಡಿ ಮತದಾರರ ವಂಚಿಸುತ್ತಾ ಭರವಸೆಯಲ್ಲೆ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಭರವಸೆ ನೀಡಿ ಅಧಿಕಾರಕ್ಕೆ ಬಂದು ಇಂದಿಗೂ ಯಾವುದೇ ಯೋಜನೆ ಕೊಟ್ಟಿಲ್ಲ. ಕಾಂಗ್ರೆಸ್ ನ ಮಾತಿಗೆ ಮರುಳಾಗದೆ ಅಭಿವೃದ್ಧಿಯತ್ತ ಚಿಂತಿಸುವ ಬಿಜೆಪಿಗೆ ಮತ ನೀಡಿ ಕಾಂಗ್ರೆಸನ್ನು ಮನೆಗೆ ಕಳಿಸಬೇಕು ಎಂದರು.
ಸಚಿವ ಮುನಿರತ್ನ ಮಾತನಾಡಿ, 2018ರಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿಕೊಂಡ ಯಡವಟ್ಟಿನಿಂದ ಇಂದು ಕೆಲವೆ ಮತಗಳ ಅಂತರದಲ್ಲಿ ಬಿಜೆಪಿ ಅಧಿಕಾರ ವಂಚಿತವಾಗಿದೆ. ಇದನ್ನು ಮಗಂಡು ತಮ್ಮೊಳಗಿನ ಭಿನ್ನಾಭಿಪ್ರಾಯ ಬದಿಗಿಟ್ಟು ಈ ಬಾರಿ ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು. ಸ್ಥಳೀಯ ಕಾಂಗ್ರೆಸ್ ಶಾಸಕರು ಯಾವುದೇ ಜನಪರ ಅಭಿವೃದ್ಧಿ ಕಾರ್ಯ ಮಾಡದೆ ನಿರ್ಲಕ್ಷ್ಯ ವಹಿಸಿರುವ ಕಾರಣ ಅವರಿಗೆ ಪಾಠ ಕಲಿಸಿ ಬಿಜೆಪಿ ಗೆಲ್ಲಿಸಿ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಮಾತನಾಡಿ, ಬಿಜೆಪಿಗೆ ಹಾಕುವ ಪ್ರತಿಯೊಂದು ಮತವೂ ಪ್ರಧಾನಿ ಮೋದಿಯವರ ಕೈ ಬಲಪಡಿಸುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು. ದೇಶವು ಇಂದು ಉತ್ತಮ, ಮೇರು ವ್ಯಕ್ತಿತ್ವದ ಪ್ರಧಾನಿ ಮೋದಿಯ ಕೈಯಲ್ಲಿ ಸುರಕ್ಷಿತವಾಗಿದೆ. ಹಲವು ಜನಪರ ಕಾರ್ಯಕ್ರಮಗಳನ್ನು ಮೋದಿಜಿ ರೂಪಿಸಿ ಅನುಷ್ಠಾನ ಗೊಳಿಸುತ್ತದ್ದು ರಾಜ್ಯ ಸರ್ಕಾರವೂ ಅದೆ ಮಾರ್ಗದಲ್ಲಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಕೆಲವರ ದಬ್ಬಾಳಿಕೆ, ದೌರ್ಜನ್ಯ ರಾಜಕಾರಣಕ್ಕೆ ಇತಿಶ್ರೀ ಹಾಡಿ ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು. ಅಭ್ಯರ್ಥಿ ಯಾರೆ ಆಗಲಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ಬಿಜೆಪಿ ಗೆಲ್ಲಿಸಬೇಕು ಎಂದರು.
ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿ, ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ಕಾಂಗ್ರೆಸ್ ಶಾಸಕರ ದೌರ್ಜನ್ಯ, ದಬ್ಬಾಳಿಕೆ ಕೊನೆಗೊಳಿಸಲು ಇದೆ ಅವಕಾಶ, ಬೆಂಗಳೂರಿನಿಂದ ಕೆಲವರು ಬರುತ್ತಾರೆ, ಕಟೌಟ್, ಬ್ಯಾನರ್ ಹಾಕಿಕೊಂಡು ಬಾಡೂಟ ಬಡಿಸಿ ಜನಸೇವೆ ಮಾಡುತ್ತೇವೆ ಎಂದು ಹೇಳುತ್ತಾರೆ. ಕೊನೆಗೆ ಬೆಂಗಳೂರಿನೆಡೆಗೆ ಹೋಗುತ್ತಾರೆ. ಮತದಾರರು ಇಂತಹ ಮುಖಂಡರ ಬಗ್ಗೆ ಎಚ್ಚರದಿಂದಿರಬೇಕು ಎಂದರು.
ತಾಲೂಕಿನಲ್ಲಿ ಬಿಜಪಿ ಅಭ್ಯರ್ಥಿ ಎಂದು ಹೇಳಿಕೊಂಡು ಇತ್ತೀಚೆಗೆ ಹಲವು ಕಾರ್ಯಕ್ರಮ ಆಯೋಜಿಸಿ ಸೀರೆ ವಿತರಿಸಿದ್ದ ಮುಖಂಡ ರಾಜೇಶ್ ಗೌಡ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಮುಖಂಡರಾದ ಅಶ್ವಥನಾರಾಯಣ, ವೈ.ಎಚ್.ಹುಚ್ಚಯ್ಯ, ಹರ್ಷವರ್ಧನ್ ಗೌಡ, ಜಿಲ್ಲಾಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಭೈರಪ್ಪ, ತಾಲೂಕು ಅಧ್ಯಕ್ಷ ಬಲರಾಮ, ಪದಾಧಿಕಾರಿಗಳಾದ ದೇವರಾಜ, ದಿಲೀಪ, ಧನುಶ್, ಗೋಪಿ, ನಾಗಣ್ಣ, ತಿಮ್ಮಪ್ಪ, ಅಮರ್, ಅನೂಪ್ ಇತರರು ಇದ್ದರು.
Comments are closed.