122 ಕೆರೆ ತುಂಬಿಸಿ ನೀರಿನ ಸಮಸ್ಯೆ ನೀಗಿಸ್ತೇವೆ

ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ಮಾಡಿದ ಸಿಎಂ ಭರವಸೆ

133

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಬರಪೀಡಿತ, ಎತ್ತರದ ಪ್ರದೇಶವಾದ ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಸುಮಾರು 122 ಕೆರೆಗಳಿಗೆ 4.5 ಟಿಎಂಸಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಈ ಭಾಗದ ನೀರಿನ ಕೊರತೆ ನೀಗಿಸಲಾಗುವುದು ಹಾಗೂ ಜೆಜೆಎಂ ಯೋಜನೆಯಡಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವಿಧ ಕಟ್ಟಡ ಕಾಮಗಾರಿಗಳ ಲೋಕಾರ್ಪಣೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಹಳ ಎತ್ತರ ಪ್ರದೇಶವಾದ ಕಾರಣ ಹೇಮಾವತಿ ಯೋಜನೆಯಿಂದ ಈ ಕ್ಷೇತ್ರಕ್ಕೆ ಯಾವುದೇ ಲಾಭವಿರದ ಕಾರಣ ಜೆ.ಸಿ.ಪುರ ಲಿಫ್ಟ್ ಫೇಸ್-01 ನೀರಾವರಿ ಯೋಜನೆ ಮೂಲಕ ಹೆಚ್ಚಿನ ನೀರನ್ನು ಈ ಭಾಗಕ್ಕೆ ಹರಿಸಲಾಗಿದೆ. ದೊಡ್ಡ ದೊಡ್ಡ ನೀರಾವರಿ ಯೋಜನೆಗಳಿಂದಾಗಿ ಇನ್ನು ಮುಂದೆ ಹಲವಾರು ವರ್ಷಗಳ ಕಾಲ ಈ ಭಾಗದಲ್ಲಿ ಅಂತರ್ಜಲ ಹೆಚ್ಚಲಿದ್ದು, ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ನೂತನ ತಾಲ್ಲೂಕು ಆಡಳಿತ ಸೌಧ, 5 ವಸತಿ ಶಾಲೆಗಳನ್ನು ಸಚಿವ ಮಾಧುಸ್ವಾಮಿಯವರು ತಾಲ್ಲೂಕಿಗೆ ನೀಡುವ ಮೂಲಕ ಜನಪರ ಜನಕಲ್ಯಾಣ ನಿಲುವು ಹೊಂದಿದ್ದಾರೆ ಎಂದರು.
ಕೃಷಿ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಅಭಿವೃದ್ಧಿ ಹೊಂದಿದ್ದಲ್ಲಿ ರಾಜ್ಯದ ಜಿಡಿಪಿ ಹೆಚ್ಚುತ್ತದೆ. ತುಮಕೂರು ಜಿಲ್ಲೆಯ ಕರ್ನಾಟಕದ ಅಭಿವೃದ್ಧಿಗೆ ಪೂರಕ, ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಮಲ್ಟಿಮೋಡ್ ಪಾರ್ಕ್ ವಿಶೇಷ ಹೂಡಿಕೆ ವಲಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಫಲವತ್ತಾದ ಜಿಲ್ಲೆಯ ಅಡಿಕೆ ಹಾಗೂ ತೆಂಗಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಈ ಬೆಳೆಗಳಿಗೆ ಸ್ಥಿರತೆ ಮತ್ತು ಮಾರುಕಟ್ಟೆ ಅತ್ಯವಶ್ಯಕತೆಯಿದ್ದು, ಇವು ಎರಡನ್ನೂ ಸಹ ಒದಗಿಸಲಾಗಿದೆ ಎಂದರು.
ಎತ್ತಿನಹೊಳೆ ಯೋಜನೆ ಕೆಲಸ ಬಹುತೇಕ ಮುಗಿಯುತ್ತಿದ್ದು, ಬರುವ ಜೂನ್ ಮಾಹೆ ವೇಳೆಗೆ ನೆರೆಯ ಸಕಲೇಶಪುರ, ಅರಸೀಕೆರೆ ನಂತರ ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕಿಗಳಿಗೆ ನೀರು ಹರಿಯಲಿದೆ ಎಂದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ಕರ್ನಾಟಕದ 53 ಲಕ್ಷ ರೈತರಿಗೆ 16 ಸಾವಿರ ಕೋಟಿ ಮತ್ತು ತಾಲ್ಲೂಕಿನ 31,605 ರೈತರಿಗೆ 10 ಸಾವಿರ ಹಣ ರೈತರ ಖಾತೆಗೆ ಜಮೆ ಆಗಿದೆ. ಇದಕ್ಕಾಗಿ 89 ಕೋಟಿ ವ್ಯಯಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 3646 ರೈತರಿಗೆ ಯೋಜನೆಯ ಲಾಭ ದೊರಕಿದೆ ಎಂದರು.
ಚಿಕ್ಕನಾಯಕನಹಳ್ಳಿ, ಹುಳಿಯಾರ್ ಪಟ್ಟಣಕ್ಕೆ ಅಮೃತ ಯೋಜನೆಯಡಿ 15 ಕೋಟಿ ರೂ. ವೆಚ್ಚದಲ್ಲಿ 38 ಕಾಮಗಾರಿ ಕೈಗೊಳ್ಳಲಾಗಿದೆ. ಅದೇ ರೀತಿ ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ 176 ಮಹಿಳಾ ಸ್ವಸಹಾಯ ಸಂಘಕ್ಕೆ 17 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ವರ್ಷದಲ್ಲಿ ಜೆಜೆಎಂ ಯೋಜನೆಯಡಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ ಎಂದರು.

ಸಚಿವ ಮಾಧುಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಜನತೆ ಮನಗಾಣಬೇಕಿದೆ. ತಾಲ್ಲೂಕಿಗೆ 15 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ, 5 ವಸತಿಶಾಲೆ, 55 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಯೋಜನೆ, ಸ್ಲಂ ಬೋರ್ಡ್ ವತಿಯಿಂದ 48 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಲಾಗಿದೆ. ತಾಲ್ಲೂಕಿನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಡೆಯುತ್ತಿವೆ. ತಾಲ್ಲೂಕಿಗೆ ಒಂದು ಪಾಲಿಟೆಕ್ನಿಕ್ ಕಾಲೇಜ್ ನೀಡಲಾಗಿದೆ. ಚಿ.ನಾ.ಹಳ್ಳಿ ಹಾಗೂ ಹುಳಿಯಾರ್ ಗೆ 2 ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಯೂ ಕೂಡ ಆಗಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತಾಲ್ಲೂಕಿನ ಆಡಳಿತದಲ್ಲಿ ಆಗಿರುವ ಬದಲಾವಣೆಯನ್ನು ಜನತೆ ಗಮನಿಸಬೇಕು. ರಾಜಕಾರಣವನ್ನು ವ್ರತವನ್ನಾಗಿ ಸ್ವೀಕರಿಸಿದ ಶ್ರೇಷ್ಠ ರಾಜಕಾರಿಣಿ ಮಾಧುಸ್ವಾಮಿಯವರು ಅನೇಕ ಶ್ರೇಷ್ಠ ಜನ ಕಲ್ಯಾಣ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 20 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತು, ಪ್ರಮಾಣ ಪತ್ರ ನೀಡಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಎಂಎಲ್ಸಿ ಚಿದಾನಂದಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ, ಪುರಸಭೆ ಅಧ್ಯಕ್ಷೆ ಪುಷ್ಪ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!