ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಕುಂಬಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ದಿನನಿತ್ಯ ತರಗತಿಗೆ ತಡವಾಗಿ ಬರುವುದು ಮತ್ತು ನಿಗದಿತ ಸಮಯಕ್ಕೂ ಮೊದಲೇ ಶಾಲೆಯಿಂದ ಬೇಗ ಹೊರಡುವುದನ್ನು ಪರಿಪಾಠ ಮಾಡಿಕೊಂಡಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಊರಿನ ಮುಖಂಡರು ಶಿಕ್ಷಕನ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರಿತ್ತಿದ್ದಾರೆ.
ದೂರು ನೀಡುವುದಕ್ಕೂ ಮುನ್ನ ಸಾಕಷ್ಟು ಸಾರಿ ಬುದ್ಧಿವಾದ ಹೇಳಿದರೂ ನಡವಳಿಕೆ ಬದಲಾಯಿಸಿಕೊಳ್ಳದ ಕಾರಣ ಶಿಕ್ಷಕನ ವರ್ತನೆಗೆ ಬೇಸತ್ತ ಮುಖಂಡರು ಮುಖ್ಯ ಶಿಕ್ಷಕ ಉಮೇಶ್ ಎನ್ನುವವರ ವಿರುದ್ಧ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಇತ್ತೀಚೆಗಷ್ಟೇ ಶಾಲೆಗೆ ದಿಢೀರ್ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ನಾಲ್ಕು ಗಂಟೆ ವೇಳೆಗೆ ಶಿಕ್ಷಕ ಶಾಲೆಯಲ್ಲಿ ಇಲ್ಲದಿರುವ ಕಾರಣ ನೋಟಿಸ್ ನೀಡಿದ್ದಾರೆ.
ಇದಾದ ನಂತರವೂ ತನ್ನ ಹಳೆ ಜಾಳಿಯನ್ನೇ ಮುಂದುವರೆಸಿದ ಶಿಕ್ಷಕನ ವಿರುದ್ಧ ಬೇಸತ್ತ ಗ್ರಾಮಸ್ಥರು ಶನಿವಾರ ವಿಳಂಬವಾಗಿ ಶಾಲೆಗೆ ಬಂದ ಶಿಕ್ಷಕನನ್ನು ತಡೆದಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತರಾಜು, ಶಾಲೆ ಎಸ್ಡಿಎಂಸಿ ಅಧ್ಯಕ್ಷ ಪಾತಯ್ಯ, ಗ್ರಾಮಸ್ಥರಾದ ಗಂಗಾಧರ್, ಜಯಣ್ಣ, ಗಿರೀಶ, ಕೃಷ್ಣಮೂರ್ತಿ, ಭದ್ರಣ್ಣ, ಮಂಜುನಾಥ್ ಮುಂತಾದವರು ಶಿಕ್ಷಕನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ಸಿಆರ್ಪಿ ರವಿ ಎಂಬುವರೊಂದಿಗೆ ಶಾಲೆಯಲ್ಲಿ ಪರಿಶೀಲನೆ ನಡೆಸಿದ ಗ್ರಾಮಸ್ಥರಿಗೆ ಅವಧಿ ಮೀರಿದ ಹಾಲಿನ ಪಾಕೆಟ್ ಕಂಡು ಬಂದಿವೆ. ಇದರ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರಿಗೆ ಉತ್ತರ ಹೇಳಲು ಶಿಕ್ಷಕ ತಡವರಿಸಿದ್ದಾನೆ. ಇದರಿಂದ ತಯಾರಿಸಿದ ಹಾಲನ್ನು ನೀಡದಂತೆ ಆಗ್ರಹಿಸಿ ವಿಷಯವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಶಿಕ್ಷಕನ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಶಾಲೆಗೆ ಭೇಟಿ ನೀಡಿದಾಗ ಆ ಸಮಯದಲ್ಲಿ ಶಿಕ್ಷಕ ಶಾಲೆಯಲ್ಲಿ ಇರುವುದಿಲ್ಲ. ಅದಕ್ಕಾಗಿ ನೋಟಿಸ್ ನೀಡಿದ್ದು, ಈ ನಡೆದ ಘಟನೆ ಬಗ್ಗೆ ಸಿಆರ್ಪಿ ಮೂಲಕ ನಾನು ಮಾಹಿತಿ ಪಡೆದಿದ್ದೇನೆ ಶಿಕ್ಷಕನನ್ನು ಅಮಾನತುಗೊಳಿಸಲು ಉಪ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ ಎಂದು ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ.ಎಸ್. ತಿಳಿಸಿದ್ದಾರೆ.
ಶಿರಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್.ವಿ. ಮಾತನಾಡಿ, ನಾವು ನೀಡಿರುವ ಎಲ್ಲಾ ಹಾಲಿನ ಪಾಕೆಟ್ಗಳನ್ನೂ ಬಳಸಲಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಶಿಕ್ಷಕ ನೀಡಿರುತ್ತಾರೆ. ಅವಧಿ ಮೀರಿದ ಹಾಲಿನ ಪಾಕೆಟ್ಗಳನ್ನು ಶಾಲೆಯಲ್ಲಿ ಇರಿಸಿಕೊಳ್ಳುವುದು ತಪ್ಪು, ಕೂಡಲೇ ಶಿಕ್ಷಕನಿಂದ ದಂಡ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Comments are closed.