ತಿಪಟೂರು: ರಾಜ್ಯದಲ್ಲಿ ಕೆಲವರು ತಿರುಕನ ಕನಸು ಕಾಣುತ್ತಿದ್ದು ನಾವೇ ಮುಖ್ಯಮಂತ್ರಿ ಆಗಲಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದಾರೆ, ಇದು ಅಸಾಧ್ಯವಾದ ಮಾತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತಾಲ್ಲೂಕಿನ ಬಂಡಿಹಳ್ಳಿಯಿಂದ ಸಿಂಗ್ರಿ ನಂಜಪ್ಪ ವೃತ್ತದವರಗೆ ಶನಿವಾರ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿಯ ರಸ್ತೆ ಮೆರವಣಿಗೆ ಇಂದು ಜನರ ಸಭೆಯಾಗಿ ಪರಿವರ್ತನೆಯಾಗಿದೆ. ಜನಸಾಮಾನ್ಯರ ಮಾತು ಸತ್ಯವಾಗಿದೆ. ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಅಧಿಕ ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ.
ಬಿಜೆಪಿಯ ಕಾರ್ಯಕ್ರಮಗಳಲ್ಲಿ ಸೇರುವ ಜನರನ್ನು ನೋಡಿ ಕಾಂಗ್ರೆಸ್ ಕಂಗಾಲಾಗಿದೆ. ತಿಪಟೂರಿನಲ್ಲಿ ನಾಗೇಶ್ ಜನಪ್ರಿಯತೆಗೆ ರಸ್ತೆ ಮೆರವಣಿಗೆ ಸಾಕ್ಷಿಯಾಗಿದ್ದು ಬರುವ ಚುನಾವಣೆಯಲ್ಲಿ ನಾಗೇಶ್ ವಿರುದ್ಧ ಯಾರೂ ಸ್ಫರ್ಧೆ ಮಾಡಲು ಸಾಧ್ಯವಿಲ್ಲದಷ್ಟು ನಂಬಿಕೆ ತೋರಿಸಿದ್ದಾರೆ. ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಪ್ರಮುಖ ಕಾರಣವಾಗಿದೆ. ತುಮಕೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ರಾಜ್ಯದ ಅಧಿಕಾರ ಹಿಡಿಯಲು ತಾವುಗಳು ಕೊಡುಗೆ ನೀಡಬೇಕು. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಭ್ರಷ್ಟಾಚಾರ, ಅಪರಾಧಿಕರಣ, ಕಮಿಷನ್ ದಂಧೆಯ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕಾಲ ಬಂದಿದ್ದು ಮುಂಬರುವ ವಿಧಾನಸಭಾ ಚುನಾವಣೆಯು ಕೇವಲ ಬಿಜೆಪಿ ಪಕ್ಷಕ್ಕಾಗಿ ಮಾತ್ರವಲ್ಲದೆ ಕರ್ನಾಟಕದ ರಾಜ್ಯದ ಅಭಿವೃದ್ಧಿಯ ಚುನಾವಣೆ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂ. ನಂತೆ ದೇಶದ ಕೋಟ್ಯಂತರ ರೈತರಿಗೆ ಹಾಗೂ ಕರ್ನಾಟಕದಲ್ಲಿ ಲಕ್ಷಾಂತರ ರೈತರಿಗೆ ಯೋಜನೆ ಲಾಭದಾಯಕವಾಗಿದೆ, ಪ್ರಧಾನ ಮಂತ್ರಿ ಸ್ವಸ್ತ ಭಾರತ್ ಅಭಿಯಾನದಲ್ಲಿ ಅಧಿಕ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಮಹಿಳೆಯರು ಬಯಲು ಬಹಿರ್ದಸೆಯಿಂದ ಮುಕ್ತವಾಗಿ ಗೌರವಯುತ ಜೀವನ ಮಾಡುವಂತಾಗಿದೆ. ಗ್ರಾಮೀಣ ಭಾಗದ ಬಡವರು, ದಲಿತರು, ಶೋಷಿತರು, ಆದಿವಾಸಿ ಜನರನ್ನು ಒಂದು ಗೂಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು.
ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಹಳಿಗಳು, ಗ್ರಾಮಾಂತರ ಪ್ರದೇಶಕ್ಕೆ ಇಂಟರ್ ನೆಟ್ ತಲುಪಿದ್ದು ನರೇಂದ್ರ ಮೋದಿಯವರು ಶ್ರೀ ಸಾಮಾನ್ಯ ಜನರನ್ನು ಬಲಿಷ್ಠರಾನ್ನಾಗಿಸಿದ್ದಾರೆ. ಕಾಂಗ್ರೆಸ್ ಪಕ್ಷ ಎಂದರೆ ವಂಶ ಪಾರಂಪರ್ಯದ ಪಕ್ಷವಾಗಿದ್ದು, ಮೊದಲು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಆಗಿದ್ದು ಬಿಜೆಪಿ ಎಂದರೆ ಕೇವಲ ಅಭಿವೃದ್ಧಿ ಹಾಗೂ ಕಾರ್ಯಕರ್ತನ ಪಕ್ಷವಾಗಿದೆ. ಕಾಂಗ್ರೆಸ್ ಸರ್ಕಾರ 70 ವರ್ಷದ ಅವಧಿಯಲ್ಲಿ ಬೆರಳಿಕೆಯ ವಿಮಾನ ನಿಲ್ದಾಣ ಮಾಡಿದ್ದು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ 9 ವರ್ಷದಲ್ಲಿ 70ಕ್ಕೂ ಹೆಚ್ಚು ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಕರ್ನಾಟಕದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿವೆ ಎಂದರು.
ಕೆಲ ದಿನಗಳ ಹಿಂದೆ ಈಶಾನ್ಯ ಭಾರತದ ನಾಗಾಲ್ಯಾಂಡ್, ತ್ರಿಪುರ, ಮೇಘಾಲಯದಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಧಿಕಾರಕ್ಕೆ ಬಂದವು, ಕಾಂಗ್ರೆಸ್ಗೆ ಸಂಪೂರ್ಣ ನಿರ್ನಾಮದ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಇಂಗ್ಲೆಂಡ್ನಲ್ಲಿ ಭಾರತದ ಪ್ರಭಾಪ್ರಭುತ್ವಕ್ಕೆ ಅಪಾಯ ಇದೆ ಎನ್ನುತ್ತಾರೆ. ಚುನಾವಣೆ ಸೋತರೆ ಪ್ರಜಾಪ್ರಭುತ್ವ ಸರಿಯಿಲ್ಲ ಹಾಗೂ ಇವಿಎಂ ಸರಿಯಿಲ್ಲ ಎಂದು ದೂರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ಸಂಸದ ಪಿ.ಸಿ.ಮೋಹನ್ ಮುಖಂಡರಾದ ಎಂ.ಬಿ.ನಂದೀಶ್, ಸೊಗಡು ಶಿವಣ್ಣ, ಎಂ.ಡಿ.ಲಕ್ಷ್ಮೀನಾರಾಯಣ್ ಇದ್ದರು.
Comments are closed.