ಕಾರ್ಮಿಕರ ದುಡಿಮೆ ವೇಳೆ ಹೆಚ್ಚಳ ಖಂಡಿಸಿ ಮುಷ್ಕರ

187

Get real time updates directly on you device, subscribe now.


ತುಮಕೂರು: ರಾಜ್ಯ ಸರಕಾರ ಇತ್ತೀಚೆಗೆ ಕಾರ್ಮಿಕರ ದುಡಿಯುವ ವೇಳೆಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವ ಕ್ರಮ ಖಂಡಿಸಿ ಮಾರ್ಚ್ 23 ರ ಗುರುವಾರ ಎಲ್ಲಾ ಕಾರ್ಮಿಕ ಸಂಘಟನೆಗಳು ಸೇರಿ ಮುಷ್ಕರಕ್ಕೆ ಕರೆ ನೀಡಿವೆ ಎಂದು ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ಗಿರೀಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1,886ರಲ್ಲಿ ನಡೆದ ಚಿಕಾಗೋ ಒಪ್ಪಂದದಂತೆ ದಿನದ 24 ಗಂಟೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, 8 ಗಂಟೆ ದುಡಿಮೆ, 8 ಗಂಟೆ ರೆಸ್ಟ್ ಮತ್ತು 8 ಗಂಟೆ ನಿದ್ರೆಗೆ ನಿಗದಿ ಪಡಿಸಿರುವುದಲ್ಲದೆ, ಕನಿಷ್ಠ 5 ಗಂಟೆಗೊಮ್ಮೆ ಅರ್ಧ ತಾಸು ವಿಶಾಂತ್ರಿ ಅವಕಾಶ ನೀಡಬೇಕೆಂಬ ನಿಯಮವಿದೆ. ಆದರೆ ಹೊಸ ನೀತಿಯಲ್ಲಿ ಯಾವುದೇ ಬಿಡುವಿಲ್ಲದೆ 6 ಗಂಟೆಗಳ ನಿರಂತರ ದುಡಿಮೆಗೆ ದೂಡಲಾಗಿದೆ. ಅಲ್ಲದೆ ದಿನದ ಮೂರು ಪಾಳಿಯನ್ನು ಎರಡು ಪಾಳಿಯಲ್ಲಿ ದುಡಿಯುವಂತೆ ಮಾಡಿ ಮಾಲಿಕರಿಗೆ ಹೆಚ್ಚು ಲಾಭವಾಗುವಂತೆ, ಕಾರ್ಮಿಕರ ಪಾಲು ಕಡಿಮೆಯಾಗುವಂತೆ ಮಾಡಿ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ವಿರುದ್ಧ ಎಲ್ಲಾ ಕಾರ್ಮಿಕ ಸಂಘಟನೆಗಳು ಮಾರ್ಚ್ 23ರ ಮುಷ್ಕರಕ್ಕೆ ಕರೆ ನೀಡಿವೆ ಎಂದರು.

ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿ, ಕರ್ನಾಟಕ ಕಾರ್ಮಿಕ ಕಾಯ್ದೆ ಅಧಿನಿಯಮ- 1948ರ ಅನ್ವಯ ದುಡಿಯುವ ಸಮಯ ನಿಗದಿ ಪಡಿಸಿದೆ, ಆದರೆ ಇಂದು ಕೇಂದ್ರ ಮತ್ತು ರಾಜ್ಯ ಸರಕಾರ ದುಡಿಯುವ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿದೆ, ಅಲ್ಲದೆ ರಾತ್ರಿ ಪಾಳಿಯಲ್ಲಿ ಹೆಣ್ಣು ಮಕ್ಕಳಿಗೆ ದುಡಿಯಲು ಅವಕಾಶ ನೀಡಿದೆ. ದೊಡ್ಡ ದೊಡ್ಡ ಮಾಲ್ಗಳಲ್ಲಿ ರಾತ್ರಿ ವೇಳೆಯಲ್ಲಿ ಕೆಲಸ ಮಾಡಲು ಈ ರೀತಿಯ ಕಾನೂನು ಬದಲಾವಣೆ ಮಾಡಲಾಗಿದೆ. ಆದರೆ ಇಂದಿಗೂ ದುಡಿಯುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇವೆ. ಹಗಲಿನಲ್ಲಿಯೇ ಈ ರೀತಿಯಾದರೆ ಇನ್ನೂ ರಾತ್ರಿ ವೇಳೆ ದುಡಿಯುವ ಮಹಿಳೆಯರ ಪಾಡೇನು. ಅವರಿಗೆ ಯಾವ ರೀತಿ ರಕ್ಷಣೆ ಕೈಗೊಳ್ಳಬೇಕೆಂಬ ಸಣ್ಣ ತಿಳುವಳಿಕೆಯೂ ಸರಕಾರಕ್ಕೆ ಇಲ್ಲ, ದುಡಿಯುವ ಸಮಯ ಹೆಚ್ಚಳ ಮಾಡುವುದು ಜೀವ ವಿರೋಧಿಯಾಗಿದೆ. ಅಲ್ಲದೆ ಸಂವಿಧಾನ ವಿರೋಧಿಯೂ ಆಗಿದೆ, ಹಾಗಾಗಿ ಜೆಸಿಟಿಯು ಮಾರ್ಚ್ 23 ರಂದು ಮುಷ್ಕರಕ್ಕೆ ಕರೆ ನೀಡಿದೆ. ಅಂದು ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಮುಷ್ಕರದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು.
ಎಐಯುಟಿಯುಸಿ ಮಂಜುಳ ಗೋನಾವರ, ಎಐಟಿಯುಸಿಯ ಅಶ್ವಥನಾರಾಯಣ, ಚಂದ್ರಶೇಖರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!