ಶಿರಾ: ಮಾಡಿದ ಕೆಲಸಕ್ಕೆ ಕೂಲಿ ಕೇಳುವಂತೆ ಕೆಲಸ ಮಾಡಿದ ನಮ್ಮ ಪಕ್ಷದ ಶಾಸಕರಿಗೆ ಓಟು ಹಾಕಬೇಕಲ್ವಾ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಶಿರಾ ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಉಪ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಕೆರೆಗಳಿಗೆ ನೀರು ಹರಿಸಿದ್ದೇವೆ. 72 ವರ್ಷಗಳಿಂದ ಸರ್ಕಾರ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಲಾಗದ್ದನ್ನು ನಾವು ಮಾಡಿದ್ದೇವೆ. ಕೊಟ್ಟ ಮಾತು ತಪ್ಪುವುದು ಮೋಸ ಮಾಡುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಅವಶ್ಯಕ, ನಾವು ತಲೆ ಹೋದರೂ ಸರಿ ಮಾತು ನಡೆಸುತ್ತೇವೆ ಎಂದರು.
ನಮ್ಮ ನೀತಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಬಡವರಿಗೆ ಮಹಿಳೆಯರಿಗೆ ದಲಿತರಿಗೆ ಶಕ್ತಿ ಕೊಡುವುದು ನಮ್ಮ ನೀತಿ, ಕಿಸಾನ್ ಸಮ್ಮಾನ್ ಮೂಲಕ ಪ್ರತಿ ರೈತರಿಗೆ ವರ್ಷಕ್ಕೆ 10,000 ಕೊಡುತ್ತಿರುವುದು ನಮ್ಮ ಸರ್ಕಾರ, ಹಾಲಿಗೆ ಸಬ್ಸಿಡಿ ಕೊಡಲು ಪ್ರಾರಂಭಿಸಿದ್ದು ಯಡಿಯೂರಪ್ಪರವರ ಸರ್ಕಾರ, 5 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ಕೊಡುತ್ತಿರುವುದು ನಮ್ಮ ಸರ್ಕಾರ, ಕಾಡುಗೊಲ್ಲ ನಿಗಮದ ಮೂಲಕ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನಮ್ಮ ಸರ್ಕಾರ, ಜುಂಜಪ್ಪನ ದೇವಸ್ಥಾನ ಅಭಿವೃದ್ಧಿಗೆ ಒಂದು ಕೋಟಿ ಹಣ ಬಿಡುಗಡೆ ಮಾಡಿರುವುದು ನಮ್ಮ ಸರ್ಕಾರ, ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಿರುವುದು ನಮ್ಮ ಸರ್ಕಾರ ಎಂದು ಸಾಧನೆಗಳನ್ನು ವಿವರಿಸಿದರು.
ಗ್ಯಾರೆಂಟಿ ಕಾರ್ಡ್ ಕೊಡುವವರಿಗೆ ಚುನಾವಣೆಯ ಕ್ಷೇತ್ರ ಗ್ಯಾರಂಟಿ ಆಗಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ ಸಿ.ಟಿ.ರವಿ, ಗ್ಯಾರಂಟಿ ಕಾರ್ಡ್ನ ಆಮಿಷಗಳಿಗೆ ಬಲಿಯಾಗದಿರಿ. ಅತಿ ಹೆಚ್ಚು ಆಸೆ ತೋರಿಸುವರು ಮೋಸ ಮಾಡುವುದು ಗ್ಯಾರಂಟಿ ಎಂದು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವ್ಯಂಗ್ಯವಾಡಿದರು.
ಇದೇ ವೇಳೆ ಊರಿಗೌಡ ನಂಜೇಗೌಡ ಚಿತ್ರದ ಬಗ್ಗೆ ಮಾತನಾಡಿದ ಅವರು ಇದಿನ್ನು ಟ್ರೈಲರ್ ಅಷ್ಟೇ, ಇಷ್ಟಕ್ಕೆ ಉರ್ಕೊಳ್ಳೋರು ಉರ್ಕೊಳ್ತಾ ಇದ್ದಾರೆ. ಇನ್ನು ಪಿಚ್ಚರ್ ಬಂದ್ರೆ ಧಗಧಗ ಕುಣಿಬೇಕಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರು ಹೇಳದೆ ಚುಚ್ಚಿದರು.
ಅಪ್ಪರ್ ಭದ್ರಾ, ತುಮಕೂರು, ಶಿರಾ, ಚಿತ್ರದುರ್ಗ, ದಾವಣಗೆರೆ ರೈಲ್ವೆ ಕಾಮಗಾರಿ ಮತ್ತು ಚಿತ್ರದುರ್ಗದಲ್ಲಿ ಶೀಘ್ರವೇ ಆರಂಭವಾಗಲಿರುವ ವೈದ್ಯಕೀಯ ಮಹಾವಿದ್ಯಾಲಯದ ಕುರಿತು ಕುರಿತು ಸಂಸದ ಎಂ.ನಾರಾಯಣಸ್ವಾಮಿ ತಿಳಿಸಿದರು.
ಬಾರದ ಯಡಿಯೂರಪ್ಪ- ಜನರಿಗೆ ನಿರಾಸೆ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗದೆ ಇದ್ದುದರಿಂದ ಅವರನ್ನು ನೋಡಲೆಂದೇ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರಿಗೆ ತೀವ್ರ ನಿರಾಸೆ ಉಂಟಾಯಿತು, ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಸಿಟಿ ರವಿ, ಸಂಸದ ಎ.ನಾರಾಯಣಸ್ವಾಮಿ ವಿಜಯ ಸಂಕಲ್ಪ ಯಾತ್ರೆಯ ಮುಂಚೂಣಿಯಲ್ಲಿದ್ದರು.
ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ನಗರಾಧ್ಯಕ್ಷ ವಿಜಯರಾಜ್, ರವಿಕುಮಾರ್, ಮುದಿಮಡು ಮಂಜುನಾಥ್, ಚೆಂಗಾವರ ಮಾರಣ್ಣ, ಬಸವರಾಜು ಮೊದಲಾದವರು ಹಾಜರಿದ್ದರು.
Comments are closed.