ತುಮಕೂರು: ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ದಿನವೂ ರಜೆ ಪಡೆದಿಲ್ಲ, ಅದೇ ರೀತಿ ರಾಜ್ಯದ ಬಿಜೆಪಿ ಕಾರ್ಯಕರ್ತರು ಮುಂದಿನ ಎರಡುವರೆ ತಿಂಗಳ ಕಾಲ ವಿಶ್ರಾಂತಿ ಪಡೆಯದೆ ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಕೈಜೊಡಿಸಿ ಕೆಲಸ ಮಾಡಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುವಂತೆ ಮಾಡಬೇಕೆಂದರು.
ವಿಶ್ವಮಟ್ಟದಲ್ಲಿ ಭಾರತದ ವಿಜಯ ಪತಾಕೆ ಹಾರಿಸಿರುವ ನಮ್ಮ ಪ್ರಧಾನಿ ನರೇಂದ್ರಮೋದಿ ಎಲ್ಲಿ, ರಾಜಕೀಯದ ಎಬಿಸಿಡಿ ತಿಳಿಯದ ರಾಹುಲ್ ಗಾಂಧಿ ಎಲ್ಲಿ, ಮೋದಿಗೆ ರಾಹುಲ್ ಸರಿಸಾಟಿಯಲ್ಲ ಎಂದರು.
ದೇಶದ ಬಡವರು, ದಿನ ದಲಿತರು, ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರಿಗೂ ಒಂದಿಲ್ಲೊಂದು ಕಾರ್ಯಕ್ರಮ ನೀಡುವ ಮೂಲಕ ನರೇಂದ್ರ ಮೋದಿ ಒಳ್ಳೆಯ ಆಡಳಿತಗಾರ ಎಂದು ಹೆಸರು ಪಡೆದಿದ್ದಾರೆ. ಅದೇ ಮಾರ್ಗದಲ್ಲಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರಕಾರ ನಡೆಯುತ್ತಿದೆ. ಹಾಗಾಗಿ ಮುಂದಿನ ಬಾರಿಯೂ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಈ ರಾಜ್ಯದ ಜನತೆ ಬಯಸಿದ್ದಾರೆ. ಅದು ಈಡೇರಬೇಕೆಂದರೆ ನೀವೆಲ್ಲರೂ ಹಗಲಿರುಳು ಪಕ್ಷಕ್ಕಾಗಿ ದುಡಿಯಬೇಕಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರ ಸೋಲಿಗೆ ಕಾರಣ ಏನು ಎಂಬ ಕೊರಗು ಇಂದಿಗೂ ನನ್ನನ್ನು ಕಾಡುತ್ತಿದೆ. ಕ್ಷೇತ್ರದ ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜು, ಆಸ್ಪತ್ರೆ ಮಾಡಿ ಜನರಿಗೆ ಉಪಯೋಗ ಮಾಡಿದ್ದಾರೆ. ಹಾಲಿ ಶಾಸಕರೇ ಗ್ರಾಮಾಂತರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಬಿಎಸ್ವೈ ಜನ ನಿಮ್ಮನ್ನು ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ. ಈ ಬಾರಿ ಜನರೇ ನಿಮಗೆ ಬುದ್ಧಿ ಕಲಿಸಲಿದ್ದಾರೆ. ಇತಿಹಾಸ ಮತ್ತೊಮ್ಮೆ ಪುನಾರಾವರ್ತನೆಯಾಗಲಿದೆ ಎಂದು ಬಿಎಸ್ವೈ ಭವಿಷ್ಯ ನುಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಮಾಜಿ ಶಾಸಕ ಬಿ.ಸುರೇಶ್ಗೌಡನ ಮಾತು ಒರಟಾಗಿದ್ದರೂ ಮೃದು ಮನಸ್ಸಿನ ವ್ಯಕ್ತಿ, ತನ್ನ 10 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ತಂದು ಅಭಿವೃದ್ದಿ ಪಡಿಸಿದ ವ್ಯಕ್ತಿಯನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದ್ದರಿಂದ ನಷ್ಟವಾಗಿದ್ದು ಕ್ಷೇತ್ರದ ಜನತೆಗೆ, ನಿಮ್ಮ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕರು ಎಲ್ಲಿದ್ದಾರೆ, ಏನು ಮಾಡುತಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಏನು ಕೆಲಸ ಮಾಡುತ್ತಾರೆ ಎಂಬುದನ್ನು ಬಹಿರಂಗವಾಗಿ ಹೇಳುವಂತಿಲ್ಲ ಎಂದರು.
ಮಾಜಿ ಶಾಸಕ ಸುರೇಶ್ಗೌಡ ಮಾತನಾಡಿ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಯ ಮೂಲಕ ಬೆಳ್ಳಾವಿ ಭಾಗದ ಕೆರೆಗಳಿಗೆ ನೀರು ಹರಿದಿದ್ದರೆ ಅದಕ್ಕೆ ಕಾರಣ ಬಿ.ಎಸ್.ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಹಾಗೂ ಮತದಾರರ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನೀವು ಮತ್ತೊಮ್ಮೆ ನನ್ನನ್ನು ಗೆಲ್ಲಿಸಿದರೆ ಮುಂದಿನ ಐದು ವರ್ಷಗಳ ಕಾಲ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ನಿಮ್ಮ ಋಣ ತೀರಿಸುತ್ತೇನೆ. ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಮುಖಂಡರಾದ ಎಂ.ಬಿ.ನಂದೀಶ್, ಡಾ.ಹುಲಿನಾಯ್ಕರ್, ಆರ್.ದೇವೇಗೌಡ, ಬೆಟ್ಟಸ್ವಾಮಿ, ಅರಕೆರೆ ರವಿ, ಸಿದ್ದೇಗೌಡ, ರಾಜೇಗೌಡ, ವೈ.ಹೆಚ್.ಹುಚ್ಚಯ್ಯ, ಸಂಪಿಗೆ ಶ್ರೀಧರ್,ರಾಜೇಗೌಡ, ನರಸಿಂಹಮೂರ್ತಿ, ಉಮೇಶ್ ಗೌಡ, ಸಚ್ಚಿದಾನಂದ, ನಾಗರತ್ನ, ಸುಮಿತ್ರದೇವಿ, ಬೆಳ್ಳಾವಿ ವಸಂತ, ಶಂಕರಣ್ಣ, ಹೆತ್ತೇನಹಳ್ಳಿ ವೆಂಕಟೇಶ್, ರುದ್ರೇಶ್, ವೈ.ಟಿ.ನಾಗರಾಜು ಹಾಜರಿದ್ದರು.
Comments are closed.