ಕುಣಿಗಲ್: ಕಾಂಗ್ರೆಸ್ ಪಕ್ಷದವರು ನುಡಿದಂತೆ ನಡೆಯುತ್ತೇವೆ, ಬಿಜೆಪಿಯ ಮೋದಿಯವರಂತೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲಾ ಭವರಸೆ ಈಡೇರಿಸಿದೆ. ಈ ಬಾರಿಯೂ ಅಧಿಕಾರಕ್ಕೆ ಬಂದು ನೀಡಿರುವ ಭರವಸೆ ಈಡೇರಿಸುತ್ತೇವೆ. ಇದಕ್ಕೆ ಅನುದಾನವನ್ನು ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿರುವ 40 ಪರ್ಸೆಂಟ್ ಕಮಿಷನ್ ನಿಯಂತ್ರಿಸಿ ಜನತೆಗೆ ನೀಡುತ್ತೇವೆ ಎಂದರು.
ದೇಶ ಹಾಗೂ ರಾಜ್ಯದ ಬಿಜೆಪಿ ಮುಖಂಡರು ಬೆಲೆ ಏರಿಕೆ ಬಗ್ಗೆ ಮಾತ್ರ ಮಾತನಾಡುವುದಿಲ್ಲ. ಬಿಜೆಪಿ ಸರ್ಕಾರದ ಬೆಲೆ ಏರಿಕೆ ಧೋರಣೆಯಿಂದಾಗಿ ಜನರ ಆದಾಯ ಖೋತಾ ಆಗಿ ಖರ್ಚು ದುಪ್ಪಟ್ಟಾಗಿದೆ. ಇದರಿಂದ ಜನರ ಪಾರು ಮಾಡಲು ನಾಲ್ಕು ಪ್ರಮುಖ ಭರವಸೆ ನೀಡಿದ್ದು ಅದರಂತೆ ನಡೆದುಕೊಳ್ಳುತ್ತೇವೆ. ತಾಲೂಕಿನಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್, ಕಳೆದ ಐದು ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಡಾ.ರಂಗನಾಥ್ ಅಭ್ಯರ್ಥಿಯಲ್ಲ ನಾನೇ ಅಭ್ಯರ್ಥಿ ಎಂದು ಮತ ನೀಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.
ಕುಮಾರ ಸ್ವಾಮಿ ಅವರಿಗೆ ನಾವೇ ಸಹಕಾರ ಮಾಡಿ ಮುಖ್ಯಮಂತ್ರಿ ಮಾಡಿದ್ದೇವೆ. ಬಿಜೆಪಿಯವ್ರು ಸಿಎಂ ಆಗಿದ್ದಾರೆ. ಈ ಬಾರಿ ಎರಡೂ ಪಕ್ಷವನ್ನು ಕಡೆಗಣಿಸಿ ಉತ್ತಮ ಅಭಿವೃದ್ಧಿ ಪರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ತಾಲೂಕಿನ ಸಮಗ್ರ ನೀರಾವರಿಗೆ ಪೂರಕವಾಗ ಲಿಂಕ್ ಕೆನಾಲ್ ಕಾಮಗಾರಿಗೆ 640 ಕೋಟಿ ವೆಚ್ಚದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅಂಗೀಕಾರ ನೀಡಿದ್ದು, ಬಿಜೆಪಿ ಸರ್ಕಾರದ ಸಿಎಂ ಯಡಿಯೂರಪ್ಪ, ಸಚಿವ ಮಾಧುಸ್ವಾಮಿ ತಡೆದಿದ್ದಾರೆ. ಇವರು ಮತ ಕೇಳಲು ಬಂದಾಗ ಜನ ಪ್ರಶ್ನಿಸಬೇಕು. ಕೊವಿಡ್ ಸಮಯದಲ್ಲಿ ಇಡೀ ದೇಶ, ರಾಜ್ಯ ಸ್ತಬ್ದವಾಗಿದ್ದಾಗ ತಾಲೂಕಿನಲ್ಲಿ ತಾವು, ಶಾಸಕ ಡಾ.ರಂಗನಾಥ್ ಜನರ ಮಧ್ಯೆ ನಿಂತು ಸಹಾಯ ಮಾಡಿದ್ದೇವೆ. ತಾಲೂಕಿನ ಮಾಜಿ ಶಾಸಕರಾಗಲಿ, ಜೆಡಿಎಸ್ ಮುಖಂಡರಾಗಲಿ, ಬಿಜೆಪಿ ಮುಖಂಡರಾಗಲಿ ಜನಪರ ಸೇವೆಗೆ ಬರಲಿಲ್ಲ. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ತಮ್ಮ ಕ್ಷೇತ್ರದ ತುಂಬೆಲ್ಲಾ 70 ಸಾವಿರ ಎಚ್ ವಿಡಿಎಸ್ ಸ್ಕೀಂ ಅಡಿಯಲ್ಲಿ ರೈತರಿಗೆ ಉತ್ತಮ ವೋಲ್ಟೇಜ್ಗಾಗಿ ಟಿಸಿ ನೀಡಿದ್ದು, ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದೇ ಒಂದು ಟಿಸಿ ನೀಡಿಲ್ಲ ಎಂದರು.
ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇವರನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಬಡ ಜನರ ಪರ ಸರ್ಕಾರ ಅಧಿಕಾರಕ್ಕೆ ತರಬೇಕೆಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಗ್ಯಾಸ್ ಗೆ ಕಾಂಗ್ರೆಸ್ ಸರ್ಕಾರ ಸಬ್ಸಿಡಿ ನೀಡಿ ಬಡ ಜನತೆಯೆ ನೆರವಿಗೆ ನಿಂತಿತ್ತು. ಆದರೆ ಬಿಜೆಪಿ ಸರ್ಕಾರ ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಜನರು ಮತ್ತೆ ಸೌದೆ ಒಲೆಯತ್ತಾ ಮುಖ ಮಾಡುವಂತೆ ಮಾಡಿದೆ. ಇದೆ ಬಿಜೆಪಿ ಸರ್ಕಾರಗಳ ಸಾಧನೆಯಾಗಿದೆ ಎಂದರು.
ಭ್ರಷ್ಟಾಚಾರದ ವೇಗವೆ ಡಬಲ್ ಇಂಜಿನ್ ಸರ್ಕಾರ ಹೊರತು ಮತ್ತೇನು ಅಲ್ಲ. ಬೆಲೆ ಏರಿಕೆಗೆ ಪೂರಕವಾಗಿರುವ ಬಿಜೆಪಿ ತಿರಸ್ಕರಿಸಿ, ಕಾಂಗ್ರೆಸ್ ಪಕ್ಷವನ್ನು ಪುರಸ್ಕರಿಸಿ ಅಧಿಕಾರಕ್ಕೆ ತರಬೇಕೆಂದರು.
ರಾಜ್ಯಸಭೆ ಸದಸ್ಯ ಚಂದ್ರಶೇಖರ್ ಮಾತನಾಡಿ, ಎಲ್ಲಾ ರೀತಿಯ ತೆರಿಗೆ ಏರಿಸುವ ಮೂಲಕ ಬಿಜೆಪಿ ಸರ್ಕಾರ ಜನ ವಿರೋಧಿಯಾಗಿದ್ದು, ಕೆಲವೆ ಮಂದಿ ಉದ್ದಿಮೆದಾರರ ಪರ ಇರುವ ಬಿಜೆಪಿ ಜನ ಸಾಮಾನ್ಯರ ವಿರೋಧಿಯಾಗಿದೆ ಎಂದರು.
ಮಾಜಿ ಸಚಿವೆ ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮುಖಂಡ ಭಾವ, ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ತಾಲೂಕು ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು, ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ, ತಾಲೂಕು ಅಧ್ಯಕ್ಷ ಲೋಹಿತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮತಿ, ಜಿಪಂ ಮಾಜಿ ಸದಸ್ಯೆ ಅನಸೂಯಮ್ಮ ವೈಕೆಆರ್, ಮುಖಂಡರಾದ ಶಂಕರ್, ಬೇಗೂರು ನಾರಾಯಣ, ಬೊರೆಗೌಡ, ಹಾಲುವಾಗಿ ಲುಸ್ವಾಮಿ,ಮಾಸ್ತಿಗೌಡ,ಎಸ್ ವಿಬಿ ಸುರೇಶ್ ಇತರರು ಇದ್ದರು.
Comments are closed.