ತುರುವೇಕೆರೆ: ವೀರಶೈವರ ಮತಗಳನ್ನು ವಿಭಜಿಸಲು ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಪಟ್ಟಣದಲ್ಲಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಪಕ್ಷದಲ್ಲಿ ಬೇರೆಯವರಿಗೂ ಅವಕಾಶ ಸಿಗಬೇಕೆಂಬ ದೃಷ್ಟಿಯಿಂದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆ. ನಾವೆಲ್ಲರೂ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವೀರಶೈವರು ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
ನಮ್ಮ ಪಕ್ಷದಲ್ಲಿ ಹಿಂದೂ ಮುಸ್ಲಿಂ ಯಾವುದೇ ಭೇದಭಾವವಿಲ್ಲ. ಎಲ್ಲಾ ವರ್ಗದವರ ಕಲ್ಯಾಣಕ್ಕಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಪರಿಶಿಷ್ಟ ಜಾತಿಗೆ ಶೇ.13 ರಷ್ಟು, ಪರಿಶಿಷ್ಟ ಪಂಗಡಕ್ಕೆ ಶೇ.7 ಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಮಹತ್ವದ ನಿರ್ಣಯವನ್ನು ನಮ್ಮ ಸರಕಾರ ಕೈಗೊಂಡಿದೆ. ನಾನು ಸಿಎಂ ಆಗಿದ್ದ ವೇಳೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದ ಪರಿಣಾಮ ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಸಮಾಜದಲ್ಲಿ ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುತ್ತಿದೆ. ತುರ್ರು ಪರಿಸ್ಥಿತಿ ಜಾರಿಗೆ ತಂದು ಜಯಪ್ರಕಾಶ್ ನಾರಾಯಣ್ ಹಾಗೂ ವಾಜಪೇಯಿ ಅವರನ್ನು ಜೈಲಿಗೆ ಹಾಕಿದ ಕಾಂಗ್ರೆಸ್ ಗೆ ಕ್ಷಮೆಯಿಲ್ಲ. ಕಾಂಗ್ರೆಸ್ ಕಾಲ ಮುಗಿಯುತ್ತಾ ಬಂದಿದೆ. ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ಮುಂದೆ ಸರಿಸಮವಲ್ಲ. ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಈಗಾಗಲೇ ಠೇವಣಿ ಕಳೆದುಕೊಂಡಿದೆ. ಕಾಂಗ್ರೆಸ್ ಭವಿಷ್ಯತ್ತಿನಲ್ಲಿ ದಿವಾಳಿಯಾಗಲಿದೆ. ರಾಜ್ಯದಲ್ಲಿ ಸುಮಾರು 140 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು.
ಸರಕಾರದಿಂದ ಸುಮಾರು 1600 ಕೋಟಿ ರೂ. ಅನುದಾನ ತಂದು ಮಸಾಲ ಜಯರಾಂ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಮಂತ್ರಿಗಳ ಮನೆ ಸುತ್ತಿ ಅಭಿವೃದ್ಧಿ ಮಾಡಿರುವ ಮಸಾಲ ಜಯರಾಮ್ ಅವರನ್ನು ಗೆಲ್ಲಿಸಿ, ಎದುರಾಳಿ ಅಭ್ಯರ್ಥಿಗೆ ಠೇವಣಿ ಬರದಂತೆ ಬಾರಿ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರಿಗೆ ಬಿಎಸ್ವೈ ಕರೆ ನೀಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕೋಳಿಗಳನ್ನು ಕತ್ತರಿಸಿ ಮಸಾಲೆ ಸೇರಿಸಿ, ಜನಪರ ಹಾಗೂ ಜನಪ್ರಿಯ ಶಾಸಕ ಮಸಾಲ ಜಯರಾಮ್ ಅವರನ್ನು ಸುಮಾರು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕಾರ್ಯರ್ತರಿಗೆ ಕರೆ ನೀಡಿದರು.
ಶಾಸಕ ಮಸಾಲ ಜಯರಾಮ್ ಮಾತನಾಡಿ ನನ್ನನ್ನು ಶಾಸಕನನ್ನಾಗಿ ಮಾಡಿದ ನಿಮ್ಮ ಋಣವನ್ನು ಹತ್ತು ಜನ್ಮ ಎತ್ತಿದರೂ ತೀರಿಸಲಾಗದು. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನನಗೆ ಮತಹಾಕಿ ಗೆಲ್ಲಿಸಿ, ನಿಮ್ಮ ಮನೆ ಮಗನಾಗಿ ಕ್ಷೇತ್ರದ ಜನೆ ಸೇವೆ ಮಾಡುವೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣಕ್ಕೆ ಆಗಮಿಸಿದ ವಿಜಯ ಸಂಕಲ್ಪ ರಥಯಾತ್ರೆಗೆ ಸಾವಿರಾರು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಬಿಎಸ್ವೈ ಹಾಗೂ ಗಣ್ಯರಿಗೆ ಬೃಹತ್ ಕೊಬ್ಬರಿ ಹಾರ ಸಮರ್ಪಿಸುವ ಮೂಲಕ ಕಾರ್ಯಕರ್ತರು ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಕಲಾ ತಂಡಗಳು ಜನರನ್ನು ಆಕರ್ಷಿಸಿದವು.
ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಶಾಸಕ ವೈ.ಎ.ನಾರಾಯಣ ಸ್ವಾಮಿ, ಅ.ದೇವೇಗೌಡ, ಮಾಜಿ ಸಂಸದ ಮುದ್ದಹನುಮೇ ಗೌಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಪಪಂ ಅಧ್ಯಕ್ಷ ಪ್ರಭಾಕರ್, ತಾಲೂಕು ಅಧ್ಯಕ್ಷ ಮೃತ್ಯುಂಜಯ, ಜಿಲ್ಲಾ ಘಟಕದ ಕೆಂಪೇಗೌಡ ಇತರರು ಹಾಜರಿದ್ದರು.
Comments are closed.