ಸಹಕಾರಿ ಧುರೀಣ ಎನ್.ಆರ್.ಜಗದೀಶ್ ಇನ್ನು ನೆನಪು ಮಾತ್ರ

ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಪೂರ್ಣ ಅಂತಿಮ ದರ್ಶನ ಪಡೆದ ಗಣ್ಯರು

163

Get real time updates directly on you device, subscribe now.


ತುಮಕೂರು: ಹಿರಿಯ ಉದ್ಯಮಿ, ಸಹಕಾರಿ ಧುರೀಣ ಎನ್.ಆರ್.ಜಗದೀಶ್ ಆರಾಧ್ಯ (89) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಗದೀಶ್ ಆರಾಧ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮೃತರು ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಸಮೀಪದ ಗ್ರಾಮವೊಂದರ ಮೂಲದವರಾದ ಜಗದೀಶ್ ಆರಾಧ್ಯರ ತಂದೆ ಹೆಸರಾಂತ ವರ್ತಕ ಎನ್.ರುದ್ರಯ್ಯನವರು ಧರ್ಮಕಾರ್ಯಗಳಿಗೆ ಹೆಸರಾದವರು.
ಬೆಂಗಳೂರು ಧಾನ್ಯ ವರ್ತಕರ ಸಂಘದ ಶಾಖೆಯನ್ನು ತುಮಕೂರಿನಲ್ಲಿ ಸ್ಥಾಪಿಸಿ, ಆ ಮೂಲಕ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಪ್ರಾರಂಭಕ್ಕೆ ಕಾರಣರಾದ ಎನ್.ಆರ್.ಜಗದೀಶಾರಾಧ್ಯರು ಬಹು ದೀರ್ಘ ಅವಧಿಯಿಂದ ಇಂದಿನವರೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಎನ್.ಆರ್.ಜಗದೀಶ್ ಅವರಿಗೆ 2013-14ನೇಸಾಲಿನಲ್ಲಿ ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ ಸಹ ಲಭಿಸಿತ್ತು.

ಟಿಜಿಎಂಸಿ ಬ್ಯಾಂಕ್ ನ ಸಂಸ್ಥಾಪಕರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಚೇತನ ವಿದ್ಯಾ ಮಂದಿರ, ಸರ್ವೋದಯ ಶಾಲೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಗುರುವಾರ ಸಂಜೆ 4 ಗಂಟೆಗೆ ನಗರದ ಬನಶಂಕರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.

ಗಣ್ಯರ ಸಂತಾಪ
ಎನ್. ಆರ್.ಜಗದೀಶ್ ಆರಾಧ್ಯ ಅವರ ನಿಧನಕ್ಕೆ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ , ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕೆ. ಎನ್. ರಾಜಣ್ಣ, ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್, ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಶಾಸಕ ಎಸ್.ಷಫಿ ಅಹಮದ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಡಾ.ಜಯರಾಮರಾವ್, ಸುರೇಂದ್ರ ಎ.ಶಾ, ಸರ್ವೋದಯ ಶಿಕ್ಷಣ ಸಂಸ್ಥೆಯ ಜಿ.ಸೀತಾರಾಂ, ಮೊದಲಾದವರು ಟಿಜಿಎಂಸಿ ಬ್ಯಾಂಕ್ ನ ಉಪಾಧ್ಯಕ್ಷ ದಿವ್ಯಾನಂದಮೂರ್ತಿ, ಬ್ಯಾಂಕ್ ನಿರ್ದೇಶಕರು, ಸಿಬ್ಬಂದಿ ತೀವ್ರ ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!