ಗುಬ್ಬಿ: ಚುನಾವಣೆ ಗೋಸ್ಕರ ಮೀಸಲಾತಿ, ನಿಗಮ ಮಂಡಳಿ ಮಾಡುವುದರಿಂದ ಆ ಸಮುದಾಯಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಎಸ್.ಕೊಡುಗೆಹಳ್ಳಿ, ಚೆನ್ನಯ್ಯನ ಪಾಳ್ಯ, ಮಲ್ಲಪ್ಪನ ಪಾಳ್ಯ ಎಂಎಸ್ ಪಾಳ್ಯ, ಸುರುಗೇನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶಿರಾ ಚುನಾವಣೆ ಸಮಯದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ನಿಗಮ ಮಂಡಳಿ ಮಾಡಲಾಯಿತು. ಒಂದೇ ಒಂದು ರೂಪಾಯಿ ಅದಕ್ಕೆ ಹಣ ಹಾಕಿಲ್ಲ, ನಿಗಮ ಮಂಡಳಿ ಮಾಡುವುದಕ್ಕಿಂತ ಹಿಂದೆ ಗೊಲ್ಲ ಸಮುದಾಯಕ್ಕೆ ಹತ್ತರಿಂದ ಹದಿನೈದು ಕೊಳವೆ ಬಾವಿ ಬರುತ್ತಿದ್ದು ಈಗ ಕೇವಲ ಒಂದು ಕೂಡ ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಚುನಾವಣೆಗೋಸ್ಕರ ಈ ಗಿಮಿಕ್ ಅವಶ್ಯಕತೆ ಇಲ್ಲ. ಈಗ ಹೇಳಿರುವ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ. ಅಲ್ಲಿ ಅದು ಮಾನ್ಯವಾಗುತ್ತದೆಯೋ ಕಾದು ನೋಡಬೇಕಾಗಿದೆ ಎಂದರು.
ನಾನು ಜೆಡಿಎಸ್ ಪಕ್ಷ ಬಿಟ್ಟ ಕೂಡಲೆ ಒಕ್ಕಲಿಗ ಸಮುದಾಯದವರು ಮತ ಹಾಕುವುದಿಲ್ಲ ಎಂಬುದು ಸುಳ್ಳು, ನಾನು ಸಹ ಒಕ್ಕಲಿಗನೆ, ಚುನಾವಣೆ ಬಂದಾಗ ಇಂತಹ ಮಾತುಗಳು ಸರ್ವೇ ಸಾಮಾನ್ಯವಾಗಿರುತ್ತವೆ ಎಂದು ತಿಳಿಸಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಲ್ಲ. ಹಾಗಾಗಿ ಕಾಂಗ್ರೆಸ್ ಪಟ್ಟಿಯ 124 ಜನರಲ್ಲಿ ನನ್ನ ಹೆಸರು ಇಲ್ಲ, ರಾಜಿನಾಮೆ ನೀಡಿದ ನಂತರ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಎರಡನೇ ಲಿಸ್ಟ್ನಲ್ಲಿ ನನ್ನ ಹೆಸರು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್, ದಿವಾಕರ್, ಗಿರೀಶ್, ರಂಗಸ್ವಾಮಿ, ಅಶ್ವಥ್, ಗಂಗಾಧರ್, ಗುತ್ತಿಗೆದಾರರಾದ ರಾಮು, ರಾಮಲಿಂಗೇಗೌಡ ಇನ್ನಿತರರು ಹಾಜರಿದ್ದರು.
Comments are closed.