ತುಮಕೂರು: ಒಂದು ಬಡಾವಣೆ ಅಥವಾ ವಾರ್ಡ್ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿನ ನಾಗರಿಕರ ಹಿತರಕ್ಷಣಾ ಸಮಿತಿಗಳು ಹೆಚ್ಚು ಕ್ರಿಯಾಶೀಲರಾಗುವ ಜೊತೆಗೆ ಗಟ್ಟಿತನದಿಂದ ಕೂಡಿದ್ದರೆ ಮಾತ್ರ ಸಾಧ್ಯ, ಇದಕ್ಕೆ 26ನೇ ವಾರ್ಡ್ಗೆ ಸೇರಿದ ಎಸ್ಎಸ್ಐಟಿ ಬಡಾವಣೆ,ಎಸ್.ಎಸ್.ಪುರಂ ಬಡಾವಣೆಗಳ ನಾಗರಿಕ ಹಿತರಕ್ಷಣಾ ಸಮಿತಿಗಳೇ ಸಾಕ್ಷಿ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ನಗರದ 26ನೇ ವಾರ್ಡ್ನ ದೋಬಿ ಘಾಟ್ ಪಕ್ಕದ ಸಾರ್ವಜನಿಕ ಸ್ಮಶಾನಕ್ಕೆ ಹೊಂದಿಕೊಂಡಂತೆ ಸ್ಮಾರ್ಟ್ಸಿಟಿಯಿಂದ ನಿರ್ಮಿಸಿರುವ ಶ್ರೀಸಿದ್ದಗಂಗಾ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯವರು ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ ಸಂದರ್ಭದಲ್ಲಿ ವಾರ್ಡ್ನ ಕಾರ್ಪೋರೇಟರ್ ಮಲ್ಲಿಕಾರ್ಜುನಯ್ಯ ಅವರ ಕೋರಿಕೆಯಂತೆ ಬೀದಿ ಬದಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ಬಡಾವಣೆಯ ಶೇ.90 ಕ್ಕು ಹೆಚ್ಚು ನಾಗರಿಕರು ಮಾರುಕಟ್ಟೆಯ ಪರವಾಗಿ ನಿಂತಿದ್ದರಿಂದ ಇಂದು ಇಷ್ಟು ಸುಂದರ ಮಾರುಕಟ್ಟೆ ನಿರ್ಮಾಣವಾಗಿದೆ. ಇದರಿಂದ ಎಸ್.ಎಸ್.ಪುರಂ, ಎಸ್ಐಟಿ, ಗಂಗೋತ್ರಿ ನಗರ, ಅಶೋಕ ನಗರದ ನಾಗರಿಕರಿಗೆ ಮನೆ ಬಾಗಿಲಿನಲ್ಲಿ ತಾಜಾ ತರಕಾರಿ ದೊರೆಯಲಿದೆ ಎಂದರು.
ಈಗಾಗಲೇ ಸ್ಮಾರ್ಟ್ಸಿಟಿಯಿಂದ ತುಮಕೂರು ನಗರದ ಎಸ್.ಎಸ್.ಸರ್ಕಲ್ನಲ್ಲಿ ಫುಡ್ ಜ್ಹೋನ್ ಆರಂಭಿಸಲಾಗಿದೆ. ಈ ಜಾಗದಲ್ಲಿ ರಾತ್ರಿ 12 ಗಂಟೆಯವರೆಗೆ ಊಟ, ತಿಂಡಿ ದೊರೆಯುತ್ತದೆ. ಅದೇ ರೀತಿ ಮಾರಿಯಮ್ಮ ನಗರದ ಬಳಿ, ಜಯನಗರ ದಲ್ಲಿ ವೆಂಡರ್ ಜ್ಹೋನ್ಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು, ಸ್ಮಾರ್ಟಿಸಿಟಿ ಎಂಬುದು ಶ್ರೀಮಂತರಿಗೆ ಎಂಬ ಹಣೆ ಪಟ್ಟಿ ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಮತ್ತಷ್ಟು ನಡೆಯಲಿವೆ. ತುಮಕೂರು ನಗರದಲ್ಲಿ ಅತಿ ಹೆಚ್ಚು ಕಾಮಗಾರಿ ನಡೆದಿರುವ 26ನೇ ವಾರ್ಡ್ನಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಶೇ.90 ರಷ್ಟು ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿವೆ. ಇದರ ಹಿಂದೆ ವಾರ್ಡ್ನ ಕಾರ್ಪೋರೇಟರ್ ಮತ್ತು ನಾಗರಿಕ ಸಮಿತಿಗಳ ಶ್ರಮವಿದೆ ಎಂದು ಶಾಸಕ ಜೋತಿಗಣೇಶ್ ತಿಳಿಸಿದರು.
26ನೇ ವಾರ್ಡ್ನ ಕಾರ್ಪೋರೇಟರ್ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಇಂದು ಉದ್ಘಾಟನೆಗೊಂಡಿರುವ ಶ್ರೀಸಿದ್ದಗಂಗಾ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ತೆರೆದಿರುತ್ತದೆ. ವ್ಯಾಪಾರಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ವಾರ್ಡ್ನಲ್ಲಿ ಶೇ.90 ರಷ್ಟು ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿವೆ. ಹಿರಿಯ ನಾಗರಿಕರಿಗೆ ಶೌಚಾಲಯ, ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗಿದೆ, ಹೊಸದಾಗಿ ಪಿಹೆಚ್ ಸಿ ತೆರೆಯಲು ಎಲ್ಲಾ ಸಿದ್ಧತೆ ನಡೆದಿವೆ, ಮುಂದಿನ ದಿನಗಳಲ್ಲಿ ಅದು ಸಹ ಕೈಗೂಡಲಿದೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯ ನಡೆದರೂ ಎಂದಿಗೂ ಯಾರ ಬಳಿಯೂ ಐದು ನಯಾ ಪೈಸೆ ಪಡೆದಿಲ್ಲ, ಒಂದು ರೂಪಾಯಿಯ ಭ್ರಷ್ಟಾಚಾರ ನಡೆದಿಲ್ಲ. ಒಂದು ವೇಳೆ ನನ್ನ ವಾರ್ಡ್ಗೆ ಸಂಬಂಧಿಸಿದಂತೆ ಸಣ್ಣ ಭ್ರಷ್ಟಾಚಾರ ತೋರಿಸಿದರೂ ಇಂದೇ ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದರು.
ವಾರ್ಡ್ನ ಜನರ ಸಹಕಾರ ಮತ್ತು ಶಾಸಕರ ಸಹಾಯದಿಂದ ಇಷ್ಟೊಂದು ಅಭಿವೃದ್ಧಿ ಕಾಮಗಾರಿ ಸಾಧ್ಯವಾಗಿದೆ. ನರೇಂದ್ರ ಮೋದಿ ಅವರು ನೀಡಿದ ಎಲ್ಲಾ ಯೋಜನೆ ನಮ್ಮ ವಾರ್ಡ್ನಲ್ಲಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮ ವಾರ್ಡ್ನಿಂದ ಶಾಸಕ ಜೋತಿಗಣೇಶ್ ಅವರಿಗೆ ಸುಮಾರು 2600 ಮತಗಳ ಲೀಡ್ ನೀಡಲಾಗಿತ್ತು. ಈ ಬಾರಿ ಕನಿಷ್ಠ ಪಕ್ಷ 4000 ಲೀಡ್ ನೀಡಿ ಅವರೆ ಮತ್ತೊಮ್ಮೆ ಶಾಸಕರಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ. ಇಂತಹ ಶಾಸಕರು ಮತ್ತೊಮ್ಮೆ ತುಮಕೂರು ನಗರಕ್ಕೆ ಅಗತ್ಯವಿದೆ. ಅವರ ಚುನಾವಣಾ ಪ್ರಚಾರ ಇಲ್ಲಿಂದಲೇ ಆರಂಭಗೊಂಡಿದೆ ಎಂದರು.
ಈ ವೇಳೆ ಕೌನ್ಸಿಲರ್ ಗಳಾದ ಚಂದ್ರಕಲಾ ಪುಟ್ಟರಾಜು, ವಿಷ್ಣುವರ್ಧನ್, ಮಹೇಶ್ಬಾಬು, ನಲ್ಮ್ ಅಧಿಕಾರಿ ಶ್ರೀನಿವಾಸ್, ರಾಮಾಂಜೀನಪ್ಪ, ವಾರ್ಡ್ನ ಎಲ್ಲಾ ಪ್ರಮುಖರು, ಅಶೋಕ ನಗರ, ಎಸ್ಐಟಿ ಬಡಾವಣೆಯ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು, ಕ್ಲಬ್ 26 ವನಿತಾ ಬಳಗ ಹಾಗೂ ಬಡಾವಣೆಯ ನಾಗರಿಕರು ಹಾಜರಿದ್ದರು.
Comments are closed.