ಶಿರಾ: ಸೀಮಿತ ಸೌಲಭ್ಯವಿರುವ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಸರ್ಕಾರಿ ಗೋಶಾಲೆಗೆ ಏಕಾಏಕಿ 108 ಗರ್ಭ ಧರಿಸಿದ ಹಸುಗಳನ್ನು ಪೊಲೀಸರು ತಂದು ಬಿಟ್ಟಿದ್ದು ನಿರ್ವಹಣೆ ಇಲ್ಲದ ಗೋಶಾಲೆಯ ಬಣ್ಣ ಬಯಲಾಗಿದೆ.
20 ರಿಂದ 30 ದನಗಳ ನಿರ್ವಹಣೆ ಸಾಮರ್ಥ್ಯವಿರುವ, ಜಿಲ್ಲಾ ಪಂಚಾಯತ್, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಜಿಲ್ಲಾ ಪ್ರಾಣಿ ದಯಾ ಸಂಘದಿಂದ ನಿರ್ವಹಿಸಲಾಗುತ್ತಿರುವ ಸರ್ಕಾರಿ ಗೋ ಶಾಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 37 ದನಗಳನ್ನು ನೋಡಿಕೊಳ್ಳಲಾಗುತ್ತಿತ್ತು. ಇದೇ ತಿಂಗಳ 3ನೇ ತಾರೀಖು ತುಮಕೂರು ಪೊಲೀಸರು ಸುಮಾರು 11 ಟ್ರಕ್ ಗಳಲ್ಲಿ ಕೋಲಾರದ ಚಿಂತಾಮಣಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿರುವ ಸುಮಾರು 108 ಹೆಚ್ಎಫ್ ತಳಿ ಸೀಮೆ ಹಸುಗಳನ್ನು ಗೋ ಹತ್ಯೆ ನಿಷೇಧ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ವಶಪಡಿಸಿಕೊಂಡು ಸರ್ಕಾರಿ ಗೋಶಾಲೆಗೆ ತಂದು ಬಿಟ್ಟಿದ್ದಾರೆ.
ನೆರಳಿಲ್ಲದೆ ಬಟಾಬಯಲಿನಲ್ಲಿ ಹಸುಗಳನ್ನು ನೋಡಿಕೊಳ್ಳಬೇಕಾಗಿ ಬಂದಿದ್ದು, ತಂಪಿನ ವಾತಾವರಣ ಬಯಸುವ ಸೀಮೆ ಹಸುಗಳು ಅನಿವಾರ್ಯವಾಗಿ ಬಿಸಿಲಿನ ಝಳಕ್ಕೆ ಸಿಲುಕುವಂತಾಗಿದೆ. ಇದರಿಂದ ಹಸುಗಳು ನಿಗದಿತ ಸಮಯಕ್ಕೂ ಮುನ್ನವೇ ಕರುಗಳನ್ನು ಹಾಕುತ್ತಿದ್ದು, ಹೀಗೆ ಹುಟ್ಟಿದ ಸುಮಾರು 55 ಮರಿಗಳ ಪೈಕಿ ಎಂಟು ಕರುಗಳು ಎದ್ದು ನಿಲ್ಲಲಾಗದೆ ಬಿಸಿಲಿನ ಝಳಕ್ಕೆ ಪ್ರಾಣ ಬಿಟ್ಟಿವೆ. ಒಂದು ಹಸು ಕೂಡ ಏಕಾಏಕಿ ಸಾವಿಗೀಡಾಗಿದೆ.
ಹಸುಗಳನ್ನು ನೋಡಿಕೊಳ್ಳಲು ಹಗಲೊಬ್ಬರು ರಾತ್ರಿ ಒಬ್ಬರು ಎನ್ನುವಂತೆ ಇಬ್ಬರು ಸಿಬ್ಬಂದಿಯನ್ನು ನಿರ್ವಹಣೆಗೆ ನೇಮಿಸಿದ್ದು, ಅವರಿಂದ ಸುಮಾರು 200 ರಷ್ಟು ಇರುವ ರಾಸುಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಬಂಧಿತವಾಗಿರುವ ಹಸುಗಳ ಪಾಲಕರು ಸುಮಾರು 10-12 ಜನರಿದ್ದು, ಮೇವನ್ನು ಒದಗಿಸುವುದು ನೀರು ಕುಡಿಸುವುದು ಬಿಸಿಲಿನ ಝಳದಿಂದ ಕಾಪಾಡಲು ಸೂಕ್ತ ಮುತ್ತಲಿನ ಹೊಲಗಳಲ್ಲಿನ ಹುಣಸೆ ಮರಗಳ ನೆರಳಿಗೆ ಅವುಗಳನ್ನು ಕಟ್ಟುವುದು. ಕರುಗಳಿಗೆ ಹಾಲು ಕುಡಿಸುವುದು, ಹೆಚ್ಚಾದ ಹಾಲನ್ನು ಸುತ್ತಲಿನ ಗ್ರಾಮಸ್ಥರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಹೀಗೆ ಮಾಡದೆ ಹೋದಲ್ಲಿ ಹಸುಗಳ ಕೆಚ್ಚಲು ಬಾವು ಬಂದು ನೋವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ ಎನ್ನುವುದು ಅವರ ವಾದ.
ಗೋಶಾಲೆಗೆ ಕೇವಲ ಮೆಕ್ಕೆಜೋಳದ ದಂಟನ್ನು ಮಾತ್ರ ಮೇವಿಗಾಗಿ ಒದಗಿಸಲಾಗುತ್ತಿದ್ದು, ದಪ್ಪನೆಯ ದಂಟನ್ನು ಅಗೆಯಲಾಗದೆ ಹಸುಗಳು ಮೇವಿನ ಕೊರತೆ ಎದುರಿಸುತ್ತಿವೆ. ಮೇವು ಹಾಕಲು ಪ್ರತ್ಯೇಕ ಗ್ವಾಂದಗೆ ಇಲ್ಲದೆ ಇರುವುದರಿಂದ, ಮೇವಿನ ಜೊತೆಯಲ್ಲಿ ಸಗಣಿ ಕೂಡ ಸೇರಿ ಹೋಗುತ್ತದೆ. ಪ್ರತಿ ಹಸುವಿಗೂ 7-10 ಕೆಜಿಯಷ್ಟು ಮೇವು ಬೇಕಿದ್ದು, ಪ್ರತಿನಿತ್ಯ ಒಂದುವರೆ ಟನ್ ನಷ್ಟು ಮೇವು ಬೇಕಾಗುತ್ತದೆ. ಮೇವು ಸರಬರಾಜು ವಿಳಂಬವಾದರೆ, ಹಸುಗಳು ಮೇವಿನ ಕೊರತೆ ಎದುರಿಸಬೇಕಾಗುತ್ತದೆ.
ಖರೀದಿದಾರರ ಪ್ರಕಾರ ಪ್ರತಿಯೊಂದು ಹಸುವಿಗೂ 70 ಸಾವಿರದಿಂದ ಒಂದು ಲಕ್ಷದವರೆಗೆ ಬೆಲೆ ಪಾವತಿಸಿ ಖರೀದಿಸಲಾಗಿದೆಯಂತೆ, ಆದರೆ ಗೋಶಾಲೆಯಲ್ಲಿ ಹಸುಗಳ ಜೀವಕ್ಕೆ ಕಿಂಚಿತ್ ಬೆಲೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿಗೆ ಬಂದಾಗ ದಷ್ಟಪುಷ್ಟವಾಗಿದ್ದ ಹಸುಗಳು, ಮೇವಿನ ಕೊರತೆಯಿಂದ ಕೃಷವಾಗುತ್ತಿವೆ ಎನ್ನುತ್ತಾರೆ ಸಮೀಪದ ಗ್ರಾಮಸ್ಥರು. ಸುತ್ತಲೂ ಬೇಲಿಯೇ ಇಲ್ಲದ ಗೋಶಾಲೆಯಲ್ಲಿ ಭದ್ರತೆ ಸಮಸ್ಯೆ ಕಾಡುತ್ತಿದೆ. ಜಾನುವಾರು ಕಳ್ಳರು ಅಥವಾ ಕಾಡು ಪ್ರಾಣಿಗಳು ದಾಳಿ ಮಾಡಿದರೆ ಆಗುವ ಅನಾಹುತಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಸತ್ತಿರುವ ಮರಿ ಮತ್ತು ಹಸುಗಳಿಗೆ ಪರ್ಯಾಯವಾಗಿ ಪರಿಹಾರ ಕೊಡುವವರು ಯಾರು? ಹಸು ಮತ್ತು ಕರಗಳ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಖರೀದಿದಾರರು ಪ್ರಶ್ನಿಸಿದ್ದಾರೆ.
ಹಸುಗಳನ್ನು ಬಂಧಿಸಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಧಿಕಾರಿಗಳಿಗೆ ಇದುವೇ ನೆಪವಾಗಿ ಪರಿಣಮಿಸಿದೆ. ಒಂದೆರಡು ದಿನಗಳಲ್ಲಿ ಪ್ರಕರಣ ಮುಕ್ತಾಯಗೊಳಿಸಿ ಹಸುಗಳನ್ನು ಬಿಡುಗಡೆ ಮಾಡಬಹುದೆಂದು ಅಂದಾಜಿಸಿದ್ದೆವು. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎನ್ನುವ ಅಧಿಕಾರಿಗಳು ಕಾರ್ಯಕ್ರಮ ಎಂದರೆ, ವೇದಿಕೆ ಪೆಂಡಾಲು ಎಂದು ಎರಡು ದಿನದಲ್ಲೇ ಭರ್ಜರಿ ತಯಾರಿ ನಡೆಸುವುದನ್ನು ಕಾಣಬಹುದಾಗಿದೆ. ಆದರೆ 20 ದಿನಗಳು ಕಳೆದರೂ ಮೂಕ ಪ್ರಾಣಿಗಳಿಗೆ ನೆರಳು ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ.
ಶುಕ್ರವಾರ ಇಲ್ಲಿನ ತಾಲೂಕು ಕಚೇರಿಗೆ ತೆರಳಿದ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು, ಬಂಧಿಸಿರುವ ಹಸು ಕರಗಳನ್ನು ತುರ್ತಾಗಿ ಬಿಡುಗಡೆ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ, ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಮೂಲಕ ವಿಷಯ ತಿಳಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಶನಿವಾರ ಬೆಳಗ್ಗೆ ಗೋಶಾಲೆಗೆ ಭೇಟಿ ನೀಡಿ ಪಶು ಸಂಗೋಪನ ಇಲಾಖೆ ಜಿಲ್ಲಾ ನಿರ್ದೇಶಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ, ತಕ್ಷಣ ಹಸುಗಳಿಗೆ ನೆರಳು ಒದಗಿಸುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Comments are closed.