ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶ್ರೀನಿವಾಸ್

148

Get real time updates directly on you device, subscribe now.


ತುಮಕೂರು: ಜೆಡಿಎಸ್ ಚಿಹ್ನೆಯಿಂದ ಆಯ್ಕೆಯಾಗಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.
ಬೆಂಗಳೂರಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನದ ರಾಜಿನಾಮೆ ಪತ್ರ ಸಲ್ಲಿಸಿದರು. ಸ್ಪೀಕರ್ ಕಾಗೇರಿ ರಾಜಿನಾಮೆ ಅಂಗೀಕರಿಸಿದ್ದಾರೆ.
ಈ ವೇಳೆ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಇದೊಂದು ಭಾವನಾತ್ಮಕ ವಿದಾಯ ಎಂದು ಹೇಳಲಿಚ್ಛಿಸುತ್ತೇನೆ. ದೇವೇಗೌಡರ ಸೋಲಿಗೆ ವಾಸು ಕಾರಣ ಎಂದು 2021 ರಲ್ಲಿ ಕುಮಾರಸ್ವಾಮಿ ಸುಳ್ಳು ಹೇಳಿಕೆ ನೀಡಿದ ದಿನದಿಂದಲೇ ನನ್ನನ್ನು ಪಕ್ಷದಿಂದ ಹಂತ ಹಂತವಾಗಿ ದೂರ ಮಾಡುತ್ತಾ ಬಂದರು, ಇಂದು ಸಂಪೂರ್ಣವಾಗಿ ಜೆಡಿಎಸ್ ಪಕ್ಷದಿಂದ ದೂರವಾಗುವ ದಿನ ಬಂದಿದೆ ಎಂದರು.

2019ರ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನಾನು ಪೂಜಿಸೋ ಮಣ್ಣಮ್ಮ ತಾಯಿಯ ಸಾಕ್ಷಿಯಾಗಿ ದೇವೇಗೌಡರ ಪರವಾಗಿಯೇ ದುಡಿದೆ. ಗುಬ್ಬಿ ಕ್ಷೇತ್ರದಲ್ಲಿ 68,500ಕ್ಕೂ ಹೆಚ್ಚು ಮತಗಳು ಜೆಡಿಎಸ್ ಪಕ್ಷಕ್ಕೆ ಬಿದ್ದರೂ ಸಹ ದುರಾದೃಷ್ಟವಶಾತ್ ಅಲ್ಪ ಮತಗಳಿಂದ ದೊಡ್ಡಗೌಡರು ಸೋತರು, ನಂತರ 2019ರ ಅಕ್ಟೋಬರ್ 3 ರಂದು ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿಯ ಆವರಣದಲ್ಲಿ ನನಗೆ 5.80 ಲಕ್ಷ ಮತ ಬೀಳುವುದಕ್ಕೆ ವಾಸು ಅವರ ಕೊಡುಗೆ ಅಪಾರ, ಜಿಲ್ಲೆಯಲ್ಲಿ ಅವರದ್ದೇ ಆದ ಶಕ್ತಿ ಇದೆ. ವಾಸು ಮತ್ತವರ ಇಡೀ ಕುಟುಂಬ ಹಗಲಿರುಳು ನನಗಾಗಿ ದುಡಿದರು ಎಂಬ ಬಹಿರಂಗ ಹೇಳಿಕೆಯನ್ನು ಸ್ವತಃ ದೇವೇಗೌಡರೇ ನೀಡಿದರು. ಇದಾದ 2 ವರ್ಷಗಳ ಬಳಿಕ ಕುಮಾರಸ್ವಾಮಿ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ ದಿನದಂದೇ ನಾನು ಅವರನ್ನು ಆಣೆ ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಕರೆದೆ, ಅವರು ಸವಾಲನ್ನು ಎದುರಿಸುವ ಬದಲಾಗಿ ಫಲಾಯನ ಮಾಡಿದರು. ಆದರೆ ನಾನು ಇಂದಿಗೂ ಆ ಮಾತಿಗೆ ಬದ್ಧನಿದ್ದೇನೆ ಎಂದರು.

ನಾನು ಜೆಡಿಎಸ್ ಪಕ್ಷದಲ್ಲಿ ಇದ್ದಾಗಲೇ ಅಕ್ಟೋಬರ್ 2021ರಲ್ಲಿ ತುರುವೇಕೆರೆ ಕ್ಷೇತ್ರದ ಬಿಜೆಪಿ ಮುಖಂಡನನ್ನು ಕರೆತಂದು ಗುಬ್ಬಿಯಲ್ಲಿ ಸಮಾವೇಶ ಮಾಡಿ ಅವರೇ ಗುಬ್ಬಿ ಜೆಡಿಎಸ್ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು. 20 ವರ್ಷದ ಬಾಂಧವ್ಯವನ್ನು ಇಷ್ಟು ಸುಲಭವಾಗಿ ಕಡಿದು ಹಾಕಿದರಲ್ಲಾ ಎಂದು ಮಾನಸಿಕವಾಗಿ ಬಹಳ ನೋವಾಯಿತು ಎಂದರು.
ಜೆಡಿಎಸ್ ಪಕ್ಷದಿಂದ ಮತ್ತೋರ್ವ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ 7 ತಿಂಗಳ ನಂತರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಸಂಚು ರೂಪಿಸಿ ನಾನು ಅಡ್ಡ ಮತದಾನ ಮಾಡಿದ್ದೇನೆ ಎಂದು ಆರೋಪಿಸಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಖಾಲಿ ಬ್ಯಾಲಟ್ ಹಾಕಿದ್ದಾರೆ, ಕಾಂಗ್ರೆಸ್ ಗೆ ಮತ ನೀಡಿದ್ದಾರೆ, ಬಿಜೆಪಿಗೆ ಮತ ನೀಡಿದ್ದಾರೆ, ಕಾಂಗ್ರೆಸ್ ಬಿಜೆಪಿ ಎರಡಕ್ಕೂ ಮತ ನೀಡಿದ್ದಾರೆ ಎಂದು ಆರೋಪಿಸಿದರು.

ಯಾರು ಏನೇ ಹೇಳಿದರೂ ಕಳೆದ 20 ವರ್ಷಗಳಲ್ಲಿ ತಾಲ್ಲೂಕು ಪಂಚಾಯತಿ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆವರೆಗೂ ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮರು ಮಾತನಾಡದೆ ಮತ ನೀಡಿದ್ದೇನೆ. 3 ಬಾರಿ ಮಂತ್ರಿಯಾಗುವ ಅವಕಾಶ ಬಿಟ್ಟು ಪಕ್ಷದಲ್ಲೇ ಉಳಿದೆ. 2 ಬಾರಿ ಆಪರೇಷನ್ ಕಮಲದ ಆಫರ್ ಬಂದಾಗಲೂ ಅದನ್ನು ತಿರಸ್ಕರಿಸಿ ಗುಬ್ಬಿ ಜನರ ಸ್ವಾಭಿಮಾನ ಕಾಪಾಡಿದೆ. 50 ಕೋಟಿ ಹಣ, ಮಂತ್ರಿ ಪದವಿ ಮನೆ ಬಾಗಿಲಿಗೆ ಬಂದಾಗ ಅದನ್ನು ವೀಡಿಯೋ ಮಾಡಿ ಕುಮಾರಸ್ವಾಮಿಗೆ ಕೊಟ್ಟೆ, ರಾಜ್ಯದ ಜನರ ಮುಂದೆ ಬಹಿರಂಗ ಪಡಿಸಿದೆ. ಇಷ್ಟೆಲ್ಲಾ ನಡೆದರೂ ನಾನು ದೇವೇಗೌಡರಿಗಾಗಿ ಜೆಡಿಎಸ್ ಪಕ್ಷದಲ್ಲಿ ಉಳಿದೆ. ಪಕ್ಷದಲ್ಲಿ ದೇವೇಗೌಡರ ಮಾತು ನಡೆಯುವವರೆಗೂ ನನ್ನನ್ನು ಅವರು ಉತ್ತಮ ರೀತಿಯಲ್ಲಿ ನಡೆಸಿಕೊಂಡರು. ನಾನು ಹತ್ತಿರದಿಂದ ನೋಡಿದಹಾಗೆ ದೇವೇಗೌಡರು ನಿಜವಾಗಿಯೂ ಜನಪರ ನಾಯಕರು, ರಾಜ್ಯದ ಹಿತಕ್ಕಾಗಿ ಶ್ರಮಿಸುತ್ತಾ ಬಂದಿರುವವರು. ಅವರ ರೈತ ಪರ ಕಾಳಜಿ, ಹೋರಾಟದ ಮನೋಭಾವ ನಮಗೆಲ್ಲ ಆದರ್ಶ, 2 ದಶಕಗಳ ಕಾಲ ದೇವೇಗೌಡರೊಂದಿಗೆ ಇದ್ದ ಬಾಂಧವ್ಯಕ್ಕೆ, ಅವರು ನನ್ನ ಮೇಲಿಟ್ಟಿದ್ದ ಪ್ರೀತಿಗೆ ನಾನೆಂದೂ ಚಿರಋಣಿ. ಅವರು ಶತಾಯುಷಿಗಳಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

20 ವರ್ಷಗಳಲ್ಲಿ ಕುಮಾರಸ್ವಾಮಿ ಅವರೊಂದಿಗೆ ಸ್ನೇಹ, ಬಾಂಧವ್ಯ, ಮುನಿಸು, ಕಿತ್ತಾಟ ಎಲ್ಲವೂ ಗುಬ್ಬಿ ಕ್ಷೇತ್ರದ ಅಭಿವೃದ್ಧಿಗಾಗಿ, ಜನರಿಗಾಗಿ, ಜೆಡಿಎಸ್ ಪಕ್ಷದ ಬೆಳವಣಿಗೆಗಾಗಿಯೇ ಹೊರೆತು ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ಕುಮಾರಸ್ವಾಮಿ ಅವರಿಗೂ ನಾನು ಶುಭ ಹಾರೈಸುತ್ತೇನೆ ಎಂದು ಶ್ರೀನಿವಾಸ್ ತಿಳಿದರು.

Get real time updates directly on you device, subscribe now.

Comments are closed.

error: Content is protected !!