ಕಂದಾಯ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಡೀಸಿ

542 ಹೊಸ ಕಂದಾಯ ಗ್ರಾಮ ರಚನೆ- 7000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

71

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 542 ಕಂದಾಯ ಗ್ರಾಮ ರಚಿಸಲಾಗಿದ್ದು, ಸದರಿ ಕಂದಾಯ ಗ್ರಾಮದ ಸುಮಾರು 7000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತದ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನೂತನವಾಗಿ ರಚಿಸಲಾದ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಸದಾಗಿ ರಚಿಸಿರುವ ಕಂದಾಯ ಗ್ರಾಮಗಳು ಈ ಹಿಂದೆ ಹಟ್ಟಿ, ತಂಡಾಗಳಾಗಿದ್ದವು. ಆ ಗ್ರಾಮಗಳಿಗೆ ಹೆಸರು ಇರಲಿಲ್ಲ, ಸರ್ಕಾರದ ಅಧಿನಿಯಮಗಳಡಿ ಸದರಿ ಗ್ರಾಮಗಳಿಗೆ ಹೆಸರನ್ನು ನೀಡಿ ಆ ನಿವಾಸಿಗಳಿಗೆ ಜಾಗದ ಹಕ್ಕನ್ನು ನೀಡಲಾಗಿದೆ. ಸರ್ಕಾರದಿಂದ ಕಾಲಕಾಲಕ್ಕೆ ಗ್ರಾಮಗಳ ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿದ್ದ ಅನುದಾನದ ಸೌಲಭ್ಯ ಮುಖ್ಯ ಗ್ರಾಮಗಳಿಗೆ ಮಾತ್ರ ವಿನಿಯೋಗವಾಗುತ್ತಿತ್ತು. ಹಟ್ಟಿ, ತಾಂಡಾಗಳು ಈ ಅನುದಾನದಿಂದ ವಂಚಿತವಾಗುತ್ತಿದ್ದವು. ಇದನ್ನು ಮನಗಂಡ ಸರ್ಕಾರ ಹಟ್ಟಿ, ತಾಂಡಾ, ಹಾಡಿಗಳಂತಹ ಜನ ವಸತಿಗಳನ್ನು ಪರಿವರ್ತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಲು ಅಧಿನಿಯಮ ರೂಪಿಸಿ ಫಲಾನುಭವಿಗಳಿಗೆ ತಮ್ಮ ಮನೆಯ ಹಕ್ಕನ್ನು ನೀಡುವ ಮೂಲಕ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಹೊಸದಾಗಿ ರಚನೆಯಾದ ಕಂದಾಯ ಗ್ರಾಮಗಳ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಪ್ರತ್ಯೇಕ ಅನುದಾನ ಒದಗಿಸಲಾಗುವುದು. ಹೊಸ ಕಂದಾಯ ಗ್ರಾಮಗಳಲ್ಲಿ ರಸ್ತೆ, ಶಾಲೆ, ಅಂಗನವಾಡಿ, ಚರಂಡಿ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಗ್ರಾಮಪಂಚಾಯತಿಯಲ್ಲಿ ತಮ್ಮ ಹಕ್ಕನ್ನು ಕೇಳಲು ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಹಟ್ಟಿ, ತಾಂಡಾಗಳಲ್ಲಿ ನೂರಾರು ವರ್ಷಗಳಿಂದ ತಮ್ಮ ಪೂರ್ವಿಕರು ವಾಸ ಮಾಡುತ್ತಿದ್ದ ಮನೆಯ ನಿವೇಶನ, ಜಮೀನಿನ ಮಾಲೀಕರು ನೀವಾಗಿರಲಿಲ್ಲ. ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ವಯ ಮನೆ ನಿರ್ಮಿಸಿಕೊಂಡ ಜಾಗ ಖಾಸಗಿಯಾಗಿರಲಿ ಅಥವಾ ಸರ್ಕಾರದ್ದಾಗಿರಲಿ ಆ ಜಾಗದ ಮಾಲೀಕತ್ವದ ಹಕ್ಕುಪತ್ರವನ್ನು ನಿಮಗೆ ನೀಡಲಾಗುತ್ತಿದೆ. ಪ್ರಸ್ತುತ ಮನೆಗಳಿರುವ ಜಾಗ ನಮ್ಮ ಹೆಸರಲ್ಲಿಲ್ಲ ಎನ್ನುವ ಆತಂಕಕ್ಕೊಳಗಾಗದೆ. ಅನುಭವಿಸುವ ಹಕ್ಕನ್ನು ನೀಡಲಾಗಿದೆ. ಈ ಹಕ್ಕುಪತ್ರವನ್ನು ಬ್ಯಾಂಕುಗಳಲ್ಲಿ ಅಡಮಾನವಿಟ್ಟು ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು, ಸಮಸ್ಯೆಗಳಿದ್ದರೆ ಆಯಾ ಗ್ರಾಮ ಲೆಕ್ಕಾಧಿಕಾರಿ ಅಥವಾ ತಹಶೀಲ್ದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕೆಂದು ಫಲಾನುಭವಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಸೂರಿನಿಂದ ಸುಸ್ಥಿರ ಊರಿನೆಡೆಗೆ ಎಂಬ ಉದ್ದೇಶದಡಿ ಹೊಸ ಕಂದಾಯ ಗ್ರಾಮಗಳ ಜನ ವಸತಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಸುಮಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಿದ್ದು, ತಮ್ಮ ಮನೆಗೆ ಸಂಬಂಧಿಸಿದ ಯಾವುದೇ ರೀತಿಯ ಹಕ್ಕು ಇಲ್ಲದವರಿಗೆ ಸರ್ಕಾರ ಹೊಸದಾಗಿ ಅಧಿನಿಯಮ ರೂಪಿಸಿ ಖಾಸಗಿ ಜಮೀನಿದ್ದಲ್ಲಿ ಅದನ್ನು ಸರ್ಕಾರದ ವಶಕ್ಕೆ ಪಡೆದು ನಂತರ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರು.

ದಾಖಲೆ ರಹಿತ ಜನವಸತಿಗಳಿಗೆ ಕಾನೂನಿನ ಮಾನ್ಯತೆ ನೀಡಿ ಅಲ್ಲಿ ವಾಸವಿರುವ ಕುಟುಂಬಗಳಿಗೆ ಅವರ ವಾಸದ ಜಾಗಕ್ಕೆ ಹಕ್ಕು ದಾಖಲೆ ನೀಡುವ ಉದ್ದೇಶದಿಂದ ಹೊಸ ಕಂದಾಯ ಗ್ರಾಮಗಳನ್ನು ರಚಿಸಲಾಗಿದೆ. ಇದರಿಂದ ಅಧಿಕೃತವಾಗಿ ಗುರುತಿಸಿದ ಪ್ರದೇಶದ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಹಕ್ಕು ಪತ್ರ ನೀಡಿದ ಜನ ವಸತಿಗಳನ್ನು ಫಲಾನುಭವಿಗಳು ಯಾರಿಗೂ ಪರಭಾರೆ ಮಾಡದೆ ತಮ್ಮ ಮಕ್ಕಳು, ಮೊಮ್ಮಕ್ಕಳು ಅನುಭವಿಸಲು ಅನುವು ಮಾಡಿಕೊಡಬೇಕೆಂದು ಕಿವಿ ಮಾತು ಹೇಳಿದರು.
ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಏಕಕಾಲಕ್ಕೆ ಈ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನನ್ನ ಗ್ರಾಮ ನನ್ನ ಹಕ್ಕು ಎಂಬ ಗಾಂಧೀಜಿ ಅವರ ಅಂತರಂಗದ ದನಿಯಂತೆ ಬೇಚರ್ಕ್ ಗ್ರಾಮಗಳನ್ನು ಒಂದು ಕಡೆ ಕಟ್ಟಿ ಕಂದಾಯ ಎಲ್ಲೆಯನ್ನು ಗುರುತಿಸಿ ಹಕ್ಕು ಪತ್ರ ನೀಡುತ್ತಿರುವ ಕಾರ್ಯ ಶ್ಲಾಘನೀಯ ಸಂಗತಿಯಾಗಿದೆ ಎಂದು ತಿಳಿಸಿದರು.

ಈ ಹಿಂದೆ ಇದ್ದ ಎಲ್ಲಾ ಗ್ರಾಮಗಳೂ ಸಹ ಬ್ರಿಟೀಷರ ಕಾಲ (1860- 1890) ದಲ್ಲಿ ಮೊದಲ ಬಾರಿ ಅಳತೆ ಮಾಡಿದಾಗ ರಚನೆಯಾದ ಗ್ರಾಮಗಳಾಗಿವೆ. ಅದಾದ ನಂತರ ಯಾವುದೇ ಹೊಸ ಕಂದಾಯ ಗ್ರಾಮಗಳು ರಚನೆಯಾಗಿಲ್ಲ. ಗ್ರಾಮಗಳು ಬೆಳೆದು ಸಣ್ಣಸಣ್ಣ ಹಾಡಿ, ತಾಂಡಾ, ಹಟ್ಟಿಗಳಂತಹ ಜನವಸತಿ ಪ್ರದೇಶಗಳಿಗೆ ಸರ್ಕಾರದ ಸೌಲಭ್ಯ ತಲುಪುತ್ತಿರಲಿಲ್ಲ, ಇಂತಹ ಜನವಸತಿಗಳಿಗೆ ತನ್ನದೇ ಆದ ಗುರುತಿಸಿಕೊಳ್ಳುವಿಕೆ ಇರಲಿಲ್ಲವಾದ್ದರಿಂದ ಸದರಿ ಜನ ವಸತಿಗಳನ್ನು ಗುರುತಿಸಲು ಸರ್ಕಾರದಿಂದ ಹೊಸದಾಗಿ ಕಂದಾಯ ಗ್ರಾಮಗಳ ಕೋಶ ರಚಿಸಲಾಗಿತ್ತು. ಕಳೆದ 2- 3 ವರ್ಷಗಳಿಂದ ಹೊಸ ಕಂದಾಯ ಗ್ರಾಮಗಳ ರಚನೆ ಕಾರ್ಯಕ್ಕೆ ವೇಗ ದೊರೆತು ಈಗ ಸಾಕಾರಗೊಂಡಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 2700 ಮೂಲ ಗ್ರಾಮಗಳಿದ್ದು, ಹೊಸದಾಗಿ ಗುರುತಿಸಿರುವ 542 ಕಂದಾಯ ಗ್ರಾಮಗಳ ಪೈಕಿ 268 ಗ್ರಾಮಗಳಲ್ಲಿ 2ಇ ಅಧಿಸೂಚನೆಯನ್ವಯ ಖಾಸಗಿ ಜಮೀನಿನಲ್ಲಿದ್ದ ಜನವಸತಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 542ರ ಪೈಕಿ 447 ಕಂದಾಯ ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, 447 ಕಂದಾಯ ಗ್ರಾಮಗಳ ಪೈಕಿ 237 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ 170 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಆದಿಲಕ್ಷ್ಮಮ್ಮ, ಸಾವಿತ್ರಮ್ಮ, ತಾಯಮ್ಮ, ಮೂಡ್ಲಪ್ಪ, ಮಂಜುನಾಥ, ರತ್ನಮ್ಮ, ರಾಜಣ್ಣ, ಓಂಕಾರಮ್ಮ, ಬೆಟ್ಟೇಗೌಡ, ಮಾಸ್ತಪ್ಪ, ಭೀಮಾನಾಯ್ಕ ಹಾಗೂ ಸುರೇಶ್ ನಾಯ್ಕ ಸೇರಿದಂತೆ 12 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಹೆಚ್.ಶಿವಪ್ಪ, ಕಂದಾಯ ನಿರೀಕ್ಷಕ ಅಜಯ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!