ಕುಣಿಗಲ್: ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ರಾಜ್ಯದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಮಹಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಉರಿ ಬಿಸಿಲನ್ನು ಲೆಕ್ಕಿಸದೆ ಅಸಂಖ್ಯಾತ ಭಕ್ತರು ಶ್ರೀಸ್ವಾಮಿಯವರ ತೇರು ಎಳೆದು ಪುನೀತರಾದರು. ಹರಕೆ ಹೊತ್ತಂತಹ ಭಕ್ತರು ದವನ ಬಾಳೆ ಹಣ್ಣು, ಮೆಣಸು ಕಾಳನ್ನು ರಥಕ್ಕೆ ಎರಚಿ ಭಕ್ತಿ ಸಮರ್ಪಿಸಿದರು. ವಿವಿಧ ಪಕ್ಷಗಳ ಅಭಿಮಾನಿಗಳು ತಮ್ಮ ನಾಯಕರೆ ಮುಂದಿನ ಶಾಸಕರಾಗಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆಯುವ ಮೂಲಕ ಚುನಾವಣೆ ವರ್ಷದ ರಥೋತ್ಸವದ ವಿಶೇಷವಾಗಿತ್ತು. ಶ್ರೀಗಳು ಗದ್ದುಗೆಯಲ್ಲಿ ಜೀವಂತ ಸಮಾಧಿಯಾದ ಅಭಿಜಿನ್ ಲಗ್ನದಲ್ಲಿ ಸಿದ್ದಗಂಗಾ ಶ್ರೀಗಳಾದ ಸಿದ್ದಲಿಂಗ ಮಹಾಸ್ವಾಮಿಗಳು, ಯಡಿಯೂರು ಬಾಳೆಹೊನ್ನುರು ಖಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಹಂಗರಹಳ್ಳಿ ಬಾಲಮಂಜುನಾಥ ಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯ ಸಮಿತಿಯ ಅಧ್ಯಕ್ಷ ಪ್ರೊ.ಸಿದ್ದಲಿಂಗಪ್ಪ ಸಂಕನೂರು, ಶಾಸಕ ಡಾ.ರಂಗನಾಥ್, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಯಡಿಯೂರು ಗ್ರಾಪಂ ಅಧ್ಯಕ್ಷ ದೇವರಾಜ ಅ. ದೀಪು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ರಾಹುಲ್ ಕುಮಾರ್, ಉಪ ವಿಭಾಗಾಧಿಕಾರಿ ಹೊಟೇಲ್ ಶಿವಪ್ಪ, ತಹಶೀಲ್ದಾರ್ ಮಹಾಬಲೇಶ್ವರ, ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ಡಿ.ನಾಗರಾಜು, ವ್ಯವಸ್ಥಾಪಕ ಮಂಜುನಾಥ ಇತರರು ಹಾಜರಿದ್ದರು.
ದೇವಾಲಯದ ಮುಂಬದಿಯ ರಥ ಬೀದಿಯಲ್ಲಿ ಭಕ್ತರಿಗೆ ಬಿಸಿಲಿನ ಬೇಗೆ ತಣಿಸಲು ಮೂರಕ್ಕೂ ಹೆಚ್ಚು ಟ್ಯಾಂಕರ್ ಗಳಿಂದ ನೀರು ಹಾಕುವ ಮೂಲಕ ರಥ ಬೀದಿಯನ್ನು ತಂಪುಗೊಳಿಸುವ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಯಾವುದೇ ಅನಾನುಕೂಲ ವಾಗದಂತೆ ಅಗತ್ಯ ಕ್ರಮವಹಿಸಲಾಗಿತ್ತು. ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ದಾಹ ನೀಗಿಸಲು ರಸ್ತೆಯ ಪ್ರಮುಖ ಕಡೆಗಳಲ್ಲಿ ಭಕ್ತರು ನೀರು ಮಜ್ಜಿಗೆ, ಪಾನಕ, ಹೆಸರು ಬೇಳೆ, ಅರವಟ್ಟಿಗೆ ಸ್ಥಾಪಿಸಿ ವಿತರಿಸಿದ್ದು, ಮಹಾ ರಥೋತ್ಸವದ ನಂತರ ಅನ್ನ ದಾಸೋಹ ನೆರವೇರಿಸಿದರು. ಷಟ್ ಸ್ಥಲ ಧ್ವಜ ಹರಾಜು ಪ್ರಕ್ರಿಯೆಗೆ ಕಾಂಗ್ರೆಸ್ ನ ಹಾಲಿ, ಮಾಜಿ ಶಾಸಕರು ರಥದ ಮುಂದೆ ಇದ್ದರೂ ಇಬ್ಬರು ಈ ಬಗ್ಗೆ ಹರಾಜಿನಲ್ಲಿ ಪಾಲ್ಗೊಳ್ಳದೆ ಮೌನಕ್ಕೆ ಶರಣಾಗಿದ್ದು ವಿಶೇಷವಾಗಿತ್ತು. ಕೆಲ ತಿಂಗಳ ಹಿಂದೆ ಕಗ್ಗೆರೆಯಲ್ಲಿ ನಡೆದ ರಥೋತ್ಸವದಲ್ಲಿ ಷಟ್ ಸ್ಥಲ ಧ್ವಜ ಹರಾಜು ಪ್ರಕ್ರಿಯೆಗೆ ಇಬ್ಬರೂ ಮುಖಂಡರ ನಡುವೆ ಪ್ರತಿಷ್ಠೆಯ ಕಣವಾಗಿದ್ದು ಸ್ಮರಿಸಬಹುದು.
Comments are closed.