ತುಮಕೂರು: ಕಾಂಗ್ರೆಸ್ ಮುಖಂಡರ ರಾಹುಲ್ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿರುವ ಸರಕಾರದ ಕ್ರಮ ಅಸಂವಿಧಾನಿಕವಾಗಿದ್ದು, ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಈ ರೀತಿಯ ಸೇಡಿನ ಕ್ರಮವನ್ನು ಬಿಜೆಪಿ ಅನುಸರಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಡಿದ ಭಾಷಣದ ಸಂಬಂಧ ಹೂಡಲಾಗಿದ್ದ ಪ್ರಕರಣ ಮುಂದಿಟ್ಟುಕೊಂಡು ಚುನಾವಣಾ ಸಮಯದಲ್ಲಿ ಅವರನ್ನು ಜೈಲಿಗೆ ಕಳುಹಿಸುವ ಹುನ್ನಾರವಾಗಿ ಬಿಜೆಪಿ ಮಾಡಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಒಳ್ಳೆಯ ಲಕ್ಷಣ, ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ರಾಜೀವ್ಗಾಂಧಿ ಅವರ ಮೇಲೆ ಇದೇ ಬಿಜೆಪಿ ಪಕ್ಷದವರು ಗಲಿಗಲಿಮೇ ಷೋರ್ ಐ ರಾಜೀವ್ಗಾಂಧಿ ಚೋರ್ ಐ ಎಂಬ ಘೋಷಣೆ ಮುಳುಗಿಸಿ ದಾಗ ವಿರೋಧ ಪಕ್ಷಗಳ ಟೀಕೆಯನ್ನು ರಾಜೀವ್ಗಾಂಧಿ ಸ್ವಾಗತಿಸಿದ್ದರು. ಆದರೆ ಮೋದಿ ಮತ್ತು ಅದಾನಿ ಕುರಿತಾಗಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಕೇಳುತ್ತಿರುವ ದಿನಕ್ಕೊಂದು ಪ್ರಶ್ನೆಗೆ ಉತ್ತರಿಸಲಾಗದೆ. ಈ ರೀತಿಯ ದ್ವೇಷದ ಕ್ರಮ ಕೈಗೊಂಡಿರುವುದು ಸರಿಯಲ್ಲ, ಇದರ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಚಂದ್ರಶೇಖರ ಗೌಡ ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಮಾತನಾಡಿ, ಬಿಜೆಪಿ ಇಬ್ಬರು ಶಾಸಕರಾದ ಎಂ.ಪಿ.ಕುಮಾರ ಸ್ವಾಮಿ ಮತ್ತು ನೆಹರು ಒಲೇಕಾರ್ ಅವರಿಗೆ ನ್ಯಾಯಾಲಯ ತಲಾ ನಾಲ್ಕು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ಇದುವರೆಗೂ ಸ್ವೀಕರ್ ಅವರಾಗಲಿ, ಪಕ್ಷದ ಅಧ್ಯಕ್ಷರಾಗಲಿ ಅವರ ಶಾಸಕತ್ವ ವಜಾ ಮಾಡಿಲ್ಲ. ಆದರೆ ನ್ಯಾಯಾಲಯದ ತೀರ್ಪು ಬಂದ 24 ಗಂಟೆಯೊಳಗೆ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದು ಪಡಿಸಿರುವುದು ಆತುರದ ಮತ್ತು ಸೇಡಿನ ಕ್ರಮವಾಗಿದೆ. ತಾತ್ವಿಕವಾಗಿ ಅವರನ್ನು ಎದುರಿಸಲಾಗದೆ ಹತಾಶೆಯ ಕ್ರಮವಾಗಿದೆ. ಪ್ರಸ್ತುತ ಬಿಜೆಪಿಯಲ್ಲಿರುವ ಮುದ್ದಹನುಮೇ ಗೌಡರು ಸೋತು ರಾಜಕೀಯದಿಂದ ಮೂಲೆ ಗುಂಪಾಗಿದ್ದಾಗ, ಅವರನ್ನು ಗುರುತಿಸಿ ಕರೆತಂದು ಪಕ್ಷದ ನಾಯಕರ ವಿರೋಧದ ನಡುವೆಯೂ ಅವರನ್ನು ಸಂಸತ್ ಸದಸ್ಯರನ್ನಾಗಿ ಮಾಡಿದವರು ಡಾ.ಜಿ.ಪರಮೇಶ್ವರ್ ಮತ್ತು ನಮ್ಮ ನಾಯಕ ರಾಹುಲ್ಗಾಂಧಿ, ಅಂತಹವರಿಗೆ ಮೆಚ್ಯೂರಿಟಿ ಇಲ್ಲ ಎಂದು ಹೇಳಿಕೆ ನೀಡಿರುವುದು ಮುದ್ದಹನುಮೇ ಗೌಡರಿಗೆ ಶೋಭೆ ತರುವಂತಹದ್ದಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಕೆಂಚಮಾರಯ್ಯ, ಹಿರಿಯ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್, ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ, ನರಸಿಂಹಯ್ಯ, ಮಂಜುನಾಥ್, ಅಂಬರೀಷ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ನರಸಿಂಹ ಮೂರ್ತಿ, ಸಂಜೀವಕುಮಾರ್, ಶಿವಾಜಿ, ವಾಲೆಚಂದ್ರಯ್ಯ, ಟಿ.ಜಿ.ಲಿಂಗರಾಜು, ಪಟ್ಟರಾಜು, ಸುಜಾತ ಮತ್ತಿತರರು ಇದ್ದರು.
Comments are closed.