ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಲಿ

ಕರ್ನಾಟಕ ಬ್ಯಾಂಕ್ ಗ್ರಾಹಕರ ನಂಬಿಕೆಗೆ ಅರ್ಹವಾದ ಬ್ಯಾಂಕ್: ಸ್ವಾಮೀಜಿ

119

Get real time updates directly on you device, subscribe now.


ತುಮಕೂರು: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯುತ್ತಮ ಸ್ಥಾನ ಪಡೆದುಕೊಂಡು ಗ್ರಾಹಕರ ನಂಬಿಕೆಗೆ ಅರ್ಹವಾದ ಬ್ಯಾಂಕ್ ಎಂದರೆ ಅದು ಕರ್ನಾಟಕ ಬ್ಯಾಂಕ್ ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ನುಡಿದರು.
ನಗರದ 29ನೇ ವಾರ್ಡ್ ಮರಳೂರು ಬಡಾವಣೆಯ ಸದಾಶಿವ ನಗರದಲ್ಲಿ ಕರ್ನಾಟಕ ಬ್ಯಾಂಕ್ ನ ತುಮಕೂರು ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಇಂದು ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಅನೇಕ ಬ್ಯಾಂಕ್ ಗಳು ಮುಚ್ಚಲ್ಪಡುತ್ತಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಭಾರತದಲ್ಲಿ ಬ್ಯಾಂಕುಗಳು ಬೆಳೆಯುತ್ತಿವೆ ಎಂದರೆ ನಮ್ಮ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಭಾವಿಸಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ಬ್ಯಾಂಕ್ ಪ್ರಾರಂಭವಾಗಿ ನೂರು ವರ್ಷ ಕಳೆಯುತ್ತಿವೆ. ನೂರು ವರ್ಷಗಳ ಹಿಂದೆ ಹಿರಿಯರು ಹಾಕಿದಂತಹ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ತನ್ನ ಶಾಖೋಪ ಶಾಖೆಗಳನ್ನು ದೇಶದಾದ್ಯಂತ ವಿಸ್ತರಿಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಮುಖಾಂತರ ಆರ್ಥಿಕವಾಗಿ ಸೌಲಭ್ಯ ತಂದು ಕೊಡುವ ಕೆಲಸವನ್ನು ಈ ಬ್ಯಾಂಕ್ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ಲಾಭದ ಬೆನ್ನಹತ್ತಿ ಹೋದಂತಹ ಬ್ಯಾಂಕ್ ಅಲ್ಲ, ಸೇವೆಯ ಬೆನ್ನ ಹತ್ತಿ ಹೋದಂತಹ ಬ್ಯಾಂಕ್ ಆಗಿದೆ. ಯಾವಾಗ ಸೇವೆಯ ಬೆನ್ನತ್ತಿ ಹೋದಾಗ ಲಾಭ ತನ್ನಷ್ಟಕ್ಕೆ ತಾನೇ ಹುಡುಕಿಕೊಂಡು ಬರುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿದರೆ ತನ್ನಷ್ಟಕ್ಕೆ ತಾನೆ ಅಭಿವೃದ್ಧಿ ಹೊಂದುತ್ತದೆ ಎನ್ನುವುದಕ್ಕೆ ಈ ಬ್ಯಾಂಕ್ ಸಾಕ್ಷಿಯಾಗಿದೆ ಎಂದರು.

ಕರ್ನಾಟಕ ಎಂದು ಹೆಸರಿಟ್ಟುಕೊಂಡು ದೇಶದಾದ್ಯಂತ ಕೆಲಸ ಮಾಡುತ್ತಾ ಕರ್ನಾಟಕದ ಕೀರ್ತಿಯನ್ನು ದೇಶದಾದ್ಯಂತ ವಿಸ್ತರಿಸುವ ಕೆಲಸ ಮಾಡಿಕೊಂಡು ಬರುತ್ತಿರುವ ಕರ್ನಾಟಕ ಬ್ಯಾಂಕ್ ಸೇವೆ ಗ್ರಾಹಕರಿಗೆ ಮತ್ತಷ್ಟು ಸಿಗಲಿ ಎಂದು ಶುಭ ಹಾರೈಸಿದರು.
ತುಮಕೂರು ಪ್ರಾದೇಶಿಕ ಕಚೇರಿಯ ನೂತನ ಪ್ರಾಂಗಣದ ಉದ್ಘಾಟನೆ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್ ನ ಅಧ್ಯಕ್ಷ ಪಿ.ಪ್ರದೀಪ್ಕುಮಾರ್, ಕರ್ನಾಟಕ ಬ್ಯಾಂಕ್ ನ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ತುಮಕೂರಿನ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡದ ಉದ್ಘಾಟನೆಯಾಗಿದೆ. ಇದರ ಜೊತೆಗೆ ಇದೇ ಕಟ್ಟಡದಲ್ಲಿ 910ನೇ ಶಾಖೆಯೂ ಲೋಕಾರ್ಪಣೆಗೊಂಡಿದೆ. ಶತಮಾನೋತ್ಸವದ ಸಂದರ್ಭದಲ್ಲಿ 100 ಜನ ಗ್ರಾಹಕರಿಗೆ ವಿಶೇಷವಾಗಿ ಗೌರವಾರ್ಪಣೆ ಮಾಡಲಾಗಿದೆ ಎಂದರು.
ಬ್ಯಾಂಕ್ನ್ನು ಡಿಜಿಟಲ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿ ಕಳೆದ 5 ವರ್ಷಗಳಿಂದ ಡಿಜಿಟಲ್ ತಂತ್ರಜ್ಞಾನವನ್ನೂ ಕರ್ನಾಟಕ ಬ್ಯಾಂಕ್ ಅಳವಡಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಗ್ರಾಹಕರ ನೆಚ್ಚಿನ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ತುಮಕೂರು- ಸದಾಶಿವನಗರ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟಿಸಿದ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ್.ಎಂ.ಎಸ್. ಮಾತನಾಡಿ, ಬ್ಯಾಂಕ್ನ ಈ ಶತಮಾನೋತ್ಸವ ವರ್ಷದಲ್ಲಿ ಹಲವಾರು ಉಪ ಕ್ರಮಗಳನ್ನು ನಾವು ಹಾಕಿಕೊಂಡಿದ್ದೇವೆ. ಮುಖ್ಯವಾಗಿ ಬ್ಯಾಂಕನ್ನು ಡಿಜಿಟಲ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಲಾಗಿದೆ. ಗ್ರಾಹಕ ಕೇಂದ್ರಿತ ಬ್ಯಾಂಕ್ ಆಗಿ 2ನೇ ಶತಮಾನದಲ್ಲಿ ಅತ್ಯುತ್ತಮ ಗ್ರಾಹಕ ಸೇವೆ ಹಾಗೂ ಅತ್ಯುತ್ತಮ ಡಿಜಿಟಲ್ ಸೌಲಭ್ಯ ಕೊಡುತ್ತಾ ಗ್ರಾಹಕರ ಕಣ್ಮಣಿಯಾಗಿ ದೇಶದಾದ್ಯಂತ ನಮ್ಮ ಶಾಖಾ ವಿಸ್ತಾರ ಹಾಗೂ ವ್ಯವಹಾರದ ವಿಸ್ತಾರ ಮಾಡಬೇಕೆಂದು ದೃಢಸಂಕಲ್ಪ ಹೊಂದಿದ್ದೇವೆ ಎಂದರು.

ಸಮಾರಂಭದಲ್ಲಿ 100 ಜನ ಕರ್ನಾಟಕ ಬ್ಯಾಂಕ್ ಗ್ರಾಹಕರನ್ನು ಗೌರವಿಸಲಾಯಿತು. ಈ ವೇಳೆ ಬ್ಯಾಂಕ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್, ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುಬ್ಬರಾಮು.ಎಲ್, ಆಡಳಿತ ಮಂಡಳಿಯ ನಿರ್ದೇಶಕ ಕೇಶವಕೃಷ್ಣ ದೇಸಾಯಿ, ಬಿ.ಆರ್.ಅಶೋಕ್, ಡಾ.ಡಿ.ಎಸ್.ರವೀಂದ್ರನ್, ಜೀವನ್ದಾಸ್ ನಾರಾಯಣ್, ಬಾನುಕೃಷ್ಣ, ಬ್ರಾಂಚ್ ವ್ಯವಸ್ಥಾಪಕರಾದ ಆರ್.ಸತ್ಯಕಿರಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!