ತುಮಕೂರು: ರಾಹುಲ್ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದು ಖಂಡಿಸಿ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಚಂದ್ರಶೇಖರ ಗೌಡ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕ, ಎಸ್ಸಿ, ಎಸ್ಟಿ ಮತ್ತು ಓಬಿಸಿ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ನಗರದ ಭದ್ರಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಎಸ್ಸಿ ಘಟಕದ ಅಧ್ಯಕ್ಷ ಲಿಂಗರಾಜು, ಎಸ್ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಓಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು ಹಾಗೂ ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರದ ಕ್ರಮ ಖಂಡಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ವಿಗೆ ಆಡಳಿತ ಎಷ್ಟು ಮುಖ್ಯವೋ ವಿರೋಧ ಪಕ್ಷವೂ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ. ಇದರ ಅರಿವಿರದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಸರಕಾರದ ನಡೆಯನ್ನು ಟೀಕಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಮೇಲೆ ಇಲ್ಲಸಲ್ಲದ ಕೇಸು ಹಾಕಿ ಚುನಾವಣೆ ಸಂದರ್ಭದಲ್ಲಿ ಅವರ ಸದಸ್ಯತ್ವ ರದ್ದು ಪಡಿಸಿ ಶಿಕ್ಷೆಗೆ ಒಳಗಾಗುವಂತೆ ಮಾಡಿರುವುದು ಸಂವಿಧಾನ ಬಾಹಿರ ಕೃತ್ಯವಾಗಿದೆ. ರಾಹುಲ್ ಗಾಂಧಿ ಅವರ ಸದಸ್ಯತ್ವ ರದ್ದು ಪ್ರಕ್ರಿಯೆ ಪೂರ್ವ ನಿಯೋಜಿತದಂತೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿಯವರು ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಾ ವಿರೋಧಿಗಳನ್ನು ಭಯದ ಮೂಲಕ ಹಣಿಯಲು ಹೊರಟಿದ್ದಾರೆ. ಇದು ಭಾರತದಂತಹ ರಾಷ್ಟ್ರದ ಪ್ರಧಾನಿಯೊಬ್ಬರ ನಡವಳಿಕೆಗೆ ಶೋಭೆ ತರುವಂತಹದ್ದಲ್ಲ. ಕೂಡಲೇ ರಾಹುಲ್ ಗಾಂಧಿ ಅವರ ಮೇಲಿನ ಅನಗತ್ಯ ಕಿರುಕುಳ ಕೈಬಿಡಬೇಕು, ಸದನದ ಒಳಗೆ ಮತ್ತು ಹೊರಗೆ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ಹೋಗಿ ಈ ರೀತಿಯ ಕೃತ್ಯಕ್ಕೆ ಕೈಹಾಕಿದೆ. ಇದಕ್ಕೆ ಎಂದಿಗೂ ಕಾಂಗ್ರೆಸ್ ಕಾರ್ಯಕರ್ತರು ಬಗ್ಗುವುದಿಲ್ಲ, ಮತ್ತಷ್ಟು ಪುಟಿದೇಳಲಿದೆ ಎಂದು ಚಂದ್ರಶೇಖರ ಗೌಡ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನಮ್ಮ ಪ್ರಧಾನಿಯವರ ಆಪ್ತ ಅದಾನಿಯವರಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾಗಿ ತನ್ನ ಸ್ನೇಹಿತರ ರಕ್ಷಣೆಗಾಗಿ ರಾಹುಲ್ ಗಾಂಧಿಯವರು ಪಾರ್ಲಿಮೆಂಟ್ ಗೆ ಬರದಂತೆ ನೋಡಿಕೊಂಡರು. ಭಾರತದ ಇದುವರೆಗಿನ ರಾಜಕೀಯ ವ್ಯವಸ್ಥೆಯಲ್ಲಿ ತೀರ ಅಪರೂಪದ ಘಟನೆ ಇದಾಗಿದೆ. ಇದನ್ನು ಎಲ್ಲಾ ಭಾರತೀಯರು ಖಂಡಿಸಬೇಕಿದೆ.
ಅರ್ಜಿದಾರರೆ ವಿಚಾರಣೆಗೆ ತಡೆಯಾಜ್ಞೆ ಕೋರಿ ಅದಾನಿ ಮತ್ತು ಪ್ರಧಾನಿಯವರ ನಂಟು ಹೊರ ಬರುತ್ತಿದ್ದಂತೆ ಕೇಸಿನ ತೀರ್ಪು ಬರುವಂತೆ ಮಾಡಿರುವುದು ಷಡ್ಯಂತ್ರದ ಭಾಗ, ರಾಜ್ಯದಲ್ಲಿ ಇಬ್ಬರು ಶಾಸಕರಿಗೆ ಜೈಲು ಶಿಕ್ಷೆಯಾಗಿದೆ. ನ್ಯಾಯಾಲಯ ಶಿಕ್ಷೆ ಘೋಷಣೆ ಮಾಡಿ ತಿಂಗಳು ಕಳೆಯುತ್ತಾ ಬಂದಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಆದರೆ ತೀರ್ಪು ಪ್ರಕಟವಾದ 24 ಗಂಟೆಯೊಳಗೆ ಸದಸ್ಯತ್ವ ರದ್ದುಪಡಿಸುವ ತರಾತುರಿಯಲ್ಲಿ ಕೆಲಸ ಮಾಡಿರುವುದು ನಮ್ಮ ನಾಯಕರಿಗೆ ಬಿಜೆಪಿ ಪಕ್ಷ ಹೆದರಿರುವುದರ ಸಂಕೇತ ಎಂದರು.
ಪ್ರತಿಭಟನೆಯಲ್ಲಿ ಇಕ್ಬಾಲ್ ಅಹಮದ್, ರೆಡ್ಡಿ ಚಿನ್ನಯಲ್ಲಪ್ಪ, ಹೆಚ್.ಸಿ.ಹನುಮಂತಯ್ಯ, ಮಂಜುನಾಥ್, ರಾಜಣ್ಣ, ಸುಜಾತ, ನರಸಿಂಹ ಮೂರ್ತಿ, ಸಂಜೀವ್ಕುಮಾರ್, ಶಿವಾಜಿ, ಶಿವಾನಂದ್, ಮಹಿಳಾ ಘಟಕದ ಡಾ.ಅರುಂಧತಿ, ನಾಗಮಣಿ, ಕೆಂಪಣ್ಣ, ಆಟೋರಾಜು ಇನ್ನಿತರರು ಇದ್ದರು.
Comments are closed.