ಸಮರ್ಪಕವಾಗಿ ಚುನಾವಣಾ ಕರ್ತವ್ಯ ನಿಭಾಯಿಸಿ: ಡೀಸಿ

122

Get real time updates directly on you device, subscribe now.


ತುಮಕೂರು: ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಗೆ ವೇಳಾಪಟ್ಟಿ ಘೋಷಿಸಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಆರ್ಓ, ಎಆರ್ಓ, ಪೊಲೀಸ್, ಜಿಲ್ಲಾ ಪಂಚಾಯತ್, ನೋಡಲ್ ಅಧಿಕಾರಿಗಳು ಸೇರಿದಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ಪರಸ್ಪರ ಸಮನ್ವಯತೆ ಮೂಲಕ ಒಂದು ತಂಡವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಪ್ರೆನ್ಸ್ ಸಭಾಂಗಣದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ- 2023ರ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮ ಕುರಿತು ಚರ್ಚಿಸಲು ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲಾ ಫ್ಲೆಕ್ಸ್, ಬ್ಯಾನರ್ಸ್, ಪೋಸ್ಟರ್ಸ್, ಹೆದ್ದಾರಿ ಫಲಕಗಳ ಜಾಹೀರಾತು, ಗೋಡೆ ಬರಹವನ್ನು ತಕ್ಷಣವೇ ತೆರವುಗೊಳಿಸಲು ಸೂಚನೆ ನೀಡಿದರು.

ವಿವಿಧ ಇಲಾಖೆಗಳ ನಡುವೆ ಸಮನ್ವಯ ಅತಿಮುಖ್ಯ, ಎಲ್ಲಾ ಇಲಾಖೆಯ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಡಿಸಿಪಿ ಹಾಗೂ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ಸಮಸ್ಯೆ ಬಗೆಹರಿಯಬೇಕು. ಪ್ರಾರಂಭವಾಗದಿರುವ ಕಾಮಗಾರಿಗಳನ್ನು ಯಾವ ಸ್ಥಿತಿಯಲ್ಲಿದೆಯೋ ಆ ಸ್ಥಿತಿಯಲ್ಲಿಯೇ ನಿಲ್ಲಿಸಬೇಕು. ಉಚಿತ ಉಡುಗೊರೆ ಪ್ರಕರಣಗಳನ್ನು ನಿಯಮಾನುಸಾರ ದಾಖಲಿಸಬೇಕು. ಆರ್ಓಗಳು ಕೇಂದ್ರಸ್ಥಾನದಲ್ಲಿರುವುದು ಕಡ್ಡಾಯ ಮತ್ತು ಆರ್ಓಗಳು ಇವಿಎಂ ಮ್ಯಾನ್ಯುಯಲ್ ಅನ್ನು ಓದಿ ತಿಳಿದುಕೊಳ್ಳಬೇಕು ಎಂದು ಸೂಚಿಸಿದರು.
ಚುನಾವಣಾ ಪ್ರಚಾರ ಸಂಬಂಧ ಅನುಮತಿ ನೀಡುವಲ್ಲಿ ವಿಳಂಬ ಮಾಡಬಾರದು. ರಾಜಕೀಯ ಮಾಡಬಾರದು, ಮೊದಲು ಬಂದ ಅರ್ಜಿಗೆ ಪ್ರಥಮ ಆದ್ಯತೆ ನೀಡಬೇಕು. ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಸೈಲೆಂಟ್ ಅವರ್ಸ್ ಎಂದು ತಿಳಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ ಬೇಡ ಎಂದು ಸೂಚಿಸಿದರು.

ಇವಿಎಂ ರ್ಯಾಂಡಮೈಷನ್ ಇನ್ನು ಎರಡು ದಿನಗಳಲ್ಲಿ ಮಾಡಲಾಗುತ್ತದೆ. ಆರ್ಓಗಳು ಸ್ಟ್ರಾಂಗ್ ರೂಂ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ ವಾಡ್ ಅವರು ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಚೆಕ್ ಪೋಸ್ಟ್ಗಳಲ್ಲಿ ದಿನದ 24 ಗಂಟೆ ಸಮರ್ಪಕವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಪೊಲೀಸ್ ಠಾಣೆಗಳಲ್ಲಿ ಯಾವುದೇ ರಾಜಕೀಯ ಸಂಬಂಧಿತ ಪೋಸ್ಟರ್ ಗಳಿದ್ದಲ್ಲಿ ತೆಗೆಯುವುದು. ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳೊಡನೆ ಸಂಪರ್ಕ ಅಥವಾ ಒಲವು ಬೇಡ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಪೋಸ್ಟಲ್ ಬ್ಯಾಲೆಟ್ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದು. 10 ಲಕ್ಷ ರೂ. ಮೇಲ್ಪಟ್ಟ ನಗದು ಅಥವಾ ಬಿಲ್ ಇಲ್ಲದೆ ಸಾಗಿಸುವ ವಸ್ತುಗಳ ಕುರಿತು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕು. 24 ಗಂಟೆ ಫೋನ್ ಕರೆ ಸ್ವೀಕರಿಸಬೇಕು. ಆಯುಧಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಇನ್ನೆರಡು ದಿನಗಳೊಳಗಾಗಿ ಮುಗಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಆರ್ಓಗಳೊಂದಿಗೆ ಸಮನ್ವಯತೆ ಸಾಧಿಸಿ ಒಂದು ತಂಡದ ರೀತಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!