ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ: ಎಸ್ಪಿಎಂ

171

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿ ತುಮಕೂರು ಗ್ರಾಮಾಂತರವೂ ಸೇರಿದಂತೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಈ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಸ್ವಾತಂತ್ರವಾಗಿ ಅಧಿಕಾರ ನಡೆಸಲಿದೆ ಎಂದರು.

ದೇಶ ಒಬ್ಬ ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಯ ಕೈಯಲ್ಲಿದೆ. ಹಾಗಾಗಿಯೇ ನಾವು ಸುಭದ್ರ ಮತ್ತು ಸುರಕ್ಷಿತವಾಗಿದ್ದೇವೆ ಎಂಬುದು ಗೊತ್ತಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕಾ ಸಹ ಇಂದು ಮೋದಿ ಅವರ ಸಲಹೆ, ಸಹಕಾರ ಕೇಳುವಂತಹ ಸ್ಥಿತಿಗೆ ತಲುಪಿದೆ. ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಭಾರತದ ಬೆಳವಣಿಗೆಯನ್ನು ಗಮನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರಲ್ಲದೆ ಬಡ, ಮಧ್ಯಮ ವರ್ಗದವರಿಗೂ ಅನುಕೂಲವಾಗುವ ಅನೇಕ ಯೋಜನೆ ನೀಡಿದ್ದಾರೆ. ಹಾಗಾಗಿ ಜನರು ಬಿಜೆಪಿಗೆ ಈ ಬಾರಿ ಹೆಚ್ಚಿನ ಮತ ನೀಡಲಿದ್ದಾರೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರ ನನಗೆ ಹಳೆಯ ಪರಿಚಯ, ಈ ಭಾಗದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೆ ಸಂಸದನಾಗಿಯೂ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಪರಿಚಿತರು, ಹಿತೈಷಿಗಳು ಬಿಜೆಪಿ ಸೇರುತಿದ್ದಾರೆ. ನೂರಾರು ಜನರು ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರುತಿದ್ದಾರೆ, ಮುಂದೆಯೂ ಸೇರಲಿದ್ದಾರೆ. ಗ್ರಾಮಾಂತರದಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದ್ದು, ಬಿ.ಸುರೇಶಗೌಡರ ಗೆಲುವು ಖಚಿತ ಎಂದು ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.

ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ಹಾಲಿ ಶಾಸಕರು ಗೆಲುವು ಸಾಧಿಸಿರುವುದು ನಕಲಿ ಬಾಂಡ್ ಗಳನ್ನು ಹಂಚಿ ಮತ್ತು ಕ್ಷೇತ್ರದ ವಿದ್ಯಾವಂತ ಯುವಕರಿಗೆ ಇನ್ನಿಲ್ಲದ ಆಸೆ, ಆಮಿಷ ತೋರಿಸಿ, ಈಗಾಗಲೇ ಸದರಿ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ಮುಗಿದು ತೀರ್ಪು ಪ್ರಕಟವಾಗಲಿದೆ. ಹಾಲಿ ಶಾಸಕರು ಸುಳ್ಳು ಭರವಸೆ ನಂಬಿ ಅವರೊಂದಿಗೆ ಇದ್ದ ಬಹುತೇಕ ಮುಖಂಡರು ಬಿಜೆಪಿ ಸೇರಿದ್ದಾರೆ. ಮುಂದೆಯೂ ಕೆಲವರು ಸೇರಲಿದ್ದಾರೆ ಎಂದರು.
ಈ ಭಾಗದಲ್ಲಿ ಎರಡು ಬಾರಿ ಶಾಸಕರಾಗಿ, ಐದು ವರ್ಷ ಸಂಸದರಾಗಿ, 10 ವರ್ಷ ಕಾಲ ಒಂದು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿ ಅಪಾರ ಅಭಿಮಾನಿ ಗಳನ್ನು ಮುದ್ದಹನುಮೇಗೌಡರು ಹೊಂದಿದ್ದಾರೆ. ಅವರು ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಿದೆ. ಇದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿಜಯಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಸ್ವಾಮಿ, ಎಪಿಎಂಸಿ ಮಾಜಿ ನಿರ್ದೇಶಕ ನರಸೇಗೌಡ, ಬೋರೆಗೌಡ, ದೊಡ್ಡಯ್ಯ, ಶಾಮಿಯಾನ ಮಾಲಂಗಿ, ಬಾಲಕೃಷ್ಣ ಗೊಲ್ಲಹಳ್ಳಿ, ರೇವಯ್ಯ ಹೆಬ್ಬೂರು, ಮುರುಡೆಗೌಡ ದೊಮ್ಮನಕುಪ್ಪೆ, ನಾಗರಾಜು ಪೊನ್ನಸಂದ್ರ, ಬಸವರಾಜು ಹೆಬ್ಬೂರು, ಗಂಗಣ್ಣ ಕಂಭತ್ತನಹಳ್ಳಿ, ಶಿವಕುಮಾರ್ ಗೌರಿಪುರ, ನಾಗರಾಜು ಕಂಭತ್ತನಹಳ್ಳಿ, ಪುನೀತ್ ಹೆಬ್ಬೂರು, ರಘು ಗರಡಕುಪ್ಪೆ, ಸುರೇಶ್ ಇತರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Get real time updates directly on you device, subscribe now.

Comments are closed.

error: Content is protected !!