ಕುಣಿಗಲ್: ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸಿದ ಕಾಂಗ್ರೆಸ್ನ ಸಂಸದ, ಶಾಸಕರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪಕ್ಷ ತೊರೆದಿದ್ದೇವೆ ಎಂದು ಬಿಜೆಪಿ ಸೇರ್ಪಡೆಗೊಂಡ ಮುಖಂಡ ಕೆಂಪೀರೆಗೌಡ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪತ್ನಿಯನ್ನು ನಿಲ್ಲಿಸಿ ಪಕ್ಷಕ್ಕೋಸ್ಕರ ಶ್ರಮಿಸಿ ಗೆಲ್ಲಿಸಿದ್ದು, ಸಂಸದರ ಮೂರು ಚುನಾವಣೆ, ಶಾಸಕರ ಚುನಾವಣೆ ಸೇರಿದಂತೆ ಗ್ರಾಪಂ ಚುನಾವಣೆಯಲ್ಲಿ ಪಕ್ಷಕ್ಕೆ ನಿಷ್ಠರಾಗಿ ಸೇವೆ ಮಾಡಿದ್ದೇವು. ಆದರೆ ಕಾಂಗ್ರೆಸ್ ನ ಸಂಸದ, ಶಾಸಕರು ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲಿಲ್ಲ. ಎಲ್ಲೆಡೆ ಪಕ್ಷದಲ್ಲೆ ಗುಂಪುಗಾರಿಕೆ ಮಾಡಿ ಮುಖಂಡರಾದವರನ್ನು ವ್ಯವಸ್ಥಿತವಾಗಿ ತುಳಿದಿದ್ದಾರೆ. ಮುಖಂಡರಿಗೆ ಅಗೌರವ ತರುವಂತೆ ನಡೆದುಕೊಂಡಿದ್ದರಿಂದ ಬೇಸತ್ತು ಕಾಂಗ್ರೆಸ್ ತೊರೆದು ಮಾಜಿ ಸಂಸದ ಎಸ್ಪಿಎಂ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ.
ಇದನ್ನು ಸಹಿಸದ ಶಾಸಕರು ಗುತ್ತಿಗೆದಾರನಾದ ನನಗೆ 150 ಕೋಟಿ ಕೆಲಸ ಹಾಕಿಸಿಕೊಟ್ಟೆ, ಪಕ್ಷಕ್ಕೆ ದ್ರೋಹ ಮಾಡಿದ್ದಾರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದು ಸರಿಯಲ್ಲ, ತಾವು ರಾಜಕೀಯಕ್ಕೆ ಬರುವ ಮುಂಚೆಯೆ ಗುತ್ತಿಗೆದಾರರಾಗಿದ್ದು ಮಹಾರಾಷ್ಟ್ರ, ಕೇರಳ ಸೇರಿದಂತೆ ರಾಜ್ಯದ ವಿವಿಧೆಡೆಯಲ್ಲಿ ಕಾಮಗಾರಿ ಮಾಡುತ್ತಿದ್ದೇನೆ. ಯಾವ ಶಾಸಕರಿಗೂ ಒಂದು ರೂ. ಸರ್ಕಾರಿ ಕಾಮಗಾರಿ ಕೊಡಿಸುವ ಶಕ್ತಿ ಇಲ್ಲ. ಎಲ್ಲವೂ ಆನ್ ಲೈನ್ನಲ್ಲೆ ನಡೆಯುತ್ತದೆ. ಜನತೆಗೆ ಇಲ್ಲಸಲ್ಲದ ಸುಳ್ಳು ಹೇಳುವುದನ್ನು, ಚೇಲಾಗಳ ಮೂಲಕ ಕರೆ ಮಾಡಿ ನಿಂದಿಸುವುದನ್ನು ಶಾಸಕರು ಬಿಡಬೇಕು ಎಂದರು.
ಗುತ್ತಿಗೆದಾರ, ಹಾಲಿ ಬಿಜೆಪಿ ಮುಖಂಡ ನಾರಾಯಣ ಮಾತನಾಡಿ, ತಾವು ಮೊದಲಿನಿಂದಲೂ ಕಟ್ಟಾ ಕಾಂಗ್ರೆಸಿಗರಾಗಿದ್ದು ಗ್ರಾಪಂ ಚುನಾವಣೆಯಲ್ಲಿ ನಮಗೆ ಅನ್ಯಾಯ ಮಾಡಿದ್ದರೂ ಸಹಿಸಿಕೊಂಡು ಹೋಗುತ್ತಿದ್ದು, ಬೇರೆ ಪಕ್ಷದ ಮುಖಂಡರ ಜೊತೆ ಮಾತನಾಡಿದರೆ ಅಷ್ಟಕ್ಕೆ ಸಂಸದರು ಬರಿ ಕಣ್ಣಿನಲ್ಲೆ ದರ್ಪದಿಂದ ಮಾತನಾಡಿಸಿ ನಿಂದಿಸಿದರೆ, ಶಾಸಕರು ಕುಟುಂಬದ ಸದಸ್ಯರ ಬಳಿ ಹೋಗಿ ಬೆದರಿಕೆ ಹಾಕುತ್ತಾರೆ. ಇದು ತಾಲೂಕಿನಲ್ಲಿ ನನಗೊಬ್ಬನಿಗೆ ಅಲ್ಲ, ಎಲ್ಲಾ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೂ ಆಗುತ್ತಿದೆ. ಇವರ ದಬ್ಬಾಳಿಕೆ, ದೌರ್ಜನ್ಯಕ್ಕೆ ಬೇಸತ್ತು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದು ಶಾಸಕರ ದಬ್ಬಾಳಿಕೆತನದಿಂದ ಈ ಬಾರಿ ತಾಲೂಕಿನಲ್ಲಿ ಕಾಂಗ್ರೆಸ್ ಅವನತಿ ಹೊಂದಲಿದೆ ಎಂದರು. ವಕೀಲರಾದ ಶಿವಶಂಕರ್, ಮುಖಂಡರಾದ ಬೈರಪ್ಪ, ಶಿವಣ್ಣ ಇತರರು ಇದ್ದರು.
Comments are closed.