ತುಮಕೂರು: ಎಲ್ಲಾ ಕಾಲದಲ್ಲೂ ಸಾಹಿತ್ಯ ವ್ಯವಸ್ಥೆಯ ಲೋಪಗಳಿಗೆ ಹೊಂದಿಕೊಳ್ಳದೆ ಅರಿವಿನ ಹೆಜ್ಜೆಯನ್ನಿಟ್ಟು ಪರಂಪರೆಯ ಆಚೆಗಿನ ಮಾನವೀಯತೆ ಮೆರೆಯಬೇಕು ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗಂಗಾಧರ.ಬಿ. ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಡಿವಿಜಿ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ಪರಿಕಲ್ಪನೆ: ಕನ್ನಡ ಸಾಹಿತ್ಯ- ವರ್ತಮಾನದ ಅನುಸಂಧಾನ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪರಂಪರೆ ಮನುಷ್ಯನನ್ನುಗೌಣ ಮಾಡುತ್ತದೆ. ಮಾನವೀಯತೆ ಮನುಷ್ಯನ ನಿಜ ವ್ಯಕ್ತಿತ್ವ ತಿಳಿಸುತ್ತದೆ. ಪರಂಪರೆ ಮಾನವೀಯತೆ ಅನುಸರಿಸಿದಾಗ ವರ್ತಮಾನವನ್ನು ಸರಿಯಾದ ರೀತಿಯಲ್ಲಿ ಗ್ರಹಿಸಿಬಹುದು. ಸಾಹಿತ್ಯ ಬದುಕು ರೂಪಿಸುವ ವಾಸ್ತವವಾಗಬೇಕು. ಅಲ್ಲಿ ಸತ್ಯಶೋಧನೆಯ ಶ್ರಮ, ಗುರುತು ಕಂಡರೆ ಪೀಳಿಗೆಗಳು ಇತಿಹಾಸದ ವಸ್ತುವನ್ನು ಹುಡುಕಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಧುರೈನ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎಂ.ಎನ್. ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡ ಸಾಹಿತ್ಯದ ಮೆರುಗು, ವೈಭವ, ಸವಾಲುಗಳು, ನವ ಸಾಹಿತ್ಯದ ಮೆಟ್ಟಿಲುಗಳು, ಅನುಸರಣೀಯ ಹೆಜ್ಜೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ತಿಳಿಸುವು ಕೆಲಸ ಮಾಡಬೇಕಾದದ್ದು ಶಿಕ್ಷಕನ ಕರ್ತವ್ಯಎಂದು ತಿಳಿಸಿದರು.
ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ.ಅಣ್ಣಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿ, ಕನ್ನಡ ಸಾಹಿತ್ಯದ ಓದು ಬರಹ ಭಿನ್ನ ಪರಿಧಿಯನ್ನು ಸರಿಸಿ ಸಮಾನತೆಯ ಸಮಾಜ ರೂಪಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯ ವಿಷಯದಲ್ಲಿ ಹೆಚ್ಚು ಸಂಶೋಧನೆ ಮಾಡಿದಾಗ ಮಾತ್ರ ಸಾಹಿತ್ಯಇತಿಹಾಸದ ನಿಜ ಸಂದರ್ಶನವಾಗುವುದು ಎಂದರು.
ಬೆಂಗಳೂರಿನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಅನ್ನದಾನೇಶ್ ಪ್ರಾಚೀನ ಕನ್ನಡ ಸಾಹಿತ್ಯ ರಾಜಸತ್ತೆಯ ಸವಾಲು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ರಘುರಾಮ್ ಮಧ್ಯ ಕಾಲೀನ ಕನ್ನಡ ಸಾಹಿತ್ಯ: ಭಕ್ತಿ ಅನುಭಾವ ವಿಚಾರಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎಂ.ಗಂಗಾಧರಯ್ಯ, ಪ್ರಾಧ್ಯಾಪಕ ಡಾ.ನಾಗಭೂಷಣ್ ಭಾಗವಹಿಸಿದ್ದರು.
Comments are closed.