ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಗುಬ್ಬಿ ಶ್ರೀನಿವಾಸ್

78

Get real time updates directly on you device, subscribe now.


ಬೆಂಗಳೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ಪಕ್ಷ ತೊರೆದು ಗುರುವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಶಾಲು ಮತ್ತು ಬಾವುಟ ನೀಡುವ ಮೂಲಕ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು.

ಜೆಡಿಎಸ್ನಿಂದ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದ ಶ್ರೀನಿವಾಸ್, ಕೆಲವು ತಿಂಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ನೂರಾರು ಬೆಂಬಲಿಗರೊಂದಿಗೆ ಗುರುವಾರ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಗುಬ್ಬಿ ಶ್ರೀನಿವಾಸ್ ಅವರ ಸೇರ್ಪಡೆಯಿಂದ ತುಮಕೂರು ಮಾತ್ರವಲ್ಲ ಹಲವು ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ಬಂದಿ ಅವರೊಬ್ಬ ನಿಷ್ಠಾವಂತ ಜನಸೇವಕ, ಅವರು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿ ಬಂದಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿದ್ದ ಹಲವರು ಸೇರಿದಂತೆ ಆ ಪಕ್ಷದ 37 ಮಂದಿ ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಎಲ್ಲರನ್ನೂ ಹಂತ ಹಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಮಾತನಾಡಿ, ಆರಂಭದಲ್ಲಿ ಕಾಂಗ್ರೆಸ್ ನಲ್ಲಿದ್ದ ಶ್ರೀನಿವಾಸ್ ಈಗ ಪಕ್ಷಕ್ಕೆ ಮರಳಿದ್ದಾರೆ. ಜೆಡಿಎಸ್ ಎಂದರೆ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರ ಸ್ವಾಮಿ ಅವರ ಕುಟುಂಬದ ನಿರ್ಧಾರಗಳಿಗೆ ಸೀಮಿತವಾದ ಪಕ್ಷ, ಅವರ ನಿರ್ಧಾರಗಳನ್ನು ಮೀರಿದರೆ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಿದರೆ ಅಂತಹವರನ್ನು ಆ ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಾರೆ. ಅವಮಾನ ಮಾಡಿ ಪಕ್ಷದಿಂದ ಹೊರಹಾಕುತ್ತಾರೆ. ನನಗೆ ಅದೇ ರೀತಿ ಮಾಡಿದ್ದರು, ಈಗ ಶ್ರೀನಿವಾಸ್ ಅವರಿಗೂ ಹಾಗೆಯೇ ಮಾಡಿದ್ದಾರೆ ಎಂದು ಹೇಳಿದರು.

ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಎದ್ದಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಕಾರಣದಿಂದ ಜೆಡಿಎಸ್ ಮತ್ತು ಬಿಜೆಪಿಯ ಹಲವರು ಕಾಂಗ್ರೆಸ್ ಸೇರುತ್ತಿದ್ಧಾರೆ ಎಂದರು.
ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಎಚ್.ಡಿ.ಕುಮಾರ ಸ್ವಾಮಿ ಅವರು ನನ್ನನ್ನು ಜೆಡಿಎಸ್ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದರು, ನಾನು ಶಾಸಕನಾಗಿರುವಾಗಲೇ ಬೇರೆ ಅಭ್ಯರ್ಥಿಯನ್ನು ಘೋಷಿಸಿದ್ದರು. ಅವರಿಂದ ಆದ ಅವಮಾನಕ್ಕೆ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ. ನಾನು ಮೂಲತಃ ಕಾಂಗ್ರೆಸ್ ಪಕ್ಷದವನು. ಈಗ ಬಿಜೆಪಿ ಸೇರಲು ಇಷ್ಟ ಆಗಲಿಲ್ಲ, ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದರು.

Get real time updates directly on you device, subscribe now.

Comments are closed.

error: Content is protected !!