ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು- ಹೈಕೋರ್ಟ್ ತೀರ್ಪು- ತೀರ್ಪಿಗೆ ತಿಂಗಳ ತಡೆಯಾಜ್ಞೆ

84

Get real time updates directly on you device, subscribe now.


ತುಮಕೂರು: ತುಮಕೂರು ಗ್ರಾಮಾಂತರದ ರಾಜಕೀಯ ಇಡೀ ರಾಜ್ಯದ ಗಮನ ಸೆಳೆಯುತ್ತೆ. ಇಲ್ಲಿನ ಜೆಡಿಎಸ್, ಬಿಜೆಪಿಯ ಇಬ್ಬರು ನಾಯಕರ ಮಧ್ಯದ ರಾಜಕೀಯ ಕದನ ರಣರೋಚಕ, ನಾನಾ ನೀನಾ ಎಂಬ ಕಾದಾಟ, ಸೇರಿಗೆ ಸವ್ವಾ ಸೇರು ಎಂಬ ಪ್ರತಿಷ್ಠೆ, ತೋಳ್ಬಲ, ಹಣ ಬಲ, ಜನ ಬಲದ ಪೈಪೋಟಿ, ಯಾರಿಗೆ ಯಾರು ಕಮ್ಮಿ ಇಲ್ಲ ಎಂಬಂತೆ ವಾಗ್ಯುದ್ಧ ಮಾಡುತ್ತಾ ಚುನಾವಣೆಯನ್ನು ದೊಡ್ಡ ಯುದ್ಧದಂತೆ ನಡೆಸುವ ನಾಯಕರು ಗೌರಿಶಂಕರ್ ಮತ್ತು ಸುರೇಶ್ಗೌಡ.
ಇದೀಗ 2023 ರ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಂತೆಯೇ ಚುನಾವಣಾ ಅಕ್ರಮಗಳ ಆರೋಪದಡಿ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಕಲಬುರ್ಗಿ ಪೀಠದಿಂದ ಪ್ರಕಟಿಸಿದೆ. ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಸುರೇಶ್ಗೌಡರ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು.
ತೀರ್ಪಿಗೆ ಮಧ್ಯಂತರ ತಡೆ
ತೀರ್ಪು ಹೊರಬೀಳುತ್ತಲೇ, ಗೌರಿಶಂಕರ್ ಪರ ವಕೀಲ ಆರ್. ಹೇಮಂತ ರಾಜ್, ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೀರ್ಪಿಗೆ ತಡೆ ನೀಡಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.
ತಜ್ಞರ ಅಭಿಮತ ಏನು?
ಆಯ್ಕೆಯನ್ನು ಹೈಕೋರ್ಟ್ ಅನೂರ್ಜಿತಗೊಳಿಸಿರುವ ಕಾರಣ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಗೌರಿಶಂಕರ್ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು. ಹಾಗಾಗಿ, ಈಗ ಗೌರಿಶಂಕರ್ ಮುಂದಿರುವ ಆಯ್ಕೆ ಎಂದರೆ 30 ದಿನಗಳ ಒಳಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ಹೈಕೋರ್ಟ್ ತೀರ್ಪಿಗೆ ತಡೆ ಪಡೆದರೆ ಮಾತ್ರ ಗೌರಿಶಂಕರ್ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

Get real time updates directly on you device, subscribe now.

Comments are closed.

error: Content is protected !!