ಎಲ್ಲೆಡೆ ಅದ್ದೂರಿ ಶ್ರೀರಾಮ ನವಮಿ ಆಚರಣೆ

ಶ್ರೀರಾಮ, ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜೆ- ಪಾನಕ ಫಲಹಾರ ವಿತರಣೆ- ಬೈಲಾಂಜನೇಯ ಸ್ವಾಮಿಯ ಅದ್ದೂರಿ ರಥೋತ್ಸವ

147

Get real time updates directly on you device, subscribe now.


ತುಮಕೂರು: ತುಮಕೂರಿನ ಹಲವು ಶ್ರೀರಾಮ ಹಾಗೂ ಆಂಜನೇಯ ಸ್ವಾಮಿಯ ದೇವಾಲಯಗಳಲ್ಲಿ ಶ್ರೀರಾಮ ನವಮಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀರಾಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಗುರುವಾರ ಮುಂಜಾನೆಯಿಂದಲೇ ಶ್ರೀರಾಮನಾಮ ಸ್ಮರಣೆ ಮೊಳಗಿದವು. ನಗರದ ಹನುಮಂತಪುರದಲ್ಲಿ ಶ್ರೀರಾಮ ನವಮಿಯಂದು ಶ್ರೀಬೈಲಾಂಜನೇಯ ಸ್ವಾಮಿ ಪುಷ್ಪ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಹಸ್ರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡು ದವನ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.

ನಗರದ ಬಾರ್ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನಮವಿ ಅಂಗವಾಗಿ ಶ್ರೀಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿದವು.
ಅದೇ ರೀತಿ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ, ಶೆಟ್ಟಿಹಳ್ಳಿ ಗೇಟ್ ನಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಸೀತಾರಾಮ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧೆಡೆ ಇರುವ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿದ್ದು, ಶ್ರೀರಾಮನಮಮಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ದೇವಾಲಯಗಳಲ್ಲಿ ಪೂಜೆಯ ನಂತರ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಂಚಲಾಯಿತು.
ಕೆಲವು ಸಂಘ ಸಂಸ್ಥೆಗಳು, ಯುವಕ ಸಂಘಗಳು ಸಹ ಶ್ರೀರಾಮನಮವಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಹಬ್ಬದ ವಿಶೇಷವಾಗಿ ಪಾನಕ, ಮಜ್ಜಿಗೆ, ಹೆಸರು ಬೇಳೆ, ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ಸಹ ಕಂಡು ಬಂತು.
ಜಿಲ್ಲೆಯ ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ಹಾಗೂ ಪಾವಗಡ ತಾಲ್ಲೂಕುಗಳಲ್ಲೂ ಸಹ ಶ್ರೀರಾಮೋತ್ಸವ ಆಚರಿಸಲಾಗಿದ್ದು, ಭಕ್ತರು ದೇವಾಲಯಗಳ ಮುಂದೆ ಪೆಂಡಾಲ್ ಹಾಕಿ ಪಾನಕ, ಮಜ್ಜಿಗೆ, ಕೋಸಂಬರಿ ಸೇರಿದಂತೆ ಪ್ರಸಾದ ವಿನಿಯೋಗ ಮಾಡಿ ಪುನೀತರಾದರು.

ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲೂ ಸಹ ಹನುಮಂತನ ದೇವಾಲಯ, ಶ್ರೀರಾಮ ದೇಗುಲಗಳಲ್ಲಿ ಜನರು ಶ್ರೀರಾಮೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

Get real time updates directly on you device, subscribe now.

Comments are closed.

error: Content is protected !!