ತುಮಕೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 102074 ಪುರುಷರು, 104023 ಮಹಿಳೆಯರು ಹಾಗೂ 18 ಇತರೆ ಸೇರಿದಂತೆ ಒಟ್ಟು 206155 ಮತದಾರರಿದ್ದು, ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸಲು 226 ಮತಗಟ್ಟೆ ಸ್ಥಾಪಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೋಟೆಲ್ ಶಿವಪ್ಪ ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಡಲು ತುಮಕೂರು ಗ್ರಾಮಾಂತರ ಕಸಬಾ ಪಶ್ಚಿಮ ಹೋಬಳಿಯ ಮಲ್ಲಸಂದ್ರ, ಊರ್ಡಿಗೆರೆ ಹೋಬಳಿ ಜಾಸ್ ಟೋಲ್ ಕ್ಯಾತ್ಸಂದ್ರ ಹಾಗೂ ಕುರುವಲು, ಗೂಳೂರು ಹೋಬಳಿ ಹೊನ್ನುಡಿಕೆ ಹಾಗೂ ಬೆಳ್ಳಾವಿ ಹೋಬಳಿ ದೊಡ್ಡವೀರನಹಳ್ಳಿ ಸೇರಿದಂತೆ 5 ಕಡೆ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಅಕ್ರಮ ಹಣ ಸಾಗಾಣಿಕೆ, ಮದ್ಯ ಸಾಗಾಣಿಕೆ, ಮತ್ತಿತರ ವಸ್ತುಗಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು 5 ಫ್ಲೈಯಿಂಗ್ ಸ್ಕ್ವಾಡ್ ತಂಡ, 5 ಎಸ್ಎಸ್ಟಿ ತಂಡ, 1 ವೀಡಿಯೋ ಸರ್ವೇಲೆನ್ಸ್ ತಂಡ ಹಾಗೂ 1 ಅಕೌಂಟಿಂಗ್ ತಂಡ ರಚಿಸಿ ನೇಮಕಾತಿ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸೇರಿ ಚುನಾವಣಾ ಅಕ್ರಮ ಕಂಡು ಬಂದಲ್ಲಿ ದೂ.0816- 2006574ಕ್ಕೆ ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಅಥವಾ ಮೊಬೈಲ್ ಆಪ್ ಮೂಲಕವೂ ದೂರು ನೀಡಬಹುದಾಗಿದೆ ಎಂದು ಹೇಳಿದರು.
ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 10 ರಂದು ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲಾ ಮತದಾರರ ಮನೆಗಳಿಗೆ ವೋಟರ್ ಸ್ಲಿಪ್ ಮತ್ತು ವೋಟರ್ ಗೈಡ್ ಗಳನ್ನು ವಿತರಿಸಲಾಗುವುದು. ಈ ವಿಧಾನ ಸಭಾ ಕ್ಷೇತ್ರದಲ್ಲಿ 2562 ವಿಕಲಚೇನತರು ಹಾಗೂ 80 ವರ್ಷ ಮೇಲ್ಪಟ್ಟ 5265 ಗೈರು ಮತದಾರರನ್ನು ಗುರುತಿಸಲಾಗಿದ್ದು, ಗೈರು ಮತದಾರರು ಇಚ್ಛೆ ಪಟ್ಟಲ್ಲಿ ಅಂಚೆ ಮತ ಪತ್ರದ ಮೂಲಕ ಗೌಪ್ಯವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿರುವ 206155 ಮತದಾರರ ಪೈಕಿ 4239 ಯುವ ಮತದಾರರು ಹಾಗೂ 101 ಸೇವಾ ಮತದಾರರಿದ್ದು, ಮತದಾರರು ಮತ ಚಲಾಯಿಸಲು ಅನುವಾಗುವಂತೆ ಎಲ್ಲಾ 226 ಮತಗಟ್ಟೆಗಳಲ್ಲಿ ವಿದ್ಯುತ್, ಶೌಚಾಲಯ, ಕುಡಿಯುವ ನೀರು, ರ್ಯಾಂಪ್ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿವೈಎಸ್ಪಿ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪೊಲೀಸ್ ನೋಡಲ್ ಅಧಿಕಾರಿ ಹೆಚ್.ಶ್ರೀನಿವಾಸ್ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಮಾರ್ಚ್ 10 ರಿಂದ ದಾಖಲೆ ಇಲ್ಲದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ನಗದು, ಗಾಂಜಾ, ಮದ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2 ದಿನಗಳ ಹಿಂದೆ ಯಲ್ಲಾಪುರ ಚೆಕ್ಪೋಸ್ಟ್ ನಲ್ಲಿ 112 ಸೀರೆಗಳನ್ನು ಜಪ್ತಿ ಮಾಡಲಾಗಿದೆಯಲ್ಲದೆ, ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 31,409 ರೂ. ಮೌಲ್ಯದ 68.850 ಲೀಟರ್ ಮದ್ಯ, ಹೆಬ್ಬೂರಿನಲ್ಲಿ 4,950 ರೂ. ಮೌಲ್ಯದ 15.760 ಲೀಟರ್, ತುಮಕೂರು ಗ್ರಾಮಾಂತರದಲ್ಲಿ 8728 ರೂ. ಮೌಲ್ಯದ 16.920 ಲೀಟರ್, ಬೆಳ್ಳಾವಿಯಲ್ಲಿ 386.43 ರೂ. ಮೌಲ್ಯದ 990 ಮಿ.ಲೀ, ತಿಲಕ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ 3,126 ರೂ. ಮೌಲ್ಯದ 8.10 ಲೀಟರ್ ಮದ್ಯ ಹಾಗೂ ಹೆಬ್ಬೂರಿನಲ್ಲಿ 65,000 ರೂ. ಮೌಲ್ಯದ 2.235 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಸಿದ್ದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪಿ.ಓಂಕಾರಪ್ಪ, ಕ್ಯಾತ್ಸಂದ್ರ ಸರ್ಕಲ್ ಇನ್ಸ್ಪೆಕ್ಟರ್ ಚೆನ್ನೇಗೌಡ ಹಾಜರಿದ್ದರು.
ತುಮಕೂರು ಗ್ರಾಮಾಂತರದಲ್ಲಿ 226 ಮತಗಟ್ಟೆ ಸ್ಥಾಪನೆ
Get real time updates directly on you device, subscribe now.
Prev Post
Comments are closed.